

ಉಪ್ಪಿನಂಗಡಿ: ಮೂವತ್ತನಾಲ್ಕನೇ ನೆಕ್ಕಿಲಾಡಿ ಗ್ರಾಮದ ಆನೆಬೈಲು ಸಮೀಪದ ಉಡ್ಲದಕೋಡಿ ಎಂಬಲ್ಲಿ ಗುಡ್ಡವೊಂದು ವಿಶ್ವನಾಥ ನಾಯ್ಕ ಎಂಬುವರ ಮನೆ ಮೇಲೆ ಕುಸಿದು ಬಿದ್ದಿದ್ದು, ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಒಂದು ಆಮ್ನಿ ಕಾರು ಹಾಗೂ ಒಂದು ದ್ವಿಚಕ್ರ ವಾಹನ ಹಾಗೂ ಸಾಕು ನಾಯಿ ಮಣ್ಣಿನಡಿ ಸಿಲುಕಿದೆ. ಗುಡ್ಡದ ಮಣ್ಣು ತೋಡಿಗೂ ಬಿದ್ದಿದ್ದು, ತೋಡಿನ ನೀರು ಕೃಷಿ ತೋಟಕ್ಕೆ ನುಗ್ಗಿದೆ. ಈ ಸಂದರ್ಭ ವಿಶ್ವನಾಥ ನಾಯ್ಕ, ಅವರ ವೃದ್ಧ ತಾಯಿ ಲಲಿತಾ, ಪತ್ನಿ ವಾರಿಜಾ ಹಾಗೂ ಅಂಗನವಾಡಿ ಹಾಗೂ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಇಬ್ಬರು ಮಕ್ಕಳು ಗಾಢ ನಿದ್ದೆಯಲ್ಲಿದ್ದರು. ಭಾರಿ ಶಬ್ದ ಕೇಳಿ ಮನೆ ಮಂದಿ ಎಚ್ಚರಗೊಂಡು ನೋಡಿದಾಗ ಮನೆಯ ಹಿಂಬದಿಯ ಗುಡ್ಡ ಕುಸಿದು ಅವರ ಮನೆಗೆ ತಾಗಿ ನಿಂತಿತ್ತು.
ಸ್ಥಳಕ್ಕೆ ಉಪತಹಸೀಲ್ದಾರ್ ಚೆನ್ನಪ್ಪ ಗೌಡ, ಗ್ರಾಮ ಕರಣಿಕ ಜಂಗಪ್ಪ, ಗ್ರಾಮ ಸಹಾಯಕ ದಿವಾಕರ, ನೆಕ್ಕಿಲಾಡಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸತೀಶ ಕೆ.ಬಂಗೇರ, ಅಧ್ಯಕ್ಷೆ ಸುಜಾತ ಆರ್.ರೈ, ಉಪಾಧ್ಯಕ್ಷ ಹರೀಶ್ ಡಿ, 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್, ಗ್ರಾ.ಪಂ ಮಾಜಿ ಅಧ್ಯಕ್ಷ ಅಸ್ಕರ್ ಅಲಿ, ಕಾಂಗ್ರೆಸ್ ಮುಖಂಡೆ ಜಯಶೀಲ ಶೆಟ್ಟಿ ಭೇಟಿ ನೀಡಿದ್ದಾರೆ.
ಸುದ್ದಿ ತಿಳಿದು 34 ನೆಕ್ಕಿಲಾಡಿ ಗ್ರಾ.ಪಂ ಸದಸ್ಯರಾದ ಪ್ರಶಾಂತ್ ಎನ್. ಹಾಗೂ ಹರೀಶ್ ಕುಲಾಲ್ ಬೆಳಗ್ಗಿನ ಜಾವವೇ ಅಲ್ಲಿಗೆ ಧಾವಿಸಿದ್ದು, ಸ್ಥಳೀಯರಾದ ಗುರುರಾಜ ಭಟ್, ಧನಂಜಯ ಮೊದಲಾದವರು ರಕ್ಷಣಾ ಕಾರ್ಯದಲ್ಲಿ ನಿರತರಾದರು. ಆಗ ತೋಟದಲ್ಲಿ ಎದೆಯೆತ್ತರ ತನಕ ನೀರಿದ್ದು, ಆ ನೀರಿನಲ್ಲಿಯೇ ವೃದ್ಧೆ ಲಲಿತಾ ಅವರನ್ನು ಎತ್ತಿಕೊಂಡು ಸುರಕ್ಷಿತ ಜಾಗಕ್ಕೆ ಕಳುಹಿಸಿಕೊಡಲಾಯಿತು. ಬಳಿಕ ಪ್ರವಾಹ ರಕ್ಷಣಾ ತಂಡ ದೋಣಿಯೊಂದಿಗೆ ಸ್ಥಳಕ್ಕೆ ತೆರಳಿ, ಮನೆಯ ಸಾಮಗ್ರಿ, ಸರಂಜಾಮು ಹಾಗೂ ಮನೆಯಲ್ಲಿದ್ದ ಅಡಕೆ,ಇನ್ನಿತರ ವಸ್ತುಗಳನ್ನು ದೋಣಿಯ ಮೂಲಕ ತಂದು ಸುರಕ್ಷಿತ ಜಾಗಕ್ಕೆ ತಲುಪಿಸಿದರು.
34 ನೆಕ್ಕಿಲಾಡಿಯ ನೆಕ್ಕಲ ಎಂಬಲ್ಲಿ ಆ.2ರಂದು ಬೆಳಗ್ಗೆ ದರೆಯೊಂದು ಕುಸಿದು ಬಿದ್ದಿದ್ದು,ಹನೀಫ್ ಎಂಬುವರ ಮನೆಯ ಗೋಡೆಗಳು, ಗ್ರಾನೈಟ್‌ನ ನೆಲ ಸಂಪೂರ್ಣ ಬಿರುಕು ಬಿಟ್ಟಿದೆ. 34 ನೆಕ್ಕಿಲಾಡಿ ಕಾಂಗ್ರೆಸ್ ವಲಯಾಧ್ಯಕ್ಷೆ ಅನಿ ಮಿನೇಜಸ್, ಬೂತ್ ಅಧ್ಯಕ್ಷರಾದ ಅಬ್ದುಲ್ ಖಾದರ್, ಇಸಾಕ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.