ಹಸಿರನ್ನು ಹೊದ್ದು ನಿಂತಿರುವ ಬಿಳಿಗಿರಿರಂಗನ ಬೆಟ್ಟ

Oplus_0
ಯಳಂದೂರಿನ ಬಿಆರ್‌ಟಿ ಅರಣ್ಯ ಪ್ರದೇಶದ ಕಾನನದಲ್ಲಿ ಪ್ರವಾಸಿಗರಿಗೆ ದರ್ಶನ ನೀಡಿದ ಹುಲಿ.
Published on

ಯಳಂದೂರು: ಹಲವು ದಿನಗಳಿಂದ ಮಳೆ ಸುರಿಯುತ್ತಿರುವ ಪರಿಣಾಮ ಬಿಳಿಗಿರಿರಂಗನ ಬೆಟ್ಟ ಹಸಿರಿನಿಂದ ಕಂಗೊಳಿಸುತ್ತಿದೆ.

ಕಾಡು ಪ್ರಾಣಿಗಳ ಓಟಾಟ ಅಲ್ಲಲ್ಲಿ ಕಾಣಸಿಗುತ್ತಿದ್ದು, ಪ್ರಾಣಿಪ್ರಿಯರನ್ನು ರೋಮಾಂಚನಗೊಳಿಸುತ್ತಿದೆ. ಪೂರ್ವ ಮತ್ತು ಪಶ್ಚಿಮ ಘಟ್ಟಗಳನ್ನು ಸಂಧಿಸುವ ಬಿಳಿಗಿರಿ ವನ್ಯಧಾಮ ಅಪರೂಪದ ವೃಕ್ಷ ಹಾಗೂ ಪ್ರಾಣಿ ಸಂಪತ್ತನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡಿದೆ. ನಿತ್ಯ ಹರಿದ್ವರ್ಣ, ಅರೆನಿತ್ಯ ಹರಿದ್ವರ್ಣ, ಶೋಲಾ, ಎಲೆ ಉದುರುವ, ಕುರುಚಲು ಕಾಡು.. ಹೀಗೆ ಹೆಜ್ಜೆ ಹೆಜ್ಜೆಗೂ ವಿಭಿನ್ನತೆ ಕಮಡುಬರುತ್ತದೆ. ಪೂರ್ವ ಮುಂಗಾರು ಹಾಗೂ ಈಗ ಸುರಿಯುತ್ತಿರುವ ಮಳೆಯಿಂದ ಕಾಡಿಗೆ ಜೀವಕಳೆ ಬಂದಿದ್ದು, ಕೆರೆ ಕಟ್ಟೆಗಳು ಮತ್ತು ತೊರೆಗಳು ತುಂಬಿವೆ.

ಮಳೆಯಿಂದ ಕಾಡೆಲ್ಲ ಹಸಿರುಮಯವಾಗಿದೆ. ಕೆರೆ ನೀರಿನಲ್ಲಿ ಮಿಂದೇಳುವ ಹುಲಿ, ಆನೆಗಳು ತನ್ನ ಬಳಗದೊಡನೆ ಚಿಣ್ಣಾಟವಾಡುವ ದೃಶ್ಯ ಪ್ರಕೃತಿ ಪ್ರಿಯರನ್ನು ಸೆಳೆಯುತ್ತಿದೆ. ರಸ್ತೆ ಬದಿಯಲ್ಲೇ ಕಾಡುಕೋಣ, ಎಮ್ಮೆ, ಚಿಗರೆಗಳ ಹಿಂಡು, ಕಾಡುಕುರಿ, ಆನೆಗಳು, ನವಿಲುಗಳ ಹಿಂಡು, ಕಾಡು ಕೋಳಿಗಳು ಕಂಡು ಬರುತ್ತಿವೆ. ವಿವಿಧ ಜಾತಿಯ ಪಕ್ಷಿಗಳು ಹೊರಡಿಸುವ ನಿನಾದ ಇಡೀ ಕಾಡನ್ನೇ ಆವರಿಸಿ ಸಂಗೀತದ ರಸದೌತಣವನ್ನು ಉಣಬಡಿಸದಂತೆ ಭಾಸವಾಗುತ್ತದೆ.

