

ಹುಲಿಯೂರುದುರ್ಗ: ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ನೀಲಸಂದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಪ್ರಶ್ನೆ ಮಾಡಿದ್ದಕ್ಕೆ ಮಾಜಿ ಅಧ್ಯಕ್ಷರನ್ನು ಶಾಲೆಯಲ್ಲಿ ಕೂಡಿಹಾಕಿದ್ದ ಆರೋಪ ಮುಖ್ಯಶಿಕ್ಷಕರ ವಿರುದ್ಧ ಕೇಳಿಬಂದಿದೆ.
ಏನಿದು ಪ್ರಕರಣ?: ನೀಲಸಂದ್ರ ಶಾಲೆಯ ಅತಿಥಿ ಶಿಕ್ಷಕರಿಬ್ಬರು ಇತ್ತೀಚೆಗೆ ರಾಜೀನಾಮೆ ನೀಡಿದ್ದು, ಈ ಬಗ್ಗೆ ಚರ್ಚಿಸುವ ಸಲುವಾಗಿ ನ.13ರಂದು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ಸದಸ್ಯರ ಸಭೆಯನ್ನು ಮುಖ್ಯಶಿಕ್ಷಕ ದೊಡ್ಡಯ್ಯ ಕರೆದಿದ್ದರು. ಈ ವೇಳೆ ಯಾವುದೇ ಮಾಹಿತಿ ನೀಡದೆ ಸಭಾ ನಡಾವಳಿಯಲ್ಲಿ ಸಹಿ ಪಡೆದು, ನಂತರ ಅವರಿಗೆ ಬೇಕಾದವರನ್ನು ಅಧ್ಯಕ್ಷ ಹಾಗೂ ಸದಸ್ಯರನ್ನಾಗಿ ನೇಮಿಸಿಕೊಂಡಿದ್ದರು ಎನ್ನಲಾಗಿದೆ. ವಿಷಯ ತಿಳಿದ
ಎಸ್ಡಿಎಂಸಿ ಮಾಜಿ ಅಧ್ಯಕ್ಷೆ ಗೀತಾ ಪ್ರಶ್ನಿಸಲು ಗುರುವಾರ ಸಂಜೆ ಶಾಲೆಗೆ ತೆರಳಿದ್ದರು. ಈ ವೇಳೆ ಮುಖ್ಯಶಿಕ್ಷಕರು, ಗೀತಾ ಅವರನ್ನು ಗೇಟ್ಗೆ ಬೀಗ ಹಾಕಿ ಕೂಡಿಹಾಕಿದ್ದಾರೆ. ನಂತರ 112 ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ಗೇಟ್ ಬೀಗ ತೆಗೆಸಿ ಈಚೆ ಕಳುಹಿಸಿದ್ದಾರೆ ಎನ್ನಲಾಗಿದೆ.
ಟಿವಿಯಲ್ಲಿ ಪಾಠ?
ಶಾಲೆಯ ಶಿಕ್ಷಕರು ಸಮಯಕ್ಕೆ ಶಾಲೆಗೆ ಬರುತ್ತಿಲ್ಲ. ಪಾಠ ಮಾಡುತ್ತಿಲ್ಲ. ಶಾಲೆಯಲ್ಲಿರುವ ಟಿವಿಯಲ್ಲಿ ಪಾಠ ಹಾಕುತ್ತಾರೆ. ನಮಗೆ ಬೇರೆ ಶಿಕ್ಷಕರು ಬೇಕು ಎಂದು ಮಕ್ಕಳು ಪೋಲಿಸರ ಮುಂದೆ ಅಳಲು ತೋಡಿಕೊಂಡರು. ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಿಕೊಳ್ಳಲು ಸೂಚಿಸಿದರು.
ಹಳೇ ಅಧ್ಯಕ್ಷರ ಸಹಿ ಬಳಸಿ ಹಣ ಡ್ರಾ?
ಶಾಲೆಯಲ್ಲಿ 24 ಮಕ್ಕಳಿದ್ದು, ಶಿಕ್ಷಕರು ಶಾಲೆಗೆ ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಶಾಲೆಯ ಅಭಿವೃದ್ಧಿ ಸಮಿತಿಯ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಹಳೇ ಅಧ್ಯಕ್ಷರ ಸಹಿ ಪಡೆದು ಡ್ರಾ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದ ಕಾರಣ ನನ್ನ ಮೇಲೆ ಗ್ರಾಮಸ್ಥರನ್ನು ಎತ್ತಿ ಕಟ್ಟಿ, ಗಲಾಟೆ ಮಾಡಿ, ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಗೀತಾ ಆರೋಪಿಸಿದರು.
ನೀಲಸಂದ್ರ ಗ್ರಾಮದ ಶಾಲೆಯಲ್ಲಿ ಎಸ್ಡಿಎಂಸಿ ಅಧ್ಯರ ಬದಲಾವಣೆ ನನ್ನ ಗಮನಕ್ಕೆ ಬಂದಿಲ್ಲ. ಶಾಲೆಗೆ ಭೇಟಿ ನೀಡಿ, ಅಲ್ಲಿನ ಬೆಳವಣಿಗೆಗಳ ಮಾಹಿತಿ ಪಡೆದು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. - ಬೋರೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ, ಕುಣಿಗಲ್