ಪೊಲೀಸರ ಬಲೆಗೆ ಬಿದ್ದ ಗೃಹಸಚಿವರ ಆಪ್ತ!

Published on


ಸೈಟು, ಸೀಟು, ಕೆಲಸ ಕೊಡಿಸುವ ನೆಪದಲ್ಲಿ ಹಲವರಿಗೆ ಪಂಗನಾಮ

ಕೊರಟಗೆರೆ: ಕಾಂಗ್ರೆಸ್ ಮುಖಂಡ, ಗೃಹ ಸಚಿವ ಜಿ.ಪರಮೇಶ್ವರ ಆಪ್ತ ಎನ್ನಲಾದ ಮಹಮ್ಮದ್ ಜುಬೇರ್ ಬೆಂಗಳೂರಿನ ಕೆಂಗೇರಿ ಪೊಲೀಸರ ಖೆಡ್ಡಾಕ್ಕೆ ಬಿದ್ದಿದ್ದಾನೆ. ಆರೋಪಿ ಬೆಂಗಳೂರಿನ ಮಹಿಳೆ ಸೇರಿ ಹಲವರಿಗೆ ಸುಮಾರು 6 ಕೋಟಿ ರೂ.ಗೂ ಅಧಿಕ ಪಂಗನಾಮ ಹಾಕಿದ್ದ. ಬೆಂಗಳೂರಿನ ಕೆಂಗೇರಿ ಮೂಲದ ಸಹೀದಾ ತಬಸುಮ್ ಎಂಬಾಕೆ ಕೆಂಗೇರಿ ಠಾಣೆಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಜುಬೇರ್‌ನನ್ನು
ವಶಕ್ಕೆ ಪಡೆದ ಪೊಲೀಸರು ಬಳಿಕ ಕೊರಟಗೆರೆ ಪೊಲೀಸರಿಗೆ ಹಸ್ತಾಂತರಿಸಿದ್ದರು. ಬುಧವಾರ ಇಡೀ ದಿನ ಠಾಣೆಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಈತನ ಮೋಸದಾಟ ಬಯಲಾಗಿವೆ.
ಮಹಮ್ಮದ್ ಜುಬೇರ್ ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷನಾಗಿ ನೇಮಕವಾಗಿದ್ದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಸೈಟು, ಸೀಟು, ಕೆಲಸ ಕೊಡಿಸುವುದಾಗಿ ಸಾಕಷ್ಟು ಜನಕ್ಕೆ ಪಂಗನಾಮ ಹಾಕಿದ್ದಾನೆ. ಐಷಾರಾಮಿ ಜೀವನಕ್ಕಾಗಿ ಜರನ್ನು ವಂಚಿಸಿ ಹಣ ಗಳಿಸಿಸುತ್ತಿದ್ದ ಎನ್ನಲಾಗಿದೆ.

ರಾಜ್ಯಪಾಲರ ಸೀಲ್ ನಕಲು!
ರಾಜ್ಯಪಾಲರ ಸಹಿ, ಆರ್‌ಬಿಐ ಗವರ್ನರ್ ನಕಲಿ ಸೀಲ್ ಮತ್ತು ಸಹಿ ಬಳಸಿ ಬ್ಯಾಂಕುಗಳಲ್ಲಿ ಸಾಲ ಪಡೆಯಲು ಮಹಮದ್ ಜುಬೇರ್ ಪ್ರಯತ್ನಿಸಿರುವುದೂ ತನಿಖೆಯಲ್ಲಿ ಬೆಳಕಿಗೆ ಬಂದಿದು, ಒಟ್ಟಾರೆ ಬೆಂಗಳೂರಿನ ಕೆಂಗೇರಿ, ರಾಜರಾಜೇಶ್ವರಿ ನಗರ ಸೇರಿ ಹಲವೆಡೆ 14 ಪ್ರಕರಣ ಈತನ ಮೇಲೆ ದಾಖಲಾಗಿದೆ.

