ವರುಣನ ಆರ್ಭಟಕ್ಕೆ ಮತ್ತೆ ನಲುಗಿದ ಮಲೆನಾಡು

117 skpp 1--
ಹೆದ್ದಾರಿಗೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸುತ್ತಿರುವುದು.
Published on

ಸಕಲೇಶಪುರ : ಕಳೆದ ಎರಡು ದಿನಗಳಿಂದ ಭಾರಿ ಮಳೆ ಸಿರಿಯುತ್ತಿರುವುದರಿಂದ ತಾಲೂಕಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮೇ ಎರಡನೇ ವಾರದಿಂದ ಆರಂಭವಾದ ಮಳೆ ಜುಲೈ ತಿಂಗಳ ಆರಂಭದಲ್ಲಿ ಅಲ್ಪ ಬಿಡುವು ನೀಡಿತ್ತಾದರೂ ಮತ್ತೆ ಆರ್ಭಟಿಸುತ್ತಿದೆ. ಪರಿಣಾಮ ನದಿ, ತೊರೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಹೆದ್ದಾರಿ ಸಂಚಾರ ದುಸ್ಥರ: ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿಘಾಟ್‌ನಲ್ಲಿ ಶನಿವಾರ ಸಂಜೆ ಮೇಘಸ್ಪೋಟ ಸಂಭವಿಸಿದ್ದು ಎರಡು ಗಂಟೆಯ ಕನಿಷ್ಠ ಅವಧಿಯಲ್ಲಿ 400 ಮಿ.ಮೀಟರ್ ಮಳೆ ಸುರಿದ ಪರಿಣಾಮ ಘಾಟ್‌ರಸ್ತೆಯಲ್ಲಿ ಹೊಳೆಯಂತೆ ನೀರು ಹರಿಯುತ್ತಿತ್ತು. ತೊರೆಗಳ ನೀರು ರಸ್ತೆಗೆ ಬೀಳುತ್ತಿದ್ದರಿಂದ ಘಾಟ್‌ನಲ್ಲಿ ಲಘುವಾಹನಗಳ ಸಂಚಾರ ಕಷ್ಟಕರವಾಗಿತ್ತು. ಹೆದ್ದಾರಿಯ ಪ್ರತ್ಯೇಕ ಪ್ರದೇಶದಲ್ಲಿ ಎರಡು ಕಾರುಗಳ ಮೇಲೆ ಮರಗಳು ಬಿದ್ದಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳದಲ್ಲೇ ಇದ್ದ ಅರಣ್ಯ ಇಲಾಖೆ ಅಧಿಕಾರಿಗಳು ಮರಗಳನ್ನು ತೆರವುಗೊಳಿಸಿದರು. ಈ ಮದ್ಯೆ ರಾತ್ರಿ 8 ಗಂಟೆಯ ವೇಳೆ ಡಬಲ್ ತಿರುವು ಸಮೀಪ ಎರಡು ಪ್ರದೇಶದಲ್ಲಿ ಹೊಸದಾಗಿ ಗುಡ್ಡಕುಸಿದಿದ್ದರಿಂದ ರಾತ್ರಿ 8 ರಿಂದ 12 ಗಂಟೆಯವರೆಗೂ ಮಂಗಳೂರು-ಬೆಂಗಳೂರು ನಡುವಿನ ಸಂಚಾರ ಬಂದ್ ಆಗಿದ್ದರಿಂದ ಸಾವಿರಾರು ವಾಹನಗಳು ಹೆದ್ದಾರಿಯ ಎರಡು ಬದಿ ಕಿ.ಮೀ.ಗಟ್ಟಲೆ ನಿಂತಿದ್ದವು. ಸ್ಥಳಕ್ಕಾಗಮಿಸಿದ ಹೆದ್ದಾರಿ ಅಧಿಕಾರಿಗಳು ಜೆಸಿಬಿ ಬಳಸಿ ಮಣ್ಣು ತೆರವುಗೊಳಿಸಿದರೆ ಅರಣ್ಯ ಇಲಾಖೆ ಬಿದ್ದ ಮರಗಳನ್ನು ತುಂಡರಿಸಿ ಸಂಚಾರಕ್ಕೆ ಅನುವು ಮಾಡಿತ್ತು.

