

ತುಮಕೂರು: ಕರೊನಾ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮಾಸ್ಕ್ ಜತೆಗೆ ಸ್ಯಾನಿಟೈಸರ್‌ಗೆ ಬೇಡಿಕೆ ಶುರುವಾಗಿದೆ. ಶಾಲಾ-ಕಾಲೇಜುಗಳಲ್ಲಿ ಕರೊನಾ ಜಾಗೃತಿ ಮೂಡಿಸುವ ಬದಲು ಮಾಸ್ಕ್ ಹಾಗೂ ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸುವಂತೆ ಮಕ್ಕಳ ಮೇಲೆ ಒತ್ತಡ ಹೇರುತ್ತಿರುವುದರಿಂದ ಅಭಾವ ಸೃಷ್ಟಿಯಾಗಿದೆ.
ಜನ ಮರಳೊ, ಜಾತ್ರೆ ಮರಳೋ ಎಂಬಂತೆ...ಮೆಡಿಕಲ್ ಶಾಪ್‌ಗಳಲ್ಲಿ ಮಾಸ್ಕ್ , ಸ್ಯಾನಿಟೈಸರ್‌ಗೆ ದುಪ್ಪಟ್ಟು ಬೇಡಿಕೆ ಹೆಚ್ಚಿದೆ. ಜನರ ಬೇಡಿಕೆಗೆ ತಕ್ಕಂತೆ ಮಾಸ್ಕ್, ಸ್ಯಾನಿಟೈಸರ್ ಪೂರೈಸಲು ಆಗುತ್ತಿಲ್ಲ. ಮಾಸ್ಕ್ ಬೇಡಿಕೆ ಹೆಚ್ಚುತ್ತಿದ್ದಂತೆ ದುಪ್ಪಟ್ಟು ದರಕ್ಕೆ ಮಾರಾಟ ಮಾಡಿ ಸಾರ್ವಜನಿಕರನ್ನು ವಂಚಿಸುತ್ತಿರುವ ಪ್ರಕರಣಗಳು ನಡೆದಿವೆ. ಜಿಲ್ಲಾಡಳಿತವೂ ಮಾಸ್ಕ್ ಕೃತಕ ಅಭಾವ ಸೃಷ್ಟಿಸದಂತೆ ಹಾಗೂ ದುಪ್ಪಟ್ಟು ದರಕ್ಕೆ ಮಾರದಂತೆ ಎಚ್ಚರಿಕೆ ಸಹ ನೀಡಿದೆ.
ತಲಾ 20 ಸಾವಿರ ದಂಡ: ಮಾಸ್ಕ್ ಮಾರಾಟ ಸಂದರ್ಭದಲ್ಲಿ ಜಿಎಸ್‌ಟಿ ಬಿಲ್ ನೀಡದೆ ಮಾರಾಟ ಮಾಡಿದ ಕೆಲವು ಮೆಡಿಕಲ್ ಶಾಪ್‌ಗಳಿಗೆ ತಲಾ 20 ಸಾವಿರ ರೂ., ದಂಡ ವಿಧಿಸಿರುವ ಪ್ರಕರಣಗಳು ತುಮಕೂರು ನಗರದಲ್ಲಿ ನಡೆದಿವೆ. ಹಾಗಾಗಿ, ಡಿಸ್ಟ್ರಿಬ್ಯೂಟರ್‌ಗಳು ಸಹ ಬಹಳ ಎಚ್ಚರಿಕೆವಹಿಸಿದ್ದಾರೆ.
ಸ್ಯಾನಿಟೈಸರ್ ನೋ ಸ್ಟಾಕ್: ಕರೊನಾ ಆತಂಕ ಈಗ ಸ್ವಚ್ಛತೆಗೆ ಒತ್ತುಕೊಡುವಂತೆ ಮಾಡಿದೆ. ಫ್ಯಾಷನ್ ರೀತಿಯಲ್ಲಿ ಜನ ಸ್ಯಾನಿಟೈಸರ್ ಖರೀದಿಗೆ ಮುಗಿಬಿದ್ದಿದ್ದಾರೆ. ಹಿಮಾಲಯ, ಲೈಫ್‌ಬಾಯ್, ಸಂತೂರ್, ಡೆಟಾಲ್ ಸ್ಯಾನಿಟೈಸರ್‌ಗಳಿಗೆ ಬೇಡಿಕೆಯಿದ್ದು ಸದ್ಯಕ್ಕೆ ಜಿಲ್ಲೆಯಲ್ಲಿ ಲಭ್ಯತೆ ಇಲ್ಲ. ಬೆಂಗಳೂರಿನಿಂದ ಸ್ಯಾನಿಟೈಸರ್‌ಗಳನ್ನು ತರಿಸಿ ಮಾರಾಟ ಮಾಡುವ ಸ್ಥಿತಿ ಉದ್ಭವವಾಗಿದೆ. ಮಾಸ್ಕ್ ಹಾಗೂ ಸ್ಯಾನಿಟೈಸರ್ ಅನ್ನು ಆರೋಗ್ಯವಂತರು ಬಳಸಿ ಅಭಾವ ಸೃಷ್ಟಿಸುವ ಬದಲು ಸೋಂಕಿತರಿಗೆ ಸುಲಭವಾಗಿ ಸಿಗಲು ಅನುವು ಮಾಡಿಕೊಡುವಂತೆ ಆರೋಗ್ಯ ಇಲಾಖೆ ಪ್ರಚಾರ ಕೂಡ ಆರಂಭಿಸಿದೆ. ಇನ್ನಾದರೂ ವದಂತಿಗಳಿಗೆ ಕಿವಿಗೊಡದೆ ಅಗತ್ಯವಿದ್ದಲ್ಲಿ ಮಾತ್ರ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸಿ. ಸ್ಯಾನಿಟೈಸರ್ ಬದಲು ಸಾಬೂನಿನಲ್ಲಿ ಕೈತೊಳೆದುಕೊಳ್ಳುವುದು ಉತ್ತಮ.
