

ಆನೇಕಲ್: ತಾಲೂಕಿನ ತೆಲಗರಹಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಮೂಲಸೌಕರ್ಯವಿಲ್ಲ ಎಂದು ಆರೋಪಿಸಿ ಸೋಮವಾರ ಕ್ವಾರಂಟೈನ್‌ನಲ್ಲಿದ್ದ ವಲಸಿಗರು ಕಟ್ಟಡದ ಮಹಡಿ ಮೇಲೇರಿ ಪ್ರತಿಭಟನೆ ನಡೆಸಿದರು.
3 ದಿನದ ಹಿಂದೆ ದೆಹಲಿಯಿಂದ ರೈಲಿನಲ್ಲಿ ಬೆಂಗಳೂರಿಗೆ ಬಂದಿದ್ದ 152 ವಲಸಿಗರನ್ನು ವಣಕನಹಳ್ಳಿ ಗ್ರಾಪಂ ವ್ಯಾಪ್ತಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ನೀರು, ಆಹಾರ ಸೇರಿ ಮೂಲಸೌಕರ್ಯ ಒದಗಿಸುವಲ್ಲಿ ಅಧಿಕಾರಿಗಳು ವಿಲರಾಗಿದ್ದಾರೆ ಎಂದು ಕ್ವಾರಂಟೈನ್ ವಲಸಿಗರು ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ನಾಗರಿಕರು, ಮಕ್ಕಳೂ ಇದ್ದಾರೆ. ನಮ್ಮ ಕಡೆ ಸರಿಯಾದ ಗಮನ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೂಲಸೌಕರ್ಯ ಒದಗಿಸಿ ಇಲ್ಲವಾದರೆ ಮನೆಗೆ ಕಳುಹಿಸಿಕೊಡಿ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ತಹಸೀಲ್ದಾರ್ ಮನವೊಲಿಕೆ: ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಮಹದೇವಯ್ಯ ಹಾಗೂ ಅಧಿಕಾರಿಗಳು ಮೂಲಸೌಕರ್ಯ ಕಲ್ಪಿಸುವ ಭರವಸೆ ನೀಡಿ ವಲಸಿಗರ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದರು.