ಹೆಳವರು ನಮ್ಮ ನಡುವಿನ ಮೌಖಿಕ ಚರಿತ್ರಕಾರರು: ಲೇಖಕ ಬಂಜಗೆರೆ ಜಯಪ್ರಕಾಶ್

11
Published on

ಮೈಸೂರು: ಕುಲದ ಕಥನಗಳನ್ನು ಕಟ್ಟಿಕೊಡುವ ಹೆಳವರು ನಮ್ಮ ನಡುವೆ ಇರುವ ಮೌಖಿಕ ಚರಿತ್ರಕಾರರು ಎಂದು ಲೇಖಕ ಬಂಜಗೆರೆ ಜಯಪ್ರಕಾಶ್ ಬಣ್ಣಿಸಿದರು.

ರಂಗಾಯಣದಿಂದ ಭೂಮಿಗೀತದಲ್ಲಿ ಭಾನುವಾರ ಆಯೋಜಿಸಿದ್ದ ‘ಮಾತಿನ ಮನೆ’ ಕಾರ್ಯಕ್ರಮದಲ್ಲಿ ಆದಿವಾಸಿ ಅಲೆಮಾರಿ ಕಲಾವಿದರೊಂದಿಗೆ ಮಾತುಕತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅರಣ್ಯ ಜೀವನ ಬಳಿಕ ಹೆಳವರು ಗ್ರಾಮೀಣ ಜೀವನಕ್ಕೆ ಬಂದಾಗ ಊರಿನ ಗೌಡರ ಕುಲ, ಗೋತ್ರಗಳನ್ನು ಹೇಳಲು ಕಥನದ ಮೂಲಕ ಹಾಡುಕೊಟ್ಟಿ ಹೇಳುತ್ತಿದ್ದರು. ಅದು ಬಾಯಿಂದ ಬಾಯಿಗೆ ಮುಂದಿನ ತಲೆಮಾರಿಗೆ ಹೋಗುತ್ತಿತ್ತು ಎಂದರು.

ಹೆಳವರು ಅಲ್ಲದೇ ಎಲ್ಲ ಅಲೆಮಾರಿ ಸಂಚಾರಿ ಕಲಾವಿದರಿಗೂ ಅವರದೇ ಆದ ಮಹತ್ವ ಮತ್ತು ಪ್ರಸ್ತುತತೆ ಇದೆ. ಇವರು ಮೌಖಿಕ ಚರಿತ್ರಕಾರರಾಗಿದ್ದು, ಅವರ ಕಥನಗಳನ್ನು ದಾಖಲೀಕರಣ ಮಾಡುವುದರ ಮೂಲಕ ಅಧ್ಯಯನ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ಗೌಡ ಆಳ್ವಿಕೆಯ ಕುಟುಂಬಗಳ ಕುಲ, ಗೋತ್ರಗಳ ಚರಿತ್ರೆಯನ್ನು ಹೆಳವರು ಮೌಖಿಕವಾಗಿ ಇಟ್ಟುಕೊಂಡಿದ್ದಾರೆ. ಅವರ ಬಳಿ ಸ್ವಲ್ಪ ಮಟ್ಟಿನ ದಾಖಲೆಗಳಿವೆ. ಆ ದಾಖಲಾತಿಯನ್ನು ಒದಗಿಸಲು ಅವರಿಂದ ಮಾತ್ರ ಸಾಧ್ಯ. ಅದನ್ನು ಸಂಗ್ರಹಿಸಿದರೆ ಮುಂದಿನ ಜೀವನಕ್ಕೆ ಅನುಕೂಲವಾಗಲಿದೆ ಎಂದರು.

ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಮಾತನಾಡಿ, ಅಲೆಮಾರಿ ಸಮುದಾಯಗಳು ನಮ್ಮ ಸಂಸ್ಕೃತಿಯ ಬೇರುಗಳು. ಅಲೆಮಾರಿ ಸಮುದಾಯಗಳು ವ್ಯಕ್ತಪಡಿಸುತ್ತಿದ್ದ ಕಲೆ, ತಲೆಮಾರಿನಿಂದ ತಲೆಮಾರಿಗೆ ತಲುಪಿಸುತ್ತಿದ್ದ ಕಲೆಗಳು ಇಂದು ಅಳಿವಿನಂಚಿನಲ್ಲಿವೆ ಎಂದು ಹೇಳಿದರು.