ಸ್ಯಾನಿಟೈಸರ್‌ಗೆ ಬೇಡಿಕೆ : ಕರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಸರ್ಜಿಕಲ್ ಮಾಸ್ಕ್ (ಮುಖಗವಸು) ಜತೆಗೆ ಈಗ ಸ್ಯಾನಿಟೈಸರ್‌ಗೆ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ. 25 ಎಂಎಲ್, 50 ಎಂಎಲ್, 100 ಎಂಎಲ್ ಹ್ಯಾಂಡ್ ಸ್ಯಾನಿಟೈಸರ್ ಎಲ್ಲಿಯೂ ಸಿಗುತ್ತಿಲ್ಲ. ಮೆಡಿಕಲ್ ಶಾಪ್, ಫುಡ್‌ಮಾರ್ಟ್‌ಗಳಲ್ಲದೆ, ಡಿಸ್ಟ್ರಿಬ್ಯೂಟರ್‌ಗಳಲ್ಲೂ ಸ್ಯಾನಿಟೈಸರ್ ಲಭ್ಯವಿಲ್ಲ. ಎಲ್ಲ ಕಡೆ ಸ್ಯಾನಿಟೈಸರ್ ನೋಸ್ಟಾಕ್ ಫಲಕಗಳು ಕಾಣುತ್ತಿದೆ.
ಜಿಲ್ಲೆಯಲ್ಲಿ ಯಾವುದೇ ಕರೊನಾ ಪಾಸಿಟಿವ್ ಪ್ರಕರಣ ಕಂಡುಬಂದಿಲ್ಲ. ಜ್ವರ, ಕೆಮ್ಮು, ನೆಗಡಿಯಂತಹ ರೋಗಗಳಿಂದ ಬಳಲುತ್ತಿರುವರು ಮಾತ್ರ ಮಾಸ್ಕ್ ಬಳಸಬೇಕು. ಅದನ್ನು ಬಿಟ್ಟು ಆರೋಗ್ಯವಂತರು ಮಾಸ್ಕ್ ಬಳಸುವ ಅಗತ್ಯವಿಲ್ಲ. ಧೂಳು, ಯಾವುದೇ ರೋಗಾಣಗಳನ್ನು ನಿಯಂತ್ರಿಸಲು ಬಾಯಿ, ಮೂಗನ್ನು ಕರವಸ್ತ್ರ ಬಳಸಿ ಮುಚ್ಚಿಕೊಳ್ಳಬಹುದು. ರೋಗಿಗಳ ಆರೈಕೆ ಮಾಡುವರು, ರೋಗಿಗಳು, ಆರೋಗ್ಯ ಸೇವೆಯಲ್ಲಿರುವ ಸಿಬ್ಬಂದಿ ಮಾತ್ರ ಸ್ಯಾನಿಟೈಸರ್ ಬಳಸಲಿ. ಇನ್ನಿತರರು ಸಾಬೂನು ಬಳಸಿ ಕೈತೊಳೆದುಕೊಳ್ಳಬಹುದು. ಡಾ.ಟಿ.ಎ.ವೀರಭದ್ರಯ್ಯ ಜಿಲ್ಲಾ ಶಸ್ತ್ರಚಿಕಿತ್ಸಕ ಕರೊನಾ ಭೀತಿ ಹಾಗೂ ಬೇಸಿಗೆ ಕಾಲವಾಗಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ನಗರದಾದ್ಯಂತ ಬೀದಿಬದಿ ಆಹಾರ ಪದಾರ್ಥ ವ್ಯಾಪಾರಿಗಳು, ಹಣ್ಣಿನ ಜ್ಯೂಸ್ ಮಾರುವವರು, ಕೋಳಿ ಹಾಗೂ ಮಾಂಸದ ಅಂಗಡಿಯವರು ತಮ್ಮ ಸುತ್ತಮುತ್ತಲು ನೈರ್ಮಲ್ಯ ಕಾಪಾಡಬೇಕು. ಕಸವನ್ನು ಎಲ್ಲೆಂದರಲ್ಲಿ ಎಸೆಯಬಾರದು. ಸ್ವಚ್ಛತೆಗೆ ಒತ್ತುಕೊಡಬೇಕು. ಟಿ.ಕೆ.ನರಸಿಂಹಮೂರ್ತಿ ಅಧ್ಯಕ್ಷ, ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