

ಬೆಳಗಾವಿ: ಲೋಕಸಭಾ ಚುನಾವಣೆಯಲ್ಲಿ ನನಗೆ ಸ್ಪರ್ಧೆ ಮಾಡಿ ಎಂದು ಹೈಕಮಾಂಡ್ ಹೇಳಿಲ್ಲ. ಬದಲಾಗಿ ಹೆಚ್ಚು ಸ್ಥಾನ ಗೆಲ್ಲಿಸುವಂತೆ ತಯಾರಿ ನಡೆಸುವಂತೆ ಎಲ್ಲರಿಗೂ ಸೂಚನೆ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಿ ಹಾಗೂ ಮಾಜಿ ಸಚಿವರಿಗೆ ಸ್ಪರ್ಧೆ ಮಾಡಬೇಕು ಎಂದು ಎಲ್ಲಿಯೂ ಹೇಳಿಲ್ಲ. ಗೆಲ್ಲುವ ಅಭ್ಯರ್ಥಿಗೆ ಮಣೆ ಹಾಕಿ ಅವರಿಗೆ ಅವಕಾಶ ಕೊಡುತ್ತೇವೆ. ವಿಧಾನಸಭಾ ಚುನಾವಣೆ ಮಾದರಿಯಲ್ಲಿ ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ ಎದುರಿಸಲಿದೆ ಎಂದರು.
ನಮ್ಮ ಜಿಲ್ಲೆಯಲ್ಲಿ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸುವುದು ನಮ್ಮ ಕರ್ತವ್ಯ ಇದೆ. ಈಗಾಗಲೇ ಬೆಂಗಳೂರಿನಲ್ಲಿ ಒಂದು ಬಾರಿ ಅಭ್ಯರ್ಥಿ ಆಯ್ಕೆಯ ಬಗ್ಗೆ ಚರ್ಚೆಯಾಗಿದೆ. ಎರಡನೇ ಬಾರಿ ಆದಷ್ಟು ಬೇಗ ಬೆಳಗಾವಿಯಲ್ಲಿ ಸಭೆ ಮಾಡಿ ಚರ್ಚೆ ಮಾಡುತ್ತೇವೆ. ರಾಜ್ಯದಿಂದ ಅತೀ ಹೆಚ್ಚು ಸ್ಥಾನ ಗೆಲ್ಲಿಸಬೇಕು. ಆದ್ದರಿಂದ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕೆಂದು ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಎಲ್ಲರಿಗೂ ಸೂಚನೆ ನೀಡಿದ್ದಾರೆ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಣ್ಣದ ಬಗ್ಗೆ ಮಾಜಿ ಸಚಿವ ಆರಗ ಜ್ಞಾನೇಂದ್ರ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಇಂತಹ ಹೇಳಿಕೆ ನೀಡುತ್ತಿರುತ್ತಾರೆ. ಆ ಹೇಳಿಕೆಯನ್ನು ಅವರು ವಾಪಸ್ ಪಡೆದಿದ್ದಾರೆ. ಅದನ್ನು ಮುಂದುವರೆಸುವ ಅಗತ್ಯ ಇಲ್ಲ ಎಂದರು.
ಲೋಕೋಪಯೋಗಿ ಕೆಲಸದ ನಿಮಿತ್ತ ನಾನು ದೆಹಲಿಗೆ 3 ಬಾರಿ ಹೋಗಿದ್ದೇನೆ. ಮೊನ್ನೆ ಹೋದ ಸಂದರ್ಭದಲ್ಲಿ ಇಲಾಖೆಯ ಸಭೆಯ ಜತೆಗೆ ರಾಜಕೀಯ ಚರ್ಚೆಯ ಸಭೆಯಲ್ಲಿಯೂ ಭಾಗವಹಿಸಿದ್ದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ನಮ್ಮ ನಡುವೆ ಅಧಿಕಾರಿಗಳ ವರ್ಗಾವಣೆಯಲ್ಲಿ ಕೋಲ್ಡ್ ವಾರ್ ನಡೆಯುತ್ತಿಲ್ಲ. ಅವರವರ ಕ್ಷೇತ್ರದದಲ್ಲಿ ಅಧಿಕಾರಿಗಳ ವರ್ಗಾವಣೆ ಮಾಡಿಕೊಳ್ಳುವುದು ಅವರಿಗೆ ಬಿಟ್ಟಿದ್ದು. ಅದನ್ನು ರಾಜು ಶೇಠ ಅವರಿಗೆ ಸಂಬಂಧಿಸಿದ್ದು, ನಮ್ಮಿಬ್ಬರ ನಡುವೆ ಕೋಲ್ಡ್ ವಾರ್ ಇದೆ ಎನ್ನುವುದಕ್ಕೂ ಸರಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು 2 ತಿಂಗಳಿಂದ ಆರೋಪ ಮಾಡುತ್ತಿದ್ದಾರೆ. ಅದಕ್ಕೆ ಯಾವುದೇ ದಾಖಲೆ ಸಿಗಲ್ಲ. ಸಾಬೀತು ಮಾಡುವುದು ಕಷ್ಟ. ಈಗಾಗಲೇ ನಮ್ಮ ಸದಸ್ಯರು ಸದನದಲ್ಲಿ ದಾಖಲೆ ಕೊಡುವಂತೆ ಹೇಳಿದ್ದಾರೆ. ಇದನ್ನು ಪದೇ ಪದೇ ಚರ್ಚೆ ಮಾಡೊದು ಅವಶ್ಯಕತೆ ಇಲ್ಲ ಎಂದರು.
ಸರ್ಕಾರ 5 ವರ್ಷ ಅಭಿವೃದ್ಧಿಗೆ ಆದ್ಯತೆ ನೀಡುತ್ತದೆ. ಇದರ ಮಧ್ಯೆ ಆರೋಪ ಬರುತ್ತಲೇ ಇರುತ್ತವೆ. ಈ ಬಗ್ಗೆ ಹೆಚ್ಚು ಗಮನ ಕೊಡುವುದು ಅವಶ್ಯಕತೆ ಇಲ್ಲ ಎಂದರು. ಬಿಜೆಪಿ 40 ಪರ್ಸಂಟ್ ಸರ್ಕಾರ ಎಂದು ಆರೋಪ ಮಾಡಿದ್ದೆವು. ಯಾವುದು ತನಿಖೆ ಆಗಲಿಲ್ಲ ಎಂದರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.