ಅರಣ್ಯ ಇಲಾಖೆ ಮೌನ: ಬಿಆರ್‌ಟಿ ಹುಲಿಧಾಮವಾದ ಮೇಲೆ ಅರಣ್ಯ ಇಲಾಖೆಯ ನಿಯಮ ಕಠಿಣವಾಗಿವೆ. ಈ ಬಗ್ಗೆ ಸೂಚನೆ ನೀಡುವ ಫಲಕಗಳು ಕಿತ್ತು ಬಿದ್ದಿವೆ. ಅನೇಕರು ರಸ್ತೆಯಲ್ಲೇ ತಮ್ಮ ಮೊಬೈಲಿನಲ್ಲಿ ಕಾಡು ಪ್ರಾಣಿಗಳ ಚಿತ್ರವನ್ನು ಸೆರೆ ಹಿಡಿಯುವ ಅಪಾಯಕಾರಿ ಕೆಲಸಕ್ಕೆ ಕೈಹಾಕುತ್ತಿದ್ದಾರೆ. ರಸ್ತೆ ಬದಿಯಲ್ಲಿ ತಮ್ಮ ವಾಹನ ನಿಲ್ಲಿಸಿ ಕೆಳಕ್ಕೆ ಇಳಿಯುತ್ತಿರುವುದು ಅಪಾಯಕಾರಿ ಬೆಳವಣಿಗೆ. ಅರಣ್ಯ ಇಲಾಖೆಯ ನೌಕರರು ಈ ಬಗ್ಗೆ ಕ್ರಮವಹಿಸಬೇಕಿದೆ. ರಸ್ತೆ ಬದಿಯಲ್ಲಿನ ಸೂಚನಾ ಫಲಕಗಳನ್ನು ಕಾಡು ಪ್ರಾಣಿಗಳು ಅನೇಕ ಕಡೆ ಕೆಡವಿದ್ದು, ಇದನ್ನು ಮತ್ತೆ ಅಳವಡಿಸುವ ಕೆಲಸವನ್ನು ಮಾಡಬೇಕು.

ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಕೆರೆ-ಕಟ್ಟೆಗಳು ನೀರು ತುಂಬಿವೆ. ಗಿಡ-ಮರಗಳು ಹಚ್ಚ ಹಸಿರಿನಿಂದ ಕೂಡಿರುವುದರಿಂದ ಜೀವಕಳೆ ಬಂದಿದೆ. ಈ ಬಾರಿ ಸಾಕಷ್ಟು ಪ್ರವಾಸಿಗರು ಸಫಾರಿಗೆ ಆಗಮಿಸುತ್ತಿದ್ದಾರೆ. ಸಫಾರಿಗೆ ಹೋಗುವ ಸಮಯದಲ್ಲಿ ಹುಲಿ, ಆನೆ, ಕರಡಿ, ಚಿರತೆ ಪ್ರಾಣಿಗಳು ಕಣ್ಣಿಸಿಕೊಳ್ಳುತ್ತಿವೆ.
ವಿನೋದ್‌ಗೌಡ್ಆ ರ್‌ಎಫ್‌ಒ ಬಿಆರ್‌ಟಿ ಕೆ.ಗುಡಿ ವಲಯ

ಕಳೆದ ಹಲವು ದಿನಗಳಿಂದ ಸುರಿದ ಮಳೆಯಿಂದ ಅರಣ್ಯ ಪ್ರದೇಶ ಹಸಿರಿನಿಂದ ಕೂಡಿದೆ. ವನ್ಯಪ್ರಾಣಿಪಕ್ಷಿಗಳು ರಸ್ತೆ ಬದಿಯಲ್ಲಿ ದರ್ಶನ ನೀಡುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.
ದೀವು, ಪ್ರವಾಸಿಗ

19 ವೈಎಲ್‌ಡಿ ಚಿತ್ರ 04
ಬಿಆರ್‌ಟಿ ಅರಣ್ಯದಲ್ಲಿ ಕಾನನದಲ್ಲಿ ಸೀಳುನಾಯಿಗಳ ದರ್ಶನ.

19 ವೈಎಲ್‌ಡಿ ಚಿತ್ರ 05
ರಸ್ತೆ ಬದಿಯಲ್ಲಿ ಕಂಡು ಬಂದ ಆನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net