ಅಂತರ್ಜಾತಿ ವಿವಾಹ ತಂದ ಆಪತ್ತು, ಮಗಳು ಅನ್ಯಜಾತಿ ಯುವಕನೊಂದಿಗೆ ಪ್ರೇಮವಿವಾಹ, ಸಂಪ್‌ಗೆ ಬಿದ್ದು ಪಾಲಕರು ಆತ್ಮಹತ್ಯೆ

28 Nela ph 02 Sucide Parents
Published on

ನೆಲಮಂಗಲ: ಮಗಳು ಅಂತರ್ಜಾತಿ ಯುವಕನನ್ನು ವಿವಾಹವಾದಳು ಎಂಬ ಕಾರಣಕ್ಕೆ ಮನನೊಂದ ದಂಪತಿ ನೀರಿನ ಸಂಪ್‌ಗೆ ಇಳಿದು ತೊಟ್ಟಿಯ ಬಾಗಿಲು ಮುಚ್ಚಿಕೊಂಡು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಂಗಳೂರು ಉತ್ತರ ತಾಲೂಕಿನ ಹ್ಯಾರೋಕೇತನಹಳ್ಳಿಯಲ್ಲಿ ಅವಘಡ ಸಂಭವಿಸಿದ್ದು, ಗ್ರಾಮದ ನಿವಾಸಿ ಶಿವಲಿಂಗಪ್ಪ (51) ಚಂದ್ರಕಲಾ (45) ಮೃತರು.

ಮೂಲತಃ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಹಾರನಹಳ್ಳಿ ಗ್ರಾಮದವರಾಗಿದ್ದು, ದಂಪತಿ 13 ವರ್ಷಗಳ ಹಿಂದೆ ಹ್ಯಾರೋಕೇತನಹಳ್ಳಿ ಲಕ್ಷ್ಮಣ್ ಸಿಂಗ್ ಬಡಾವಣೆಯಲ್ಲಿ ಮನೆ ನಿರ್ಮಿಸಿಕೊಂಡು ವಾಸವಿದ್ದರು.

ಗ್ರಾಮದ ಮುಖ್ಯರಸ್ತೆಯಲ್ಲಿ ಅಂಗಡಿ ಇಟ್ಟುಕೊಂಡಿದ್ದ ದಂಪತಿಗೆ ಇಬ್ಬರು ಪುತ್ರಿಯರಿದ್ದರು. ಪದವಿ ಮುಗಿಸಿದ್ದ ಹಿರಿಯ ಮಗಳು 8ನೇ ಮೈಲಿ ಬಳಿ ಖಾಸಗಿ ಸಂಸ್ಥೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದಾಗ ದಾವಣಗೆರೆ ಮೂಲದ ಯುವಕನ ಜತೆ ಸ್ನೇಹವಾಗಿ ಪ್ರೇಮಕ್ಕೆ ತಿರುಗಿತ್ತು.