ಗೃಹ ಸಚಿವರ ಹೆಸರು ಬಳಕೆ !?
ಮಹಮ್ಮದ್ ಜುಬೇರ್, ನಾನು ಗೃಹ ಸಚಿವರ ಆಪ್ತ ಸಹಾಯಕ ಎಂದು ಹೇಳಿಕೊಂಡು ಡಾ.ಜಿ.ಪರಮೇಶ್ವರ ಹೆಸರು ಬಳಸಿಕೊಂಡು ವಿವಿಧೆಡೆ ಅಮಾಯಕರಿಗೆ 6 ಕೋಟಿಗೂ ಅಧಿಕ ಹಣ ವಂಚನೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಸಚಿವ ಪರಮೇಶ್ವರ ಜತೆಯಲ್ಲಿರುವ ಫೋಟೋ ತೋರಿಸಿಕೊಂಡು ಸ್ಮಾರ್ಟ್ ಸಿಟಿಯಲ್ಲಿ ಸೈಟ್, ಮೆಡಿಕಲ್ ಸೀಟ್, ಸಣ್ಣಪುಟ್ಟ ಇಂಡಸ್ಟ್ರಿಗಳಲ್ಲಿ ಕೆಲಸ ಕೊಡಿಸುವುದಾಗಿ ಅಮಾಯಕರಿಗೆ ನಂಬಿಸಿ ಹಣ ವಸೂಲಿ ಮಾಡಿದ್ದಾನೆ ಎನ್ನಲಾಗಿದೆ. ಬೆಂಗಳೂರು ಮತ್ತು ತುಮಕೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಮಾಯಕರಿಗೆ ಪಂಗನಾಮ ಹಾಕುವ ಜತೆಗೆ ರಾಜ್ಯಮಟ್ಟದ ಅಧಿಕಾರಿಗಳ ಸೀಲ್ ಮತ್ತು ಸಹಿಯನ್ನೇ ನಕಲು ಮಾಡಿರುವುದಾಗಿ ವಿಚಾರಣೆವೇಳೆ ಬಾಯಿಬಿಟ್ಟಿದ್ದಾನೆ.

ವಂಚನೆ ಬೆಳಕಿಗೆ ಬಂದಿದ್ದು ಹೇಗೆ
ಬೆಂಗಳೂರು ಮತ್ತು ತುಮಕೂರಿನಲ್ಲಿ ಮನೆ ಹಾಗೂ ಸೈಟು ಕೊಡಿಸುವ ನೆಪದಲ್ಲಿ ಸುಮಾರು ₹1.20 ಕೋಟಿಗೂ ಅಧಿಕ ಮೊತ್ತದ ವಂಚನೆ ಮಾಡಿರುವುದಾಗಿ ಬೆಂಗಳೂರಿನ ಕೆಂಗೇರಿ ಮೂಲದ ಸಹೀದಾ ತಬಸುಮ್ ಎಂಬಾಕೆ ಕೆಂಗೇರಿ ಠಾಣೆಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಮಹಮ್ಮದ್ ಜುಬೇರ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಪಿಎಸೈ ಮುರಳಿ ಮತ್ತು ತಂಡ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾಗೆ ಬಂಧಿತ ತಪ್ಪು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಸತಿಪತಿಯರು ಇಬ್ಬರ ಮೇಲೂ ದೂರು
ಮಹಮ್ಮದ್ ಜುಬೇರ್ ಮತ್ತು ಪತ್ನಿ ರೂಹಿ ಜುಬೇರ್ ಮೇಲೆ ಕೇಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಂಗೇರಿ ಪೊಲೀಸ್ ಠಾಣಾಧಿಕಾರಿಗಳ ಮಿಂಚಿನ ಕಾರ್ಯಚರಣೆಗೆ ಕೊರಟಗೆರೆ ಪೊಲೀಸರು ಸಾಥ್ ನೀಡಿದ್ದು, ಕೊರಟಗೆರೆ ಪಟ್ಟಣಕ್ಕೆ ಕರೆತಂದು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net