

ಬೆಂಗಳೂರು: ಹೈಕೋರ್ಟ್ ನೆಲಮಹಡಿಯಲ್ಲಿ 400ಕ್ಕೂ ಅಧಿಕ ಸಿಬ್ಬಂದಿ ಉಸಿರುಗಟ್ಟಿಸುವ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿರುವ ಕಚೇರಿಗಳನ್ನು ಸ್ಥಳಾಂತರಿಸಲೆಂದೇ ಕಬ್ಬನ್ಪಾರ್ಕ್ ಆವರಣದಲ್ಲಿ ಅನೆಕ್ಸ್ ಕಟ್ಟಡ ನಿರ್ಮಾಣ ಪ್ರಸ್ತಾವನೆ ಇತ್ತು. ಅದರಿಂದ ಪರಿಸರ ಹಾನಿಯಾಗುತ್ತದೆ ಎಂದು ಹೋರಾಟ ಮಾಡುತ್ತೀರಿ. ಪರಿಸರದ ಬಗ್ಗೆ ನಿಮಗಿಂತ ಹೆಚ್ಚಿನ ಕಾಳಜಿ ಹೈಕೋರ್ಟ್ಗೆ ಇದೆ. ಪ್ರಕೃತಿಗೆ ಹಾನಿಯಾಗುವಂತೆ ಒಂದೇ ಒಂದು ಇಟ್ಟಿಗೆಯನ್ನೂ ಇಡುವುದಿಲ್ಲ.
ಹೈಕೋರ್ಟ್ ಅನೆಕ್ಸ್ ಕಟ್ಟಡ ನಿರ್ಮಾಣ ಮಾಡುವುದನ್ನು ವಿರೋಧಿಸಿ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಈ ರೀತಿ ಖಾರವಾಗಿ ಸ್ಪಷ್ಟನೆ ನೀಡಿದೆ.
ಕಟ್ಟಡ ನಿರ್ವಣಕ್ಕೆ 2019ರ ನ.6ರಂದು ಹೈಕೋರ್ಟ್ ಪೂರ್ಣ ಪೀಠದ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ. ಸರ್ಕಾರ ಅನುಮೋದನೆ ನೀಡಿದರೆ ಹಾಗೂ ನಾಗರಿಕರ ಹಕ್ಕು, ಪರಿಸರ ಕಾಯ್ದೆ ಅನುಮೋದಿಸಿದರೆ ಮಾತ್ರ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ. ನಿರ್ವಣಕ್ಕೆ ಹೈಕೋರ್ಟ್ ಈವರೆಗೂ ಯಾವುದೇ ನಕ್ಷೆ ತಯಾರಿಸಿಲ್ಲ. ಬಿಬಿಎಂಪಿಯಿಂದ ನಕ್ಷೆ ಮಂಜೂರಾತಿ ಕೋರಿಲ್ಲ. ನಿರ್ಣಯವಷ್ಟೇ ಕೈಗೊಳ್ಳಲಾಗಿದೆ. ಇನ್ನು ಯಾವುದೇ ಅಂತಿಮ ತೀರ್ವನವಾಗಿಲ್ಲ. ನಿರ್ಣಯ ಏನೆಂದು ಪೂರ್ತಿ ತಿಳಿಯದೇ ಈ ಹಂತದಲ್ಲೇ ಪರಿಸರಕ್ಕೆ ಧಕ್ಕೆಯಾಗುತ್ತದೆ ಎಂದು ಕೇವಲ ಊಹಾಪೋಹದ ಮೇಲೆ ಸಲ್ಲಿಸಿರುವ ಪಿಐಎಲ್ ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿತು.
ಕೋರ್ಟ್ಗೂ ಪರಿಸರದ ಕಾಳಜಿ ಇದೆ
ಮಾರ್ಚ್ ಅಂತ್ಯದ ವೇಳೆ ರಾಜ್ಯ ಹೈಕೋರ್ಟ್ನ ನ್ಯಾಯಮೂರ್ತಿಗಳ ಸಂಖ್ಯೆ 50 ತಲುಪುವ ನಿರೀಕ್ಷೆ ಇದೆ. ಈಗಿರುವ ಕಟ್ಟಡದಲ್ಲಿ ಎಲ್ಲ ನ್ಯಾಯಮೂರ್ತಿಗಳಿಗೂ ಕೋರ್ಟ್ ಹಾಲ್ಗಳು ಮತ್ತು ಅವರ ಕಚೇರಿಗಳ ಕೊರತೆ ಎದುರಾಗಲಿದೆ. ಇನ್ನು ನೆಲಮಹಡಿಯಲ್ಲಿ 400ಕ್ಕೂ ಅಧಿಕ ಸಿಬ್ಬಂದಿ ಗಾಳಿ-ಬೆಳಕು ವ್ಯವಸ್ಥೆ ಇಲ್ಲದೆ ಅಮಾನವೀಯ ವಾತಾವರಣದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅದರ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲದವರು ಪರಿಸರ ರಕ್ಷಣೆಯ ಬಗ್ಗೆ ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಕಿಡಿ ಕಾರಿತು. ಒಂದು ಕಡೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ, ಮತ್ತೊಂದೆಡೆ ಪ್ರತಿಭಟನೆ ನಡೆಸುತ್ತೀರಿ. ಪರಿಸರ ಕಾಳಜಿ ಕೇವಲ ಸಂಘ ಸಂಸ್ಥೆಗಳ ಏಕಸ್ವಾಮ್ಯವಲ್ಲ. ನಿಮಗಿಂತ ಹೆಚ್ಚಿನ ಕಾಳಜಿ ನ್ಯಾಯಾಲಯ ಸಹ ಹೊಂದಿದೆ. ಪರಿಸರಕ್ಕೆ ಹಾನಿಯಾಗುವ ರೀತಿಯಲ್ಲಿ ಒಂದೇ ಒಂದು ಇಟ್ಟಿಯನ್ನೂ ಇಡುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು. ಸರ್ಕಾರಿ ವಕೀಲರು, ಕಟ್ಟಡ ನಿರ್ವಣಕ್ಕೆ ಸ್ಥಳ ಗುರುತಿಸಲಾಗುತ್ತಿದ್ದು, ಮತ್ತಷ್ಟು ಕಾಲಾವಕಾಶದ ಅಗತ್ಯವಿದೆ ಎಂದು ತಿಳಿಸಿದರು. ಅದನ್ನು ಪರಿಗಣಿಸಿದ ಪೀಠ, ಕಟ್ಟಡ ನಿರ್ಮಾಣ ಪ್ರಸ್ತಾವನೆಗೆ ಸಂಬಂಧಿಸಿದಂತೆ ಸರ್ಕಾರ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದನ್ನು ಮುಂದಿನ ವಿಚಾರಣೆ ವೇಳೆಗೆ ತಿಳಿಸಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.