

ಕೈಲಾಂಚ: ಹತ್ತು ವರ್ಷಗಳಿಂದ ಮಲಗಿದ್ದಲ್ಲೇ ಬದುಕು ನಡೆಸುತ್ತಿರುವ ಮೂಡ್ಲಳ್ಳಿದೊಡ್ಡಿಯ ಪೆರಿಯಣ್ಣನ ಬದುಕಿಗೆ ನೆರವು ಕಲ್ಪಿಸಲು ತಾಲೂಕು ಆಡಳಿತ ಮುಂದಾಗಿದೆ.
ಮರದಿಂದ ಬಿದ್ದು ಕಾಲುಗಳನ್ನು ಮುರಿದುಕೊಂಡ ಪರಿಣಾಮ ಹಾಸಿಗೆಯಲ್ಲೇ ಜೀವನ ಸವೆಸುತ್ತಿರುವ ಪೆರಿಯಣ್ಣನ ಕರುಣಾಜನಕ ಸ್ಥಿತಿ ಕುರಿತು ‘10 ವರ್ಷಗಳಿಂದ ಹಾಸಿಗೆಯಲ್ಲೇ ಬದುಕು’ ಶೀರ್ಷಿಕೆಯಲ್ಲಿ ಸೆ.17ರಂದು ‘ವಿಜಯವಾಣಿ’ ವರದಿ ಪ್ರಕಟಿಸಿತ್ತು.
ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ತೇಜಸ್ವಿನಿ ಆದೇಶದ ಮೇರೆಗೆ ಮೂಡ್ಲಳ್ಳಿದೊಡ್ಡಿ ಪೆರಿಯಣ್ಣ ಮನೆಗೆ ಉಪತಹಸೀಲ್ದಾರ್ ರುದ್ರಮ್ಮ, ರಾಜಸ್ವ ನಿರೀಕ್ಷಕ ಪುಟ್ಟರಾಜು ಬುಧವಾರ ಭೇಟಿ ನೀಡಿ ಮಾಹಿತಿ ಪಡೆದರು.
ಆಧಾರ್ ಕಾರ್ಡ್ ಇಲ್ಲದ ಕಾರಣ ಸರ್ಕಾರದ ಸೌಲಭ್ಯದಿಂದ ವಂಚಿತನಾಗಿರುವ ಜತೆಗೆ ವೃದ್ಧ ತಾಯಿಯೊಂದಿಗೆ ಸಂಕಷ್ಟದ ಬದುಕು ನಡೆಸುತ್ತಿರುವ ಪೆರಿಯಣ್ಣ, ಅಧಿಕಾರಿಗಳ ಮುಂದೆ ಸಂಕಷ್ಟದ ಚಿತ್ರಣ ತೆರೆದಿಟ್ಟರು.
ಆಧಾರ್ ಕಾರ್ಡ್ ಇಲ್ಲದೆ ಪಡಿತರ ಬರುತ್ತಿಲ್ಲ. ಇತ್ತೀಚೆಗೆ ಪಡಿತರ ಚೀಟಿಯಿಂದ ಹೆಸರು ತೆಗೆದುಹಾಕಿದ್ದಾರೆ. ಅಂಗವಿಕಲನಾಗಿದ್ದರೂ ಯಾವುದೇ ಸೌಲಭ್ಯ ನೀಡುತ್ತಿಲ್ಲ. ವೃದ್ಧ ತಾಯಿ ನನ್ನನ್ನು ಸಲಹಬೇಕಿದೆ. ಇದ್ದ ಮನೆ ಮುರಿದು ಬೀಳುತ್ತಿರುವುದರಿಂದ ಬೇರೆಯವರ ಜಾಗದಲ್ಲಿ ವಾಸಿಸುತ್ತಿದ್ದೇವೆ. 10 ವರ್ಷಗಳಿಂದ ಹಾಸಿಗೆಯಿಂದ ಮೇಲೇಳಲು ಆಗಿಲ್ಲ. ಆಧಾರ್ ಕಾರ್ಡ್ ಮಾಡಿಸಲು ಹೋಗಲು ಆಗುವುದಿಲ್ಲ. ಅನಾರೋಗ್ಯ ಎದುರಾದರೂ ಆಸ್ಪತ್ರೆಗೆ ಹೋಗದ ಸ್ಥಿತಿ ಇದ್ದು, ಮಾತ್ರೆ ನುಂಗಿಯೇ ರೋಗ ವಾಸಿ ಮಾಡಿಕೊಳ್ಳಬೇಕಿದೆ. ತಾಯಿಯನ್ನು ಆರೈಕೆ ಮಾಡಬೇಕಾದ ವೇಳೆಯಲ್ಲಿ ಅವರೇ ನನ್ನನ್ನು ಸಲಹಬೇಕಾದ ಸ್ಥಿತಿ ಎದುರಾಗಿದೆ ಎಂದು ಪೆರಿಯಣ್ಣ ಕಣ್ಣೀರು ಹಾಕಿದರು.
"ಪೆರಿಯಣ್ಣ ಅವರ ಸಮಸ್ಯೆ ಬಗ್ಗೆ ಮಾಹಿತಿ ಪಡೆಯಲಾಗಿದೆ. ಪಡಿತರ ಚೀಟಿಯಲ್ಲಿ ಹೆಸರು ತಪ್ಪಾಗಿದ್ದು, ತಿದ್ದುಪಡಿ ಆಗಬೇಕು. ಆಧಾರ್ ಕಾರ್ಡ್‌ಗೆ ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಬೇಕು. ಶೀಘ್ರವೇ ಮತದಾರರ ಗುರುತಿನ ಚೀಟಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಕಾನೂನಾತ್ಮಕವಾಗಿ ಅವರಿಗೆ ಸರ್ಕಾರದಿಂದ ನೀಡುವ ಅಂಗವಿಕಲ ಮಾಸಾಶನ ಸೌಲಭ್ಯ ದೊರಕಿಸಿಕೊಡಲು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತಾಲೂಕು ಆಡಳಿತ ಕ್ರಮ ಕೈಗೊಳ್ಳುತ್ತದೆ."
-ರುದ್ರಮ್ಮ (ಉಪ ತಹಸೀಲ್ದಾರ್ ರಾಮನಗರ)