ಪ್ರೇಮ ವಿಚಾರ ತಿಳಿದ ಪಾಲಕರು ಮಗಳಿಗೆ ತಿಳಿವಳಿಕೆ ಹೇಳಿ ಕೆಲಸ ಬಿಡಿಸಿದ್ದರು. ಅಲ್ಲದೆ ಪ್ರಿಯಕರನಿಗೂ ಬುದ್ದಿ ಹೇಳಿದ್ದರು. 5 ತಿಂಗಳು ಮನೆಯಲ್ಲಿಯೇ ಇದ್ದ ಯುವತಿ ತಿಂಗಳಿನಿಂದ ಮತ್ತೆ ಕೆಲಸಕ್ಕೆ ಹೋಗುತ್ತಿದ್ದಳು. ಪಾಲಕರು ಮಗಳಿಗೆ ವರನ ಅನ್ವೇಷಣೆಯಲ್ಲಿ ತೊಡಗಿದ್ದರು. ಆದರೆ ಪ್ರೀತಿಸುತ್ತಿದ್ದ ಯುವಕನನ್ನೇ ಗುರುವಾರ ವಿವಾಹವಾಗಿರುವ ವಿಚಾರ ತಿಳಿದ ದಂಪತಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡೇತ್‌ನೋಟ್ ಬರೆದಿಟ್ಟ ದಂಪತಿ: ಗುರುವಾರ ಬೆಳಗ್ಗೆ ಕೆಲಸಕ್ಕೆ ತೆರಳಿದ್ದ ಪುತ್ರಿ ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಪಾಲಕರು ಮೊಬೈಲ್ ಕರೆ ಮಾಡಿದ್ದರೂ ಸಂಪರ್ಕ ಸಾಧ್ಯವಾಗಿರಲಿಲ್ಲ. ರಾತ್ರಿ ವೇಳೆ ಪಾಲಕರ ಮೊಬೈಲ್‌ಗೆ ಕರೆ ಮಾಡಿದ್ದ ಯುವತಿ, ಪ್ರೀತಿಸಿದ್ದ ಯುವಕನ ಜತೆ ಧರ್ಮಸ್ಥಳದಲ್ಲಿ ವಿವಾಹವಾಗಿರುವ ವಿಚಾರ ತಿಳಿಸಿದ್ದಳು. ಬೇಸರಗೊಂಡ ದಂಪತಿ ಕಿರಿಯ ಮಗಳು ಮಲಗುವವರೆಗೂ ಕಾದಿದ್ದು ನಂತರ ಮನೆಯ ಮುಂಭಾಗದಲ್ಲಿದ್ದ ನೀರಿನ ಸಂಪ್‌ಗೆ ಇಳಿದು ತೊಟ್ಟಿಯ ಬಾಗಿಲು ಮುಚ್ಚಿಕೊಂಡು ಪ್ರಾಣ ಬಿಟ್ಟಿದ್ದಾರೆ ಎನ್ನಲಾಗಿದೆ.

ಶುಕ್ರವಾರ ಬೆಳಗ್ಗೆ ಮನೆಯಲ್ಲಿ ಪಾಲಕರಿಲ್ಲದ್ದನ್ನು ಕಂಡ ಕಿರಿಯ ಪುತ್ರಿ ಅಕ್ಕಪಕ್ಕದವರ ನೆರವಿನಿಂದ ಹುಡುಕಾಟ ನಡೆಸಿದ್ದಳು. ಕೊನೆಗೆ ಅನುಮಾನಗೊಂಡ ಸ್ಥಳೀಯರು ನೀರಿನ ಸಂಪಿನಲ್ಲಿ ನೋಡಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.

ಮಗಳು ಅಂತರ್ಜಾತಿ ಯುವಕನ ಜತೆ ವಿವಾಹ ಮಾಡಿಕೊಂಡಿರುವ ವಿಚಾರವನ್ನು ಯಾರಿಗೂ ಹೇಳದಂತೆ ಕಿರಿಯ ಮಗಳಿಗೆ ತಿಳಿಸಿದ್ದ ದಂಪತಿ ತಡರಾತ್ರಿ 1 ಗಂಟೆಯವರೆಗೂ ಎಚ್ಚರವಾಗಿದ್ದ್ದು ಕಿರಿಯ ಪುತ್ರಿ ಮಲಗಿದ ನಂತರ ನಮ್ಮ ಸಾವಿಗೆ ನಾವೇ ಕಾರಣ, ಯಾರೂ ಜವಾಬ್ದಾರರಲ್ಲ ಎಂಬುದಾಗಿ ಡೆತ್‌ನೋಟ್ ಬರೆದಿಟ್ಟಿದ್ದಾರೆ. ತಾವು ಇಬ್ಬರಿಗೆ ಕೊಡಬೇಕಿರುವ 7 ಸಾವಿರ ರೂ. ಸಾಲ ಹಾಗೂ ಬ್ಯಾಂಕ್‌ನ ಖಾತೆಯಲ್ಲಿರುವ ಹಣ ಹಾಗೂ ಎಟಿಎಂ ಪಿನ್‌ಕೋಡ್ ಸಂಖ್ಯೆ ವಿವರಗಳನ್ನು ಡೆತ್ ನೋಟ್‌ನಲ್ಲಿ ಬರೆದಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net