ನಾಣ್ಯದ ಮೂಲಕವೇ ಪ್ರಪಂಚದ ಇತಿಹಾಸ ಗುರುತಿಸಬಹುದು : ಡಾ. ಶೆಲ್ವಪ್ಪಿಳ್ಳೈ ಅಯ್ಯಂಗಾರ್

DSC_4343
Published on

ಮೈಸೂರು: ನಾಣ್ಯದ ಮೂಲಕವೇ ಪ್ರಪಂಚದ ಇತಿಹಾಸ ಗುರುತಿಸಬಹುದು. ಒಂದುವೇಳೆ ನಾಣ್ಯಗಳ ಅಧ್ಯಯನ ಇಲ್ಲದೆ ಹೋಗಿದ್ದರೆ ನಮಗೆ ಎಷ್ಟೋ ರಾಜವಂಶಗಳ ಇತಿಹಾಸವೇ ತಿಳಿಯುತ್ತಿರಲಿಲ್ಲ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ. ಶೆಲ್ವಪ್ಪಿಳ್ಳೈ ಅಯ್ಯಂಗಾರ್ ಹೇಳಿದರು.

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಇಲಾಖೆಯ ಸಭಾಂಗಣದಲ್ಲಿ ಬುಧವಾರ ‘ಕರ್ನಾಟಕದ ನಾಣ್ಯ ಪರಂಪರೆ’ ವಿಷಯದ ಕುರಿತು ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಸಮುದ್ರಗುಪ್ತನ ಸಾಧನೆಗಳನ್ನು ನಾಣ್ಯಗಳು ತೆರೆದಿಡುತ್ತವೆ. ನಾಣ್ಯಗಳು ಇಲ್ಲದೆ ಹೋಗಿದ್ದರೆ ಬುಧಗುಪ್ತ ಎಂಬ ರಾಜ ಇದ್ದ ಎಂಬುದೇ ಗೊತ್ತಾಗುತ್ತಿರಲಿಲ್ಲ. ಹಾಗಾಗಿ ನಾಣ್ಯಶಾಸ್ತ್ರದ ಅಧ್ಯಯನ ಇತಿಹಾಸದಲ್ಲಿ ಅತ್ಯಂತ ಮುಖ್ಯವಾದದ್ದು ಎಂದು ಹೇಳಿದರು.

ಪ್ರಾಚೀನ ನಾಣ್ಯಗಳಿಗೆ ಚಿನ್ನದ ಬೆಲೆ ಇದೆ. ವಿಜಯನಗರ ಸಾಮ್ರಾಜ್ಯ ಸೇರಿದಂತೆ ವಿವಿಧ ಸಾಮ್ರಾಜ್ಯಗಳ ನಾಣ್ಯಗಳು ಪ್ರಸ್ತುತ ಲಕ್ಷಾಂತರ ರೂ. ಬೆಲೆ ಬಾಳುತ್ತದೆ. ಮೈಸೂರು ಹಾಗೂ ಹಂಪಿಯಲ್ಲಿ ಹಳೇ ನಾಣ್ಯಗಳನ್ನು 200 ಅಥವಾ 300 ರೂ.ಗೆ ಮಾರಾಟ ಮಾಡುತ್ತಾರೆ. ಆದರೆ, ಅದು ನೈಜ ನಾಣ್ಯವೇ? ಜನರಿಗೆ ಮೋಸ ಮಾಡುವ ಸಲುವಾಗಿ ಎಷ್ಟೋ ಸಲ ವ್ಯಾಪಾರಸ್ಥರು ನಕಲಿ ನಾಣ್ಯಗಳನ್ನು ನೀಡುತ್ತಾರೆ. ಸಾಕಷ್ಟು ಜನರು ಈ ರೀತಿ ನಾಣ್ಯ ಖರೀದಿಸಿ ಮೋಸ ಹೋಗಿದ್ದಾರೆ. ತಜ್ಞರು ಪರಿಶೀಲನೆ ನಡೆಸಿದರೆ ಅದು ಅಸಲಿಯೋ ಅಥವಾ ನಕಲಿಯೋ ಎಂಬುದು ತಿಳಿಯುತ್ತದೆ ಎಂದರು.

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ ಎ. ದೇವರಾಜು, ಸಂಪನ್ಮೂಲ ವ್ಯಕ್ತಿ ಗೌತಮ್ ಜಂತಕಲ್, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಉಪ ನಿರ್ದೇಶಕಿ ಸಿ.ಎನ್. ಮಂಜುಳಾ, ಪುರಾತತ್ವ ಸಂರಕ್ಷಣಾ ಇಂಜಿನಿಯರ್‌ಗಳಾದ ಪುಟ್ಟಸ್ವಾಮಿ, ತಾರಕೇಶ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net