

ಹಾವೇರಿ: ಜಿಲ್ಲೆಯ ನಾಲ್ಕು ತಾಲೂಕುಗಳ 104 ಗ್ರಾಪಂಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಶೇ. 84.03ರಷ್ಟು ಮತದಾನವಾಗಿದೆ.
ಹಿರೇಕೆರೂರ ತಾಲೂಕಿನಲ್ಲಿ ಅತಿ ಹೆಚ್ಚು ಶೇ. 86.72ರಷ್ಟು ಮತದಾನವಾಗಿದ್ದರೆ, ಹಾವೇರಿ ತಾಲೂಕಿನಲ್ಲಿ ಕಡಿಮೆ ಶೇ. 83.14ರಷ್ಟು ಮತದಾನವಾಗಿದೆ.
ರಾಣೆಬೆನ್ನೂರ ತಾಲೂಕಿನ ಉಕ್ಕುಂದ ಗ್ರಾಪಂ ವ್ಯಾಪ್ತಿಯ ವೀರಾಪುರ ಗ್ರಾಮದ 146 (ಎ) ಮತಗಟ್ಟೆಯಲ್ಲಿ 453 ಮತದಾರರಿದ್ದು, 450 ಮತದಾರರು ಮತ ಚಲಾಯಿಸಿದ್ದಾರೆ (ಶೇ. 99.33). ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾನವಾದ ಮತಗಟ್ಟೆಯೂ ಇದಾಗಿದೆ. ರಾಣೆಬೆನ್ನೂರ ತಾಲೂಕಿನ ನಿಟ್ಟೂರ ಗ್ರಾಪಂ ವ್ಯಾಪ್ತಿಯ ಯಲಬಡಗಿ ಗ್ರಾಮದ 193ನೇ ಮತಗಟ್ಟೆಯಲ್ಲಿ ಶೇ. 95.91 ಮತದಾನವಾಗಿದೆ. ಕವಲೆತ್ತು ಗ್ರಾಪಂ ವ್ಯಾಪ್ತಿಯ 139ನೇ ಮತಗಟ್ಟೆಯಲ್ಲಿ ಅತಿ ಕಡಿಮೆ ಶೇ. 31.78ರಷ್ಟು ಮತದಾನವಾಗಿದೆ. ಇದು ಜಿಲ್ಲೆಯಲ್ಲಿ ನಾಲ್ಕು ತಾಲೂಕುಗಳಲ್ಲಿ ಅತಿ ಕಡಿಮೆ ಮತದಾನ.
ಹಾವೇರಿ ತಾಲೂಕಿನ ಮರೋಳ ಗ್ರಾಪಂ ವ್ಯಾಪ್ತಿಯ ಗುಡೂರ ಗ್ರಾಮದ 125ನೇ ಮತಗಟ್ಟೆಯಲ್ಲಿ ಶೇ. 94.15ರಷ್ಟು ಮತದಾನವಾಗಿದ್ದು, ತಾಲೂಕಿನಲ್ಲಿ ಅತಿಹೆಚ್ಚು ಮತದಾನವಾಗಿದೆ. ಕರ್ಜಗಿಯ 61ನೇ ಮತಗಟ್ಟೆಯಲ್ಲಿ ಶೇ. 67.47ರಷ್ಟು ಮತದಾನವಾಗಿದ್ದು, ತಾಲೂಕಿನಲ್ಲಿ ಅತಿ ಕಡಿಮೆ ಮತದಾನವಾದ ಮತಗಟ್ಟೆಯಾಗಿದೆ.
ಹಿರೇಕೆರೂರ ತಾಲೂಕಿನ ಕೋಡ ಗ್ರಾಪಂ ವ್ಯಾಪ್ತಿಯ ಶಂಕರನಹಳ್ಳಿ ಎಂ.ಕೆ.ಯ 72ನೇ ಮತಗಟ್ಟೆಯಲ್ಲಿ ಶೇ. 96.45ರಷ್ಟು ಮತದಾನವಾಗಿದ್ದು, ತಾಲೂಕಿನಲ್ಲಿಯೇ ಅತಿ ಹೆಚ್ಚು ಮತದಾನವಾದ ಮತಗಟ್ಟೆ. ಬುರಡಿಕಟ್ಟಿಯ 80ನೇ ಮತಗಟ್ಟೆಯಲ್ಲಿ ಶೇ. 62.67ರಷ್ಟು ಮತದಾನವಾಗಿದ್ದು ಅತಿ ಕಡಿಮೆ ಮತದಾನವಾಗಿರುವ ಮತಗಟ್ಟೆಯಾಗಿದೆ.
ರಟ್ಟಿಹಳ್ಳಿ ತಾಲೂಕಿನ ಕುಡಪಲಿ ಗ್ರಾಪಂ ವ್ಯಾಪ್ತಿಯ ಬಡಸಂಗಾಪುರದ 23ನೇ ಮತಗಟ್ಟೆಯಲ್ಲಿ ಶೇ. 95.50ರಷ್ಟು ಮತದಾನವಾಗಿದ್ದು, ತಾಲೂಕಿನಲ್ಲಿಯೇ ಅತಿ ಹೆಚ್ಚು ಮತದಾನವಾದ ಮತಗಟ್ಟೆಯಾಗಿದೆ. ಅಣಜಿ ಗ್ರಾಪಂ ವ್ಯಾಪ್ತಿಯ ಗುಡ್ಡದಮಾದಾಪುರ ಗ್ರಾಮದ 59ನೇ ಮತಗಟ್ಟೆಯಲ್ಲಿ ಶೇ. 70.98ರಷ್ಟು ಮತದಾನವಾಗಿದ್ದು, ಅತಿಕಡಿಮೆ ಮತದಾನವಾದ ಮತಗಟ್ಟೆಯಾಗಿದೆ.
ನೂರರಷ್ಟು ಪುರುಷ, ಮಹಿಳಾ ಮತದಾನ: ರಾಣೆಬೆನ್ನೂರ ತಾಲೂಕಿನ ಉಕ್ಕುಂದ ಗ್ರಾಪಂ ವ್ಯಾಪ್ತಿಯ ವೀರಾಪುರ ಗ್ರಾಮದ 146 (ಎ) ಮತಗಟ್ಟೆಯಲ್ಲಿರುವ 224 ಮಹಿಳಾ ಮತದಾರರೂ ಹಕ್ಕು ಚಲಾಯಿಸಿದ್ದು, ಶೇ. 100ಕ್ಕೆ 100ರಷ್ಟು ಮಹಿಳಾ ಮತದಾನವಾಗಿದೆ. ಹಿರೇಕೆರೂರ ತಾಲೂಕಿನ ಕೋಡ ಗ್ರಾಪಂ ವ್ಯಾಪ್ತಿಯ ಉಜನೀಪುರದ 73ನೇ ಮತಗಟ್ಟೆಯಲ್ಲಿ 133 ಪುರುಷ ಮತದಾರರಿದ್ದು, ಎಲ್ಲರೂ ಮತ ಚಲಾಯಿಸಿ ಶೇ. 100ಕ್ಕೆ 100ರಷ್ಟು ಮತದಾನವಾಗಿರುವುದು ವಿಶೇಷವಾಗಿದೆ.