ಕಾಡಾನೆಗಳ ಶಾಶ್ವತ ಸ್ಥಳಾಂತರಕ್ಕೆ ಆಗ್ರಹ

ಕಾಡಾನೆಗಳ ಶಾಶ್ವತ ಸ್ಥಳಾಂತರಕ್ಕೆ ಆಗ್ರಹ
Published on

ಬೇಲೂರು: ದಿನದಿಂದ ದಿನಕ್ಕೆ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಪ್ರತಿನಿತ್ಯ ಒಂದಿಲ್ಲೊಂದು ಗ್ರಾಮಕ್ಕೆ ನುಗ್ಗಿ ಬೆಳೆ ತಿಂದು, ತುಳಿದು ನಾಶಪಡಿಸುವುದಲ್ಲದೆ, ಕಾಲಿಗೆ ಸಿಕ್ಕ ವಸ್ತುಗಳನ್ನೆಲ್ಲ ಧ್ವಂಸ ಮಾಡಿ ನಷ್ಟ ಉಂಟು ಮಾಡುತ್ತಿವೆ. ತಕ್ಷಣ ಆನೆಗಳನ್ನು ಕಾಡಿಗಟ್ಟಬೇಕು ಎಂದು ಆಗ್ರಹಿಸಿ ಸುತ್ತಮುತ್ತಲಿನ ರೈತರು ಚೌಡನಹಳ್ಳಿ ಹಾಗೂ ಬೊಮ್ಮಡಿಹಳ್ಳಿಯಲ್ಲಿ ನಡುವೆ ಶನಿವಾರ ಪ್ರತಿಭಟನೆ ನಡೆಸಿದರು.

ತಾಲೂಕಿನ ಬಿಕ್ಕೋಡು ಹೋಬಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಾಲ್ಕೈದು ತಿಂಗಳಿಂದ ಬೀಡುಬಿಟ್ಟಿರುವ ಕಾಡಾನೆ ಹಿಂಡಿನ ಉಪಟಳ ಹೇಳ ತೀರದಾಗಿದೆ. ಬಿಕ್ಕೋಡು ಸಮೀಪದ ಕಾಫಿ ಎಸ್ಟೇಟ್‌ವೊಂದರಲ್ಲಿ ಬೀಡು ಬಿಡುತ್ತಿದ್ದ 40ಕ್ಕೂ ಹೆಚ್ಚು ಕಾಡಾನೆಗಳು ಕೆಲ ದಿನಗಳಿಂದ ದಿಕ್ಕು ಬದಲಿಸಿ ಬಿಕ್ಕೋಡು ಹೋಬಳಿಯ ಬೊಮ್ಮಡಿಹಳ್ಳಿ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿವೆ. ಇವು ಕತ್ತಲಾಗುತಿದ್ದಂತೆಯೇ ಅರಣ್ಯ ಸಮೀಪದಿಂದ ಕೆಲವೇ ದೂರದಲ್ಲಿರುವ ಕೋಗಿಲಮನೆ, ಕೊತ್ತನಹಳ್ಳಿ, ಚೌಡನಹಳ್ಳಿ ಬೊಮ್ಮಡಿಹಳ್ಳಿ ಕರಡಗೋಡು, ಮೊಗಸಾವರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ 15 ದಿನಗಳಿಂದ ಹಾವಳಿ ಹೆಚ್ಚಾಗಿದೆ ಎಂದು ಅಲವತ್ತುಕೊಂಡರು.

ರೈತರು ಬೆಳೆದ ಭತ್ತ, ರಾಗಿ, ಕಾಫಿ, ಅಡಕೆ, ಜೋಳ, ಶುಂಠಿ ಬೆಳೆಗಳನ್ನು ತಿಂದು ನಾಶಪಡಿಸುವುದಲ್ಲದೆ ತುಳಿದು ಹಾಳು ಮಾಡುತ್ತಿವೆ. ಇದರಿಂದಾಗಿ ರೈತರು ಬೆಳೆ ಕೈ ಸೇರುವ ಮುನ್ನವೇ ನಾಶವಾಗುತ್ತಿದೆ. ಬೆಳೆ ನಷ್ಟದ ಜತೆಗೆ ಜನಸಾಮಾನ್ಯರು ಜೀವದ ಹಂಗನ್ನು ತೊರೆದು ಓಡಾಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶುಕ್ರವಾರ ರಾತ್ರಿ ಸಹ ಬೊಮ್ಮಡಿಹಳ್ಳಿ ಗ್ರಾಮದ ಶಂಕರಯ್ಯ ಅವರಿಗೆ ಸೇರಿದ ಕೊಟ್ಟಿಗೆಯ ಮೇಲೆ ದಾಳಿ ಮಾಡಿರುವ ಕಾಡಾನೆಯೊಂದು ಕೊಟ್ಟಿಗೆಯ ಛಾವಣಿ ಪುಡಿ ಮಾಡಿ, ಕೊಟ್ಟಿಗೆಯಲ್ಲಿದ್ದ ಜಾನುವಾರುಗಳ ಮೇಲೆ ದಾಳಿ ಮಾಡಿದ್ದರಿಂದ ಜಾನುವಾರುಗಳು ಸಣ್ಣಪುಟ್ಟ ಗಾಯದೊಂದಿಗೆ ಪ್ರಾಣಾಪಾಯದಿಂದ ಪಾರಾಗಿವೆ. ಅಲ್ಲದೆ ತೋಟ ಜಮೀನುಗಳಲ್ಲಿ ನೀರು ಹಾಯಿಸಲು ಅಳವಡಿಸಿದ್ದ ಪೈಪ್‌ಗಳು, ಮೋಟಾರ್ ಪಂಪ್‌ಸೆಟ್ ಸೇರಿದಂತೆ ಇತರೆ ಸಾಮಾಗ್ರಿಗಳನ್ನು ನಾಶಪಡಿಸುತ್ತಿವೆ. ಕಾಡಾನೆಗಳು ದಿನದಿಂದ ದಿನಕ್ಕೆ ಆಹಾರ ಅರಸಿ ಒಂದು ಊರಿನಿಂದ ಮತ್ತೊಂದು ಊರಿಗೆ ತೆರಳುತ್ತಿದ್ದು, ಇನ್ನಾದರೂ ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಮಲೆನಾಡು ಭಾಗದಲ್ಲಿ ಕಾಡಾನೆಗಳಿಂದ ರೈತರಿಗಾಗುತ್ತಿರುವ ನಷ್ಟವನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.

ಶಾಶ್ವತ ಸ್ಥಳಾಂತರವಾಗಲಿ: ಬೊಮ್ಮಡಿಹಳ್ಳಿ ಗ್ರಾಮದ ರೈತ ಕುಮಾರಸ್ವಾಮಿ ಮಾತನಾಡಿ, ನಮ್ಮ ಭಾಗದ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿದೆ. ಈ ಬಾರಿ ಉತ್ತಮ ಬೆಳೆ ಬೆಳೆದಿದ್ದರೂ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಕಾಡಾನೆಗಳು ಹಾಳು ಮಾಡುತ್ತಿವೆ. ಜತೆಗೆ ಇನ್ನಷ್ಟು ಬೆಳೆ ಹಾಗೂ ಜೀವ ಹಾನಿಯಾಗುವ ಮುನ್ನ ಕಾಡಾನೆಗಳನ್ನು ಹಿಡಿದು ಶಾಶ್ವತವಾಗಿ ಸ್ಥಳಾಂತರ ಮಾಡಬೇಕು. ಹಗಲು-ರಾತ್ರಿ ಎನ್ನದೆ ತಿರುಗುತ್ತಿರುವ ಕಾಡಾನೆಗಳಿಂದಾಗಿ ಜನರು ಮನೆಯಿಂದ ಹೊರ ಬರುವುದಕ್ಕೆ ಭಯ ಪಡುತ್ತಿದ್ದಾರೆ. ಆದ್ದರಿಂದ ಶೀಘ್ರವೇ ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಇಲ್ಲದಿದ್ದರೆ ತೀವ್ರ ಸ್ವರೂಪದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಬೊಮ್ಮಡಿಹಳ್ಳಿ ಗ್ರಾಮಸ್ಥರಾದ ಧರ್ಮರಾಜ್, ಶೇಖರ್, ಶಿವೇಗೌಡ, ಸೋಮಶೇಖರ್, ಮಂಜುನಾಥ್, ಜಗದೀಶ್, ಆಶೋಕ್, ಗಿರೀಶ್, ಶಂಕರಯ್ಯ, ಕುಮಾರ್ ಸೇರಿದಂತೆ ಇತರರಿದ್ದರು.

ಫಸಲು ಕೈ ಸೇರುವ ಮುನ್ನವೇ ನಾಶ: ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿ ಚೌಡನಹಳ್ಳಿ, ಬೊಮ್ಮಡಿಹಳ್ಳಿ, ಕರಡಗೋಡು, ಮೊಗಸಾವರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೆಲ ದಿನಗಳಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿರುವುದರಿಂದ ರೈತರು ಬೆಳೆದ ಫಸಲು ಕೈ ಸೇರುವ ಮುನ್ನವೇ ನಾಶ ಮಾಡುತ್ತಿವೆ. ಸಾರ್ವಜನಿಕರು ತಮ್ಮ ಜೀವದ ಹಂಗು ತೊರೆದು ಜೀವ ಭಯದಲ್ಲೆ ಬದುಕುವಂತಾಗಿದ್ದು, ಶಾಶ್ವತವಾಗಿ ಕಾಡಾನೆಗಳನ್ನು ಕಾಡಿಗಟ್ಟಿ ಗ್ರಾಮಸ್ಥರ ಬೆಳೆ ರಕ್ಷಿಸುವ ಮೂಲಕ ಜೀವ ರಕ್ಷಿಸಬೇಕು ಎಂದು ಚೌಡನಹಳ್ಳಿ ಗ್ರಾಮದ ಸಮೀಪ ಈ ಭಾಗದ ಸುತ್ತಮುತ್ತಲಿನ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net