ದಸರೆ ಅಖಾಡದಲ್ಲಿ ವಿಜೃಂಭಿಸಿದ ‘ಕುಸ್ತಿ’ ಪರಂಪರೆ

49
Published on

ಅವಿನಾಶ್ ಜೈನಹಳ್ಳಿ ಮೈಸೂರು
ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಮೂರು ವರ್ಷಗಳ ಬಳಿಕ ಆಯೋಜಿಸಿರುವ ನಾಡ ಕುಸ್ತಿ ಪಂದ್ಯಾವಳಿಯಲ್ಲಿ ಗಂಡುಕಲೆ ‘ಕುಸ್ತಿ’ ಪರಂಪರೆ ವಿಜೃಂಭಿಸಿತು.


2019ರ ಬಳಿಕ ದಸರೆಯಲ್ಲಿ ನಾಡಿನ ಗಂಡುಕಲೆ ನಾಡ ಕುಸ್ತಿ ಪಂದ್ಯಾವಳಿ ರಂಗೇರಿದ್ದು, ದಸರಾ ಕುಸ್ತಿ ಅಖಾಡದಲ್ಲಿ ನಿರೀಕ್ಷಿಸಿದ್ದ ಹುರಿಯಾಳುಗಳನ್ನು, ನಿರೀಕ್ಷೆಗೂ ಮೀರಿ ಸೇರಿದ್ದ ಪ್ರೇಕ್ಷಕರು ಹುರಿದುಂಬಿಸುತ್ತಿದ್ದರು. ಅಷ್ಟೇ ಅಲ್ಲ! ಮಟ್ಟಿ ಮೇಲೆ ಜಟ್ಟಿತನ ಮೆರೆದ ಪೈಲ್ವಾನರಿಗೆ ಶಿಳ್ಳೆ, ಚಪ್ಪಾಳೆಯ ಪ್ರೋತ್ಸಾಹ ನೀಡಿದರು.


ಹಿರಿಯ ಪೈಲ್ವಾನ್‌ರು ತಂದ ಕುಸ್ತಿ ಪಂದ್ಯಾವಳಿಯ ಜ್ಯೋತಿಯನ್ನು ಕ್ರೀಡಾ ಸಚಿವ ನಾರಾಯಣ ಗೌಡ ಸ್ವೀಕರಿಸಿ ಆಯೋಜಕರಿಗೆ ಹಸ್ತಾಂತರಿಸಿದರು. ಕ್ರೀಡಾ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಶಾಸಕ ಎಲ್.ನಾಗೇಂದ್ರ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಅಪರ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ, ದಸರಾ ಕುಸ್ತಿ ಉಪ ಸಮಿತಿ ಅಧ್ಯಕ್ಷ ಕೆ.ದೇವರಾಜು, ಕಾರ್ಯದರ್ಶಿ ಎಸ್.ಜೆ. ಹರ್ಷವರ್ಧನ ಸಾಥ್ ನೀಡಿದರು.