ಈ ಕಲೆಗಳನ್ನು ದಾಖಲಿಸುವುದು ಮತ್ತು ಅದರಲ್ಲಿನ ಸತ್ವಗಳನ್ನು ಇವತ್ತಿನ ರಂಗಭೂಮಿಗೆ ಅಳವಡಿಸಿಕೊಳ್ಳುವುದು ಜತೆಗೆ ಮುಂದಿನ ಪೀಳಿಗೆಗೆ ತಲುಪಿಸುವುದು ಈ ಕಾರ್ಯಕ್ರಮದ ಮುಖ್ಯಉದ್ದೇಶ ಎಂದು ತಿಳಿಸಿದರು.

ಮೃತರನ್ನು ಹೊಗಳಿ ಸ್ವರ್ಗಕ್ಕೆ ಕಳುಹಿಸುತ್ತೇವೆ:

ನಮ್ಮ ವೃತ್ತಿಯೇ ಊರೂರು ಅಲೆಗೆ ಕುಲದ ಹಾಡು ಹೇಳುತ್ತಾ ಭಿಕ್ಷೆ ಬೇಡುವುದು. ಯಾರಾದರೂ ಮೃತಪಟ್ಟಾಗ ಅಂತವರ ಮನೆಗೆ ಹೋಗಿ ಅವರ ನೋವಿನಲ್ಲಿ ಭಾಗಿಯಾಗುತ್ತೇವೆ. ಅಲ್ಲದೇ ಮೃತರನ್ನು ಹಾಡಿ ಹೊಗಳಿ ಸ್ವರ್ಗಕ್ಕೆ ಕಳುಹಿಸುತ್ತೇವೆ ಎಂದು ಆದಿವಾಸಿ ಅಲೆಮಾರಿ ಹೆಳವ ಕಲಾವಿದರು ತಮ್ಮ ಅನುಭವ ಹಂಚಿಕೊಂಡರು.

ಯಾರಾದರೂ ತೀರಿಕೊಂಡರೆ ಆ ಮನೆಯವರು ನಮ್ಮನ್ನು ಕರೆಸಿಕೊಳ್ಳುತ್ತಾರೆ. ನಾವು ಕಥೆ ಹೇಳಿ, ಅವರನ್ನು ಹೊಗಳಿ ಸ್ವರ್ಗಕ್ಕೆ ಕಳುಹಿಸುತ್ತೇವೆ. ಸತ್ತ ದಿನ ಮಾತ್ರವಲ್ಲದೇ ಕಾರ್ಯಗಳ ದಿನವೂ ಹೋಗಿ ಕಥೆ ಹೇಳುತ್ತಿದ್ದೆವು ಎಂದು ಪಾಂಡವಪುರ ತಾಲೂಕು ಹೆಳವರ ಕೊಪ್ಪಲಿನ ಹೆಳವರ ಮಲ್ಲಯ್ಯ ಹೇಳಿದರು.

ನಮ್ಮ ತಂದೆಯ ಕಾಲದಲ್ಲಿ ಊಟಕ್ಕೂ ಕಷ್ಟ ಇತ್ತು. ಬಡತನ ಜಾಸ್ತಿ ಇದ್ದುದ್ದರಿಂದ ತಂದೆಯ ಜತೆ ಹೋಗಿ ಕಥೆ ಹೇಳುತ್ತಿದ್ದ್ದೆವು. ನಾವು ಮನೆ ಮನೆಗೆ ಹೋಗಿ ಭಿಕ್ಷೆ ಬೇಡುವಾಗ ಕೆಲವರು ನಮ್ಮನ್ನು ಬೈಯುತ್ತಾರೆ. ಆಗ ನಾವು ಬೇಜಾರು ಮಾಡಿಕೊಳ್ಳದೇ ಮುಂದಿನ ಭಿಕ್ಷೆಗೆ ಹೋಗುತ್ತೇವೆ ಎಂದರು.

ಪಾಂಡವಪುರ ತಾಲೂಕಿನ ಹೆಳವರ ಕೊಪ್ಪಲಿನ ಹೆಳವರ ಮಲ್ಲಯ್ಯ ಅವರ ಜತೆ ಶಿವಯ್ಯ, ಅಪ್ಪಾಜಿಯ್ಯ, ಬಸವಣ್ಣ ಮಾತುಕತೆಯಲ್ಲಿ ಭಾಗವಹಿಸಿದ್ದರು. ಲೇಖಕ ಅಬ್ದುಲ್ ರಶೀದ್ ಮಾತುಕತೆ ನಡೆಸಿಕೊಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ರಂಗ ನಿರ್ದೇಶಕ ಸುರೇಶ್‌ಬಾಬು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net