ಅನ್ನದಾತರ ಶ್ರಮ ಅನ್ಯರಿಗೆ ಲಾಭ: ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು

16
Published on

ಮೈಸೂರು: ರೈತರು ಮಾಡಿದ ಪರಿಶ್ರಮಕ್ಕೆ ಸೂಕ್ತ ಬೆಲೆ ಸಿಗದೆ ಬೇರೆಯವರು ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.

ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಸೋಮವಾರ ಕರ್ನಾಟಕ ರಾಜ್ಯ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ರೈತ ಸಮಾವೇಶದಲ್ಲಿ ಅವರು ಮಾತನಾಡಿದರು.

ಹಗಲು, ರಾತ್ರಿ ಎನ್ನದೆ ರೈತರ ಇಡೀ ಕುಟುಂಬ ಕೃಷಿ ಮಾಡಿ ದೇಶದ ಜನರಿಗೆ ಅನ್ನ ನೀಡುತ್ತಾರೆ. ಆದರೆ ಅವರ ಪರಿಶ್ರಮಕ್ಕೆ ಸೂಕ್ತ ಬೆಲೆಯೇ ಸಿಗದಂತಾಗಿದೆ. ಬೆಳೆಗೆ ಸೂಕ್ತ ಲಾಭ ದೊರೆಯದೆ, ಮಧ್ಯವರ್ತಿಗಳು ಲಾಭ ಮಾಡಿಕೊಳ್ಳುವಂತಹ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದರು.

ಈ ಕುರಿತು ಎಲ್ಲ ಪಕ್ಷಗಳ ಸರ್ಕಾರಗಳಿಗೂ ಮನವಿ ಸಲ್ಲಿಸುತ್ತಾ ಬಂದರೂ ಯಾವುದೇ ಕ್ರಮ ವಹಿಸಿಲ್ಲ. ಹಾಗಾಗಿ ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಮತ ಹಾಕುವ ಕುರಿತು ತೀರ್ಮಾನಿಸಬೇಕಾಗುತ್ತದೆ ಎನ್ನುವ ಸ್ಪಷ್ಟ ಸಂದೇಶವನ್ನು ರಾಜಕೀಯ ಪಕ್ಷಗಳ ಮುಂದಿಡಬೇಕಾಗುತ್ತದೆ ಎಂದರು.

ಸ್ಥಾವರಕ್