ಧರ್ಮ, ಸಾಹಿತ್ಯದ ಆಶಯವೇ ಮಾನವನ ಒಳಿತು

shravana chintana
ಶ್ರಾವಣ ಚಿಂತನ ಹಾಗೂ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮದಲ್ಲಿ ಮಹಾಬಲೇಶ್ವರ ಹೆಗಡೆ, ಯು.ಮಧುಸೂದನ ಐತಾಳ್, ವಿದ್ವಾನ್ ವಿಜಯಲಕ್ಷ್ಮೀ, ಶೈಲಶ್ರೀ ಅವರನ್ನು ಸನ್ಮಾನಿಸಲಾಯಿತು. ಶ್ರೀ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಡಿ.ಮಂಜುನಾಥ್ ಇತರರಿದ್ದರು.
Published on

ಶಿವಮೊಗ್ಗ: ಸಮಾಜದ ಉನ್ನತಿಗೆ ಸಾಹಿತ್ಯವೆಂಬ ಮಾಧ್ಯಮ ಅವಶ್ಯಕ. ಧರ್ಮ ಮತ್ತು ಸಾಹಿತ್ಯ ಒಂದಕ್ಕೊಂದು ಪೂರಕ. ಧರ್ಮ ಏನನ್ನೇ ಸಾಧಿಸಬೇಕಾದರೂ ಅಲ್ಲಿ ಸಾಹಿತ್ಯದ ಅವಶ್ಯಕತೆಯಿದೆ ಎಂದು ಬೆಕ್ಕಿನಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಗೋಪಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಬೆಕ್ಕಿನಕಲ್ಮಠದ ಶ್ರೀ ಮುರುಘರಾಜೇಂದ್ರ ಮಹಾಸಂಸ್ಥಾನಮಠ ಟ್ರಸ್ಟ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಏರ್ಪಡಿಸಿದ್ದ ಶ್ರಾವಣ ಚಿಂತ ಹಾಗೂ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮನುಷ್ಯನ ಒಳಿತನ್ನು ಬಯಸುವುದು ಹಾಗೂ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದೇ ಧರ್ಮ ಮತ್ತು ಸಾಹಿತ್ಯದ ಮೂಲ ಆಶಯವಾಗಿದೆ. ನಮ್ಮ ವಿದ್ವಾಂಸರು, ಜ್ಞಾನಿಗಳು ಜನರ ಒಳಿತಿಗಾಗಿ ಸಮಾಜಮುಖಿ ಚಿಂತನೆಗಳನ್ನು ಪಸರಿಸುವುದಕ್ಕೆಂದು ಕಂಡುಕೊಂಡ ಮಾಧ್ಯಮವೇ ಸಾಹಿತ್ಯ ಎಂದು ತಿಳಿಸಿದರು.
ಕನ್ನಡದಲ್ಲಿಯೇ ಧರ್ಮ ಸಾಹಿತ್ಯವನ್ನು ಪಸರಿಸಿದವರು ವಚನಕಾರರು, ದಾಸರು. ಕನ್ನಡದ ಅನೇಕ ಪ್ರಕಾರಗಳಲ್ಲಿ ಧರ್ಮ ಮತ್ತು ಸಾಹಿತ್ಯ ಒಟ್ಟುಗೂಡಿ ಹೋಗುತ್ತಿದ್ದು, ಅದುವೇ ಕನ್ನಡ ಭಾಷೆಯ ವೈವಿಧ್ಯದ ಶಕ್ತಿಗೆ ನಿದರ್ಶನವಾಗಿದೆ. ಇಂತಹ ಅದ್ಭುತ ಕನ್ನಡ ಸಾಹಿತ್ಯಕ್ಕೆ ನಾವೆಲ್ಲರೂ ವಾರಸುದಾರರು. ಅದರೆ ಕೆಲವರು ಕನ್ನಡದ ಬಗೆಗೆ ಅಭಿಮಾನಶೂನ್ಯರಂತೆ ವರ್ತಿಸುತ್ತಿರುವುದು ಬೇಸರದ ಸಂಗತಿ. ನೀರು, ಗಡಿ ಸಮಸ್ಯೆಗಳಲ್ಲಿ ಇಂದಿಗೂ ಅನಾಥ ಪ್ರಜ್ಞೆ ಕಾಡುತ್ತಿದೆ. ಹಾಗಾಗಿ ನಾಡು, ನುಡಿಯ ವಿಚಾರದಲ್ಲಿ ಸ್ವಾಭಿಮಾನ ಬೆಳೆಸಿಕೊಳ್ಳಬೇಕಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಮಂಜುನಾಥ ಮಾತನಾಡಿ, ಎಲ್ಲಾ ಭಾಗ್ಯಗಳು ಮನೆಯ ಬಾಗಿಲಿಗೆ ತಲುಪುವ ವೇಳೆಯಲ್ಲಿ ಪಕೃತಿ ಅದೇಕೋ ಮುನಿಸು ತೋರುತ್ತಿದೆ. ಇಂತಹ ಸಂದರ್ಭದಲ್ಲಿ ಮನಸ್ಸುಗಳನ್ನು ಕಟ್ಟುವ ಕಾರ್ಯವನ್ನು ಸಾಹಿತ್ಯ ಹುಣ್ಣಿಮೆ ಮತ್ತು ಶ್ರಾವಣ ಚಿಂತನದ ಮೂಲಕ ಮೂಲಕ ನಡೆಸುತ್ತಿದ್ದೇವೆ ಎಂದು ಹೇಳಿದರು.
ದೈವಜ್ಞ ಬ್ರಾಹ್ಮಣ ಸಮಾಜದ ಮಾಜಿ ಅಧ್ಯಕ್ಷ ಎಸ್.ಡಿ.ಕಮಲಾಕ್ಷ, ಗೋಪಾಲಗೌಡ ಬಡಾವಣೆ ‘ಎ’ ಬ್ಲಾಕ್ ನಿವಾಸಿಗಳ ಸಂಘದ ಅಧ್ಯಕ್ಷ ಎಸ್.ಸಿ.ರಾಮಚಂದ್ರ, ಗೌರವಾಧ್ಯಕ್ಷ ಎಚ್.ಬಿ.ಆದಿಮೂರ್ತಿ ಉಪಸ್ಥಿತರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net