

ವೆಂಕಟರಾಜು ಎಸ್. ದೊಡ್ಡಬಳ್ಳಾಪುರ
ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಂಗ್ರಹವಾಗುವ ಕೋಳಿ ಹಾಗೂ ಪ್ರಾಣಿಜನ್ಯ ತ್ಯಾಜ್ಯವನ್ನು ನಗರದ ಮಧ್ಯ ಭಾಗದಲ್ಲಿರುವ ರಸ್ತೆ ಬದಿ, ಪಟ್ಟಣದ ಹೊರವಲಯದ ರಸ್ತೆಗಳ ಬಳಿ ಸುರಿಯುತ್ತಿದ್ದು, ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಗಿದೆ. ರಸ್ತೆಯಲ್ಲಿ ಸಾರ್ವಜನಿಕರು ದುರ್ವಾಸನೆಗೆ ಮೂಗುಮುಚ್ಚಿಕೊಂಡು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೋಳಿ ಮತ್ತು ಮಾಂಸ ಮಾರಾಟ ಮಳಿಗೆಗಳ ಮಾಲೀಕರು, ನಿಯಮ ಗಾಳಿಗೆ ತೂರಿ ರಸ್ತೆ ಬದಿಯಲ್ಲೇ ವಿಲೇ ಮಾಡುವುದು ಸಾಮಾನ್ಯ ಎನ್ನುವಂತಾಗಿದೆ. ನಿರ್ಜನ ಪ್ರದೇಶದಲ್ಲಿ ಗುಂಡಿ ತೆಗೆದು, ಕೋಳಿ ತ್ಯಾಜ್ಯವನ್ನು ಮುಚ್ಚಿ ವಿಲೇವಾರಿ ಮಾಡಬೇಕಿರುವುದು ನಿಯಮ. ಆದರೆ ಈ ಗೋಜಿಗೆ ಹೋಗದೆ ಪ್ಲಾಸ್ಟಿಕ್ ಚೀಲಗಳಲ್ಲಿ ತ್ಯಾಜ್ಯ ತುಂಬಿ ರಸ್ತೆ ಬದಿಯಲ್ಲಿ ಬಿಸಾಡುತ್ತಿರುವುದರಿಂದ ಈ ಪ್ರದೇಶಗಳು ಗಬ್ಬುನಾರುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ತಾಣವಾಗಿದೆ.
ನಾಯಿಗಳ ಕಾಟಕ್ಕೆ ಹೈರಾಣ: ತ್ಯಾಜ್ಯ ದುರ್ವಾಸನೆ ಜತೆಗೆ ಮಾಂಸ ತಿನ್ನಲು ಬರುವ ಬೀದಿ ನಾಯಿಗಳಿಂದ ಸಾರ್ವಜನಿಕರಿಗೆ ಇನ್ನಷ್ಟು ತೊಂದರೆ ಎದುರಾಗಿದೆ. ಮಾಂಸ ತ್ಯಾಜ್ಯ ಆಸ್ವಾದಿಸುತ್ತಾ, ರಸ್ತೆ ಬದಿಯಲ್ಲಿ ಹೋಗುವ ದಾರಿಹೋಕರ ಮೇಲೆ ನಾಯಿಗಳು ದಾಳಿ ನಡೆಸುವ ಪ್ರಕರಣಗಳು ಹೆಚ್ಚುತ್ತಿವೆ.
ಮಾಂಸದ ಅಂಗಡಿಗಳ ತ್ಯಾಜ್ಯದ ಕುರಿತು ಸಮಸ್ಯೆ ಗಮನಕ್ಕೆ ಬಂದಿದೆ. ಕೋಳಿ ಅಂಗಡಿಗಳು ಹಾಗೂ ಇತರ ಮಾಂಸದ ಅಂಗಡಿಗಳ ಮಾಲೀಕರ ಸಭೆ ಏರ್ಪಡಿಸಿ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವಂತೆ ಎಚ್ಚರಿಕೆ ನೀಡಲಾಗುವುದು. ರಮೇಶ್ ಸುಣಗಾರ್ ಪೌರಾಯುಕ್ತ, ದೊಡ್ಡಬಳ್ಳಾಪುರ ನಗರಸಭೆ ಕೋಳಿ ತ್ಯಾಜ್ಯವನ್ನು ನಿರ್ಜನ ಪ್ರದೇಶಗಳಲ್ಲಿ ವಿಲೇವಾರಿ ಮಾಡಬೇಕಾಗುತ್ತದೆ. ಕೆಲ ಕೋಳಿ ಅಂಗಡಿ ಮಾಲೀಕರು ಇದನ್ನು ಅನುಸರಿಸುತ್ತಿಲ್ಲ. ಇನ್ನೂ ಕೆಲವರು ರಸ್ತೆ ಬದಿಯಲ್ಲಿ, ಗುಂಡಿಗಳಲ್ಲಿ, ಕೆರೆ ಏರಿ ರಸ್ತೆಗಳಲ್ಲಿ ಬಿಸಾಡುತ್ತಿದ್ದಾರೆ. ಇದರಿಂದ ರಸ್ತೆಗಳಲ್ಲಿ ಓಡಾಡುವುದು ಕಷ್ಟವಾಗಿದೆ. ರಮೇಶ್ ರಾಜೀವ್ ಗಾಂಧಿ ಕಾಲನಿ ನಿವಾಸಿ ದಾಬಸ್‌ಪೇಟೆ-ದೊಡ್ಡಬಳ್ಳಾಪುರ ಹೆದ್ದಾರಿ, ಮಾದಗೊಂಡನಹಳ್ಳಿ ರಸ್ತೆ, ರಾಜೀವ್ ಗಾಂಧಿ ಕಾಲನಿ ಒಂದನೇ ಹಂತ ಸೇರಿ ಹಲವೆಡೆ ರಸ್ತೆ ಬದಿಯಲ್ಲಿ ಕೋಳಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ. ಜಗನ್ನಾಥ್ ಸ್ಥಳೀಯ ನಿವಾಸಿ