ಪವಿತ್ರ ಕಾರ್ತಿಕ ಮಾಸ ಮಂಗಳಕರ

new Kamala Joshi New
Published on

ಹುಬ್ಬಳ್ಳಿ : ಪವಿತ್ರವಾದ ಕಾರ್ತಿಕ ಮಾಸವನ್ನು ಹಿಂದು ಧರ್ಮದಲ್ಲಿ ಅತ್ಯಂತ ಮಂಗಳಕರ ಮಾಸವೆಂದು ಪರಿಗಣಿಸಲಾಗಿದೆ ಎಂದು ಬಾಲಕಲ್ಯಾಣ ಕೇಂದ್ರದ ಅಧ್ಯಕ್ಷೆ ಕಮಲಾ ಜೋಶಿ ಹೇಳಿದರು.

ಇಲ್ಲಿನ ಸೇವಾಭಾರತಿ ಟ್ರಸ್ಟ್ ಮಾತೃಛಾಯಾ ಬಾಲ ಕಲ್ಯಾಣ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ತಿಕ ಮಾಸದ ದೀಪೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೀಪ ಬೆಳಗುವ ಮೂಲಕ ಕತ್ತಲನ್ನು ಕಳೆಯಬೇಕು ಎನ್ನುವ ಚಿಂತನೆ ಮೂಡಿ ಬಂದಿರುವುದೇ ಕಾರ್ತಿಕ ದೀಪೋತ್ಸವದಿಂದ. ಕಾರ್ತಿಕ ಮಾಸ ಎರಡು ರೀತಿಯಲ್ಲಿ ಗಮನ ಸೆಳೆಯುತ್ತದೆ. ಮೊದಲಿಗೆ ಕತ್ತಲು, ಮತ್ತೊಂದು ಸ್ಥಿತಿ. ಕತ್ತಲು ಲಯಭಾವವಾದರೆ, ಸ್ಥಿತಿ ಬದುಕಿನ ಗತಿ. ಲಯ ಭಾವವೇ ಶಿವ. ಬದುಕಿನ ಗತಿಯೇ ವಿಷ್ಣು ಎಂದು ವಿವರಿಸಿದರು.

ಕಾರ್ತಿಕ ಮಾಸ ಶಿವ ಹಾಗೂ ವಿಷ್ಣು ದೇವರಿಗೆ ಪ್ರಿಯವಾದ ಮಾಸ. ಶಿವ ಮತ್ತು ವಿಷ್ಣು ಭಕ್ತರು ಒಂದುಗೂಡಿ ದೇಗುಲಗಳಲ್ಲಿ, ಮನೆಗಳ ಮುಂಬದಿಯಲ್ಲಿ ದೀಪವನ್ನು ಬೆಳಗುತ್ತಾರೆ. ಆ ದೀಪದ ಬೆಳಕಿನಲ್ಲೇ ತನ್ಮಯತೆ ಕಂಡುಕೊಳ್ಳುತ್ತಾರೆ ಎಂದು ತಿಳಿಸಿದರು.

ಅತಿಥಿಯಾಗಿದ್ದ ಮೇಯರ್ ಜ್ಯೋತಿ ಪಾಟೀಲ ಮಾತನಾಡಿ, ಭಾರತ ಭಾವೈಕ್ಯತೆಯಲ್ಲಿ ಏಕತೆ ಸಾರುವ ದೇಶವಾಗಿರುವುದರ ಜತೆಗೆ ಧಾರ್ವಿುಕತೆ, ಸಂಪ್ರದಾಯ, ಸಂಸ್ಕೃತಿ, ಆಚರಣೆಗಳಿಗೂ ಇಲ್ಲಿ ತನ್ನದೇ ಆದ ಮಹತ್ವಗಳಿವೆ ಎಂದು ಹೇಳಿದರು.

ವಿದ್ಯಾವಿಕಾಸ ಪ್ರಕಲ್ಪ ಸಮಿತಿಯ ಪ್ರಾಂತ ಅಧ್ಯಕ್ಷೆ ಭಾರತಿ ನಂದಕುಮಾರ, ಪಾಲಿಕೆ ಸದಸ್ಯ ಬೀರಪ್ಪ ಖಂಡೇಕರ, ಮಾತಾಜಿ ರತ್ನಾ ಪವಾಡಶೆಟ್ಟರ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net