ಕಳೆದ ಎರಡು ದಿನಗಳ ಅವಧಿಯಲ್ಲಿ ತಾಲೂಕಿನ ಹಾನುಬಾಳ್,ಕಸಬಾ ಹಾಗೂ ಹೆತ್ತೂರು ಹೋಬಳಿಯಲ್ಲಿ 350 ರಿಂದ 500 ಮಿ.ಮೀಟರ್ ಮಳೆಯಾಗಿದ್ದು ಈ ಭಾಗದ ಎಲ್ಲ ನದಿ ತೊರೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಸಾಕಷ್ಟು ಪ್ರದೇಶದಲ್ಲಿ ನಾಟಿ ಮಾಡಿದ್ದ ಭತ್ತದ ಗದ್ದೆಗಳು ನದಿ ನೀರಿನಿಂದ ಆವೃತಗೊಂಡಿವೆ. ಶನಿವಾರ ರಾತ್ರಿ ಕಡಗರವಳ್ಳಿ-ಆಲುವಳ್ಳಿ ಗ್ರಾಮ ಸಮೀಪ ಮೇಘಸ್ಪೋಟ ಸಂಭವಿಸಿದ ಪರಿಣಾಮ ಎರಡು ಗಂಟೆಯ ಅವಧಿಯಲ್ಲಿ ಭಾರಿ ಮಳೆ ಸುರಿದಿದೆ. ಗ್ರಾಮದ ಭತ್ತದ ಗದ್ದೆಗಳೆಲ್ಲ ಮಳೆ ನೀರು ಆವರಿಸಿ ಕೆರೆಗಳಂತಾಗಿವೆ. ಕ್ಯಾನಹಳ್ಳಿ-ಚಿನ್ನಹಳ್ಳಿ ಮಾರ್ಗದಲ್ಲಿ ಭೂಕುಸಿತ ಸಂಭವಿಸಿರುವುದರಿಂದ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಒಸ್ಸೂರು ಗ್ರಾಮದಲ್ಲಿ ರಮೇಶ್ ಅವರ ಮನೆ ಹಾನಿಗೊಂಡಿದ್ದರೆ ಪಟ್ಟಣದ ಬಾಳೆಗದ್ದೆಯಲ್ಲಿ ಉಸ್ಮಾನ್ ಅವರ ಮನೆ ಕುಸಿತಗೊಂಡಿದೆ. ಆನೇಮಹಲ್ ಗ್ರಾಮದ ಶಾಲೆಯ ಕಾಂಪೌಡ್ ನೆಲಕ್ಕುರುಳಿದೆ. ಯಡಕೇರೆ ಹಳ್ಳ ತುಂಬಿ ಹರಿಯುತ್ತಿರುವ ಪರಿಣಾಮ ಕುಂಬ್ರಹಳ್ಳಿ-ಯಡಕೇರೆ ರಸ್ತೆ ಬಂದ್ ಆಗಿದೆ. ನದಿ ನೀರು ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ಮಾಗೇರಿ-ಪಟ್ಲ ಮಾರ್ಗದಲ್ಲಿ ವಾಹನ ಸಂಚಾರ ಕಷ್ಟಕರವಾಗಿದೆ. ಬಿಸ್ಲೆಘಾಟ್ ರಸ್ತೆಯಲ್ಲಿ ಧರೆಗುರುಳಿರುವ ಮರಗಳ ತೆರವು ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಹೇಮಾವತಿ ನದಿ ಸಹ ಪಟ್ಟಣದಲ್ಲಿ ಒಡಲು ಬಿಟ್ಟು ಹರಿಯುತ್ತಿದ್ದು ಸಕಲೇಶ್ವರಸ್ವಾಮಿ ದೇವಸ್ಥಾನ ಗರ್ಭಗುಡಿಪ್ರವೇಶಕ್ಕೆ ಕೆಲವೇ ಅಡಿಗಳು ಬಾಕಿ ಉಳಿದಿದೆ. ಅಜಾದ್ ರಸ್ತೆಗೆ ನದಿ ನೀರು ನುಗ್ಗುವ ಭಯ ಜನರನ್ನು ಕಾಡುತ್ತಿದೆ. ಭಾರಿ ಮಳೆಯ ಕಾರಣ ತಾಲೂಕಿನಾದ್ಯಂತ ಕೃಷಿ ಕಾರ್ಯಕ್ಕೆ ರಜೆ ನೀಡಲಾಗಿದ್ದು

ಉಪ ವಿಭಾಗಾಧಿಕಾರಿ ರಾಜೇಶ್, ತಹಸೀಲ್ದಾರ್ ಸುಪ್ರೀತಾ, ವಲಯ ಅರಣ್ಯಾಧಿಕಾರಿ ಹೇಮಂತ್ ಮದ್ಯರಾತ್ರಿವರಗೆ ಘಾಟ್‌ನಲ್ಲೆ ಇದ್ದು ಕಾರ್ಯಚರಣೆ ನೇತೃತ್ವವಹಿಸಿ ತೆರವು ಕಾರ್ಯ ವೇಗವಾಗಿ ನಡೆಸುವ ಮೂಲಕ ಸಂಚಾರಕ್ಕೆ ಅವಕಾಶ ನೀಡಲಾಯಿತಾದರು ಬಾನುವಾರ ಸಹ ಮತ್ತೆ ಗುಡ್ಡಕುಸಿದಿದ್ದು ತೆರವುಗೊಳಿಸಲಾಗಿದೆ. ಈ ಭಾಗದಲ್ಲಿ ಇಂದಿಗೂ ಬಾರ ಮಳೆಯಾಗುತ್ತಿರುವುದರಿಂದ ಮತ್ತಷ್ಟು ಭೂಕುಸಿತ ಸಾದ್ಯತೆ ದಟ್ಟವಾಗಿದೆ. ಅಲ್ಲದೆ ಪ್ರತಿವರ್ಷ ಕುಸಿಯುತ್ತಿರುವ ದೊಡ್ಡತಪ್ಪಲೆ ಬೆಟ್ಟ ಸಹ ಯಾವ ಕ್ಷಣದಲ್ಲಿ ಬೇಕಿದ್ದರು ಭಾರಿ ಪ್ರಮಾಣದಲ್ಲಿ ಕುಸಿಯುವ ಸಾಧ್ಯತೆ ಹೆಚ್ಚಿದ್ದು ಈ ಪ್ರದೇಶದಲ್ಲಿ ನದಿಯಂತೆ ಅಂತರಜಲ ಹರಿಯುತ್ತಿದ್ದು. ಇಲ್ಲಿನ ಒಂದು ಕಿ.ಮಿ ವ್ಯಾಪ್ತಿಯಲ್ಲಿ ವಾಹನ ಸಂಚಾರ ಬಾರಿ ಅಪಾಯಕಾರಿಯಾಗಿದೆ. ಬಾನುವಾರವು ಹೆದ್ದಾರಿಗೆ ಮರಗಳು ಉರುಳಿದ್ದು ಕೆಲಕಾಲ ವಾಹನ ಸಂಚಾರಕ್ಕೆ ದಕ್ಕೆಯಾಗಿತ್ತು. ಅರಣ್ಯ ಇಲಾಖೆ ಹೆದ್ದಾರಿಗೆ ಬಾಗಿದ್ದ ಮರಗಳನ್ನು ಮೂರು ಜೆಸಿಬಿ ಯಂತ್ರಗಳನ್ನು ಬಳಸಿ ತೆರವುಗೊಳಿಸಿದರೆ, ಹಿರಿದನಹಳ್ಳಿ ರಸ್ತೆಯಲ್ಲಿ ಬೀಳುವ ಸ್ಥಿತಿಯಲ್ಲಿದ್ದ ಮರಗಳನ್ನು ಅರಣ್ಯ ಇಲಾಖೆ ತೆರವುಗೊಳಿಸಿದೆ.

ಮಾರ್ಗ ಬದಲಿಸಿದ ನಾಯಕರು

ಬೆಂಗಳೂರಿನಿಂದ-ಧರ್ಮಸ್ಥಳಕ್ಕೆ ತೆರಳುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾಧಿ ನಾರಾಯಣಸ್ವಾಮಿ ಗಡಿಔಡೇಶ್ವರಿ ದೇವಸ್ಥಾನದವರೆಗೂ ತೆರಳಿದರಾದರೂ ಗುಡ್ಡ ಕುಸಿತದಿಂದ ಹೆದ್ದಾರಿ ಬಂದ್ ಆಗಿರುವುದನ್ನು ಖಚಿತಪಡಿಸಿಕೊಂಡು ಚಾರ್ಮಾಡಿ ಘಾಟ್ ಮೂಲಕ ತೆರಳಿದರು. ಬಾನುವಾರ ಬೆಳಿಗ್ಗೆ ಧರ್ಮಸ್ಥಳದಿಂದ ಹೊರಟ ವಿಜಯೇಂದ್ರ ಮತ್ತೆ ಗುಡ್ಡಕುಸಿತದ ಕಾರಣ ಬಿಸ್ಲೆ ಘಾಟ್ ಮೂಲಕ ಬೆಂಗಳೂರಿಗೆ ತೆರಳಿದರು.

------

ರೈಲುಮಾರ್ಗ ಬಂದ್

ಸಕಲೇಶಪುರ-ಸುಬ್ರಮಣ್ಯ ಸಂಪರ್ಕಿಸುವ ರೈಲ್ವೆ ಸಂಚಾರ ಸಹ ಭೂಕುಸಿತದಿಂದಾಗಿ ಶನಿವಾರ ರಾತ್ರಿ ಸ್ಥಗಿತಗೊಂಡಿದೆ. ತಾಲೂಕಿನ ದೋಣಿಗಾಲ್,ಕಡಗರಹಳ್ಳಿ ಹಾಗೂ ಯಡಕುಮೇರಿ ವ್ಯಾಪ್ತಿಯ 7 ಪ್ರದೇಶದಲ್ಲಿ ಶನಿವಾರ ಸಂಜೆ 5 ಗಂಟೆಗೆ ಭೂಕುಸಿತ ಸಂಭವಿಸಿದೆ. ಭೂಕುಸಿತ ಸುದ್ದಿ ತಿಳಿದ ಮೈಸೂರು ವಿಭಾಗದ ರೈಲ್ವೆ ಅಧಿಕಾರಿಗಳು ನೂರಾರು ನೌಕರರೊಂದಿಗೆ ಆಗಮಿಸಿ ರಾತ್ರಿ ಇಡಿ ಕಾರ್ಯಾಚರಣೆ ನಡೆಸಿ ರೈಲ್ವೆ ಹಳಿಯ ಮೇಲೆ ಬಿದ್ದಿದ್ದ ಮಣ್ಣನ್ನು ಮುಂಜಾನೆ 6.30 ಕ್ಕೆ ತೆರವುಗೊಳಿಸಿ ರೈಲು ಸಂಚಾರಕ್ಕೆ ಮುಕ್ತಗೊಳಿಸಿದರು. ಮಂಗಳೂರಿನಿಂದ ಈ ಭಾಗವಾಗಿ ಸಂಚರಿಸಬೇಕಿದ್ದ 10 ಕ್ಕೂ ಅಧಿಕ ರೈಲುಗಳ ಮಾರ್ಗವನ್ನು ಬದಲಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಾಗಿದೆ.

-------

ಹುಚ್ಚಾಟ

ಒಂದೇಡೆ ಭಾರಿ ಮಳೆ ಸುರಿಯುತ್ತಿರುವುದರಿಂದ ಸ್ಥಳೀಯರು ಮನೆಯಿಂದ ಹೊರಬಾರದಂತಾಗಿದೆ.ಆದರೆ ಇನ್ನೊಂದೆಡೆ ತಾಲೂಕು ಪ್ರವಾಸಕ್ಕೆ ಬಂದಿರುವ ಪ್ರವಾಸಿಗರು ಮಳೆಯಲ್ಲೇ ಹುಚ್ಚಾಟ ಮೆರೆಯುತ್ತಿದ್ದು, ಮಳೆ ನಡುವೆ ಅಪಾಯಕಾರಿ ಬೆಟ್ಟಗುಡ್ಡ, ಜರಿತೊರೆಗಳ ಬಳಿ ಪೋಟೋ ಕ್ಲಿಕಿಸಿಕೊಳ್ಳುತ್ತ ಹುಚ್ಚಾಟವಾಡುತ್ತಿದ್ದಾರೆ.

----------

ತಾಲೂಕಿನ ಹಲವೆಡೆ ರಸ್ತೆಗೆ ಉರುಳುವ ಸ್ಥಿತಿಯಲ್ಲಿದ್ದ ಸಾಕಷ್ಟು ಮರಗಳನ್ನು ಕಳೆದ ಎರಡು ದಿನಗಳಿಂದ ತೆರವುಗೊಳಿಸಲಾಗಿದೆ. ಶಿರಾಡಿ ಘಾಟ್‌ನಲ್ಲಿ ಸಂಭಾವ್ಯ ಅಪಾಯ ತಪ್ಪಿಸುವ ನಿಟ್ಟಿನಲ್ಲಿ ನಮ್ಮ ತಂಡ ಸ್ಥಳದಲ್ಲೆ ಬೀಡುಬಿಟ್ಟಿದೆ.

ಹೇಮಂತ್‌ಕುಮಾರ್ ಆರ್‌ಎಫ್‌ಒ

ಸಕಲೇಶಪುರ ವಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net