ಬಳಿಕ ಕ್ರೀಡಾ ಸಚಿವರು ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡುತ್ತಿದ್ದಂತೆ ಕ್ರೀಡಾಂಗಣದ ಮೂಲೆ-ಮೂಲೆಯಲ್ಲಿ ಆಸೀನರಾಗಿದ್ದ ಪ್ರೇಕ್ಷರಿಂದ ನೆಚ್ಚಿನ ಪೈಲ್ವಾನರಿಗೆ ಜೈಕಾರ ಮೊಳಗಿದವು. ಬಗೆಬಗೆಯ ಹೂಗಳಿಂದ ಅಲಂಕಾರಗೊಂಡ ಮಟ್ಟಿಯ ಮೇಲೆ ಪೈಲ್ವಾನರು ವಿಭಿನ್ನ ಪಟ್ಟು ಪ್ರದರ್ಶಿಸಿದರು. ಮದಗಜಗಳ ರೀತಿ ಪೈಲ್ವಾನರು ಸೆಣೆಸುತ್ತಿದ್ದಂತೆ ಕಿಕ್ಕಿರಿದು ಸೇರಿದ್ದ ಕುಸ್ತಿ ಪ್ರೇಮಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ನೆಚ್ಚಿನ ಜಟ್ಟಿಗಳು ಪರಾಕ್ರಮ ಮೆರೆದು ಎದುರಾಳಿಯನ್ನು ಚಿತ್ ಮಾಡಿದಾಗ ಶಿಳ್ಳೆ, ಚಪ್ಪಾಳೆಗಳಿಂದ ಅಭಿನಂದನೆ ಸಲ್ಲಿಸುತ್ತಿದ್ದರು. ಪ್ರೇಕ್ಷಕರು ಮೊದಲ ಕುಸ್ತಿಯಲ್ಲಿ ತೋರಿಸಿದ ಹುಮ್ಮಸ್ಸನ್ನು ಕಡೆವರೆಗೂ ಉಳಿಸಿಕೊಂಡರು. ಇನ್ನು ಸ್ಟಾರ್ ಪೈಲ್ವಾನರ ಕುಸ್ತಿ ಪಂದ್ಯಾವಳಿಗಳನ್ನು ಬಿಟ್ಟಕಣ್ಣು ಬಿಟ್ಟಂತೆ ನೋಡಿ ಮೈಮರೆತರು.


ಈ ಬಾರಿ ವಿಶೇಷವಾಗಿ ದಸರಾ ಕಿಶೋರ್ ಹಾಗೂ ದಸರಾ ಕಿಶೋರಿ ಎರಡು ಪ್ರಶಸ್ತಿಗಳ ಕುಸ್ತಿಗಳನ್ನು ಆಡಿಸಲಾಗುತ್ತಿದೆ. ಮಹಿಳಾ ಕುಸ್ತಿ ಪಟುಗಳಿಗೆ ದಸರಾ ಕಿಶೋರಿ ಸ್ಪರ್ಧೆ, 57 ಕೆ.ಜಿ.ಯಿಂದ 65 ಕೆ.ಜಿ. ವಿಭಾಗದಲ್ಲಿ ದಸರಾ ಕಿಶೋರ್ ಪ್ರಶಸ್ತಿ ಕುಸ್ತಿ ನಡೆಯುತ್ತಿದೆ.
ಮೈಸೂರು ವಿಭಾಗ ಮಟ್ಟದ ಪಾಯಿಂಟ್ ಕುಸ್ತಿ ವಿಭಾಗದಲ್ಲಿ ‘ದಸರಾ ಕುಮಾರ’( 74 ಕೆ.ಜಿ.ಮೇಲ್ಪಟ್ಟ) ಪ್ರಶಸ್ತಿ ನೀಡಲಾಗುತ್ತದೆ. ಉಳಿದಂತೆ ‘ದಸರಾ ಕಂಠೀರವ’( 86ಕೆ.ಜಿ.ಮೇಲ್ಪಟ್ಟ ), ‘ದಸರಾ ಕೇಸರಿ’( 86 ಕೆ.ಜಿ. ವರೆಗೆ) ಕುಸ್ತಿಗಳು ನಡೆಯಲಿವೆ. ನಾಡ ಕುಸ್ತಿ ಜತೆಗೆ ಮೈಸೂರು ವಿಭಾಗ ಮಟ್ಟದ ಪುರುಷರ ಫ್ರೀ ಸ್ಟೈಲ್ ಕುಸ್ತಿ, ರಾಜ್ಯಮಟ್ಟದ ಪುರುಷರ ಗ್ರೀಕೋ ರೋಮನ್ ಕುಸ್ತಿ, ರಾಜ್ಯ ಮಟ್ಟದ ಮಹಿಳೆಯರ ಕುಸ್ತಿ, ರಾಜ್ಯ ಮಟ್ಟದ ಪುರುಷರ ಫ್ರೀ ಸ್ಟೈಲ್ ಕುಸ್ತಿಗಳು ನಡೆಯಲಿವೆ.
ದಸರಾ ಕಂಠೀರವ, ದಸರಾ ಕೇಸರಿ, ದಸರಾ ಕುಮಾರ್, ದಸರಾ ಕಿಶೋರಿ ಮತು ್ತ ದಸರಾ ಕಿಶೋರ್ ಪ್ರಶಸ್ತಿಗಳಿಗೆ ಕ್ರಮವಾಗಿ 1.25 ಕೆ.ಜಿ, 1 ಕೆ.ಜಿ., 0.75 ಕೆ.ಜಿ., 0.50 ಕೆ.ಜಿ. ಮತ್ತು 0.50 ಕೆ.ಜಿ. ತೂಕದ ಬೆಳ್ಳಿ ಗದೆಗಳನ್ನು ನೀಡಲಾಗುತ್ತಿದೆ.

ನಿರಾಸೆ ಮೂಡಿಸಿ ಉದ್ಘಾಟನಾ ಕುಸ್ತಿ:
ಕೊಲ್ಲಾಪುರ ಪೈ.ಸಿದ್ದಶ್ವರ್ ಮೌಲಿ ಜಮದಾಳೆ ಮತ್ತು ಹರಿಯಾಣದ ಸೀನಿಯರ್ ಮೆಡಲೀಸ್ಟ್ ಪೈ.ವಿಕಾಸ್ ಕಾಳ ನಡುವೆ ನಡೆದ ಉದ್ಘಾಟನಾ ಕುಸ್ತಿ ಡ್ರಾನಲ್ಲಿ ಅಂತ್ಯಗೊಂಡು ನಿರಾಸೆ ಮೂಡಿಸಿತು. ಒಂದು ಗಂಟೆ ನಿಗದಿಯಾಗಿದ್ದ ಕುಸ್ತಿಯಲ್ಲಿ ಇಬ್ಬರು ಪೈಲ್ವಾನರು ಸಮಬಲ ಸಾಧಿಸಿದರು.
ನಿಯಮ ತಿಳಿಯದೆ ಗೊಂದಲ:
ಕುಸ್ತಿಯ ಮಧ್ಯೆ ಕೆಲ ಗೊಂದಲ ಮೂಡಿತು. ನಿಯಮ ತಿಳಿಯದ ಕೊಲ್ಲಾಪುರ ಪೈ.ಸಿದ್ದಶ್ವರ್ ಮೌಲಿ ಜಮದಾಳೆ ಗೊಂದಲಗೊಂಡು ಆಯೋಜಕರ ಜತೆ ಹಾಗೂ ತೀರ್ಪುಗಾರರ ಜತೆ ವಾಗ್ವಾದ ನಡೆಸಿದರು. ಜಮದಾಳೆ ತಮ್ಮ ಎದುರಾಳಿಯನ್ನು ತಮ್ಮ ಭಾಗದ ಮಾದರಿಯ ರೀತಿ ಚಿತ್ ಮಾಡಲು ಯತ್ನಿಸಿದರು. ಇದಕ್ಕೆ ತೀರ್ಪುಗಾರ ಮೈಸೂರು ಭಾಗದ ಮಾದರಿಯಲ್ಲಿ ಚಿತ್ ಮಾಡುವಂತೆ ಸೂಚಿಸಿದ್ದಾಗ ಕುಸ್ತಿ ಕೆಲಕಾಲ ಗೊಂದಲಗೊಂಡಿತು. ಬಳಿಕ ಅವರಿಗೆ ಮನವರಿಕೆ ಮಾಡಲಾಯಿತು. ನಂತರ 45 ನಿಮಿಷಕ್ಕೆ ಕುಸ್ತಿಯನ್ನು ಡ್ರಾ ಎಂದು ೋಷಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net