

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೈ ಪ್ರೊಫೈಲ್ ಡ್ರಗ್ ಪೆಡ್ಲಿಂಗ್ ಪ್ರಕರಣಗಳು ಹೆಚ್ಚುತ್ತಿದ್ದು, ಸಮಾಜದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿದೆ. ಅದರಲ್ಲೂ ದೇಶದ ಭವಿಷ್ಯವಾಗಿರುವ ಯುವಪೀಳಿಗೆಯ ಜೀವನವನ್ನೇ ಹಾಳು ಮಾಡುತ್ತಿದೆ ಎಂದು ಹೈಕೋರ್ಟ್ ಆತಂಕ ವ್ಯಕ್ತಪಡಿಸಿದೆ.
ಗಾಂಜಾ ಸಾಗಾಟ ಆರೋಪದಲ್ಲಿ ತನ್ನ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಕೋರಿ ಅಬ್ದುಲ್ ಅಲೀಂ ಎಂಬ ವ್ಯಕ್ತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎ. ಪಾಟೀಲ ಅವರಿದ್ದ ಪೀಠ, ಈ ರೀತಿ ಕಳವಳ ವ್ಯಕ್ತಪಡಿಸಿದೆ.
ಡ್ರಗ್ಸ್ ಮಾರಾಟ ಜಾಲ ಸಮಾಜಕ್ಕೆ ಕಂಟಕವಾಗಿದೆ. ಅದನ್ನು ಬುಡಸಹಿತ ಕಿತ್ತೊಗೆಯಬೇಕಿದೆ. ಇಂಥ ಪ್ರಕರಣಗಳಲ್ಲಿ ಭಾಗಿಯಾದವರ ವಿರುದ್ಧ ಯಾವ ಮುಲಾಜಿಲ್ಲದೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಸಂಬಂಧಪಟ್ಟ ಅಧಿಕಾರಿಗಳು ಪ್ರಕರಣಗಳಲ್ಲಿ ಸಮರ್ಪಕ ತನಿಖೆ ನಡೆಸುವ ಅಗತ್ಯವಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರಕರಣವೇನು?: ಡ್ರಗ್ಸ್ ಸಾಗಾಟದ ಬಗ್ಗೆ ದೊರೆತ ಮಾಹಿತಿ ಆಧರಿಸಿ ಎನ್‌ಸಿಬಿ ಅಧಿಕಾರಿಗಳು 2013ರ ಆ.27ರಂದು ಅಬ್ದುಲ್ ಅಲೀಂ ಕಾರು ತಡೆದು ತಪಾಸಣೆ ನಡೆಸಿದ್ದರು. ಈ ವೇಳೆ ಕಾರ್‌ನಲ್ಲಿದ್ದ ಬ್ಯಾಗ್ ಒಂದರಲ್ಲಿ 15.5 ಕೆಜಿಯಷ್ಟು ಒಣಗಿದ ಗಾಂಜಾ ಎಲೆಗಳು ದೊರೆತಿದ್ದವು. ಅದನ್ನ ವಶಕ್ಕೆ ಪಡೆದ ಎನ್‌ಸಿಬಿ ಅಧಿಕಾರಿಗಳು ಅಬ್ದುಲ್ ಅಲೀಂ ವಿರುದ್ಧ ಮಾದಕದ್ರವ್ಯ ಮತ್ತು ನಶೆಯ ವಸ್ತುಗಳು (ಎನ್‌ಡಿಪಿಎಸ್) ಕಾಯ್ದೆ - 1985ರ ಸೆಕ್ಷನ್ 20(ಬಿ), 28, 29 ಹಾಗೂ 32ಬಿ(ಡಿ) ಅಡಿ ಪ್ರಕರಣ ದಾಖಲಿಸಿದ್ದರು. ಇದನ್ನು ರದ್ದುಕೋರಿ ಅಬ್ದುಲ್ ಅಲೀಂ ಹೈಕೋರ್ಟ್ ಮೆಟ್ಟಿಲೇರಿದ್ದ.
ಒಣ ಎಲೆಗಳು ಗಾಂಜಾ ಅಲ್ಲ: ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಪಂಚನಾಮೆಯಲ್ಲಿ 15 ಕೆಜಿಯಷ್ಟು ಒಣಗಿದ ಎಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ. ಆದರೆ, ಎನ್‌ಡಿಪಿಎಸ್ ಕಾಯ್ದೆಯ ಪ್ರಕಾರ ಒಣ ಎಲೆಗಳನ್ನು ಗಾಂಜಾ ಎಂದು ಪರಿಗಣಿಸಲು ಸಾಧ್ಯವಿಲ್ಲ. ಗಾಂಜಾ ಗಿಡದ ಬೀಜಗಳು, ಹೂವು ಅಥವಾ ಹೂವು ಬಿಡುವ ತುದಿಗಳನ್ನು ಒಳಗೊಂಡಿದ್ದರೆ ಅಂತಹ ಪದಾರ್ಥಗಳು ಅಪರಾಧಿಕ ನಶೆಯ ಪದಾರ್ಥ ಎನಿಸಿಕೊಳ್ಳುತ್ತವೆ. ಹಾಗಾಗಿ ಭಂಗಿ ಬೀಜಗಳಿಲ್ಲದ ಬರಿದೇ ಗಾಂಜಾ ಸೊಪ್ಪನ್ನು ಅಮಲಿನ ಪದಾರ್ಥಗಳ ಪಟ್ಟಿಯಲ್ಲಿ ಸೇರಿಸಲು ಅವಕಾಶವಿಲ್ಲ. ಪ್ರಯೋಗಾಲಯದ ವರದಿಯಲ್ಲಿ ಬ್ಯಾಗ್‌ನಲ್ಲಿ ಒಣ ಎಲೆ, ಹೂವು, ಬೀಜ ಹಾಗೂ ಹಣ್ಣುಗಳಿದ್ದವು ಎಂದು ಹೇಳಲಾಗಿದೆಯಾದರೂ ಅಮಲಿನ ಪದಾರ್ಥದ ಪ್ರಮಾಣ ಎಷ್ಟಿತ್ತು ಎಂಬುದನ್ನು ನಿರ್ದಿಷ್ಟವಾಗಿ ಹೇಳಲಾಗಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಹೈಕೋರ್ಟ್ ಹೇಳಿದ್ದೇನು?: ಅರ್ಜಿದಾರರ ಪರ ವಕೀಲರ ವಾದ ಪರಿಗಣಿಸಿದ ಪೀಠ, ಇತ್ತೀಚಿನ ದಿನಗಳಲ್ಲಿ ಮಾದಕದ್ರವ್ಯ ಸಂಬಂಧಿತ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಯುವಕ ಯುವತಿಯರೂ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಆದರೆ, ಈ ಪ್ರಕರಣದಲ್ಲಿ ಕಾನೂನಾತ್ಮಕ ಅಂಶಗಳ ಕೊರತೆಯ ಕಾರಣ ನ್ಯಾಯಾಲಯ ಅಸಹಾಯಕವಾಗಿದೆ. ಪ್ರಕರಣದಲ್ಲಿ ವಶಪಡಿಸಿಕೊಂಡಿರುವ ವಸ್ತು ಎನ್‌ಡಿಪಿಎಸ್ ಕಾಯ್ದೆ ವ್ಯಾಪ್ತಿಗೆ ಒಳಪಡದ ಕಾರಣ ಆರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಲಾಗುತ್ತಿದೆ ಎಂದು ಆದೇಶದಲ್ಲಿ ತಿಳಿಸಿದೆ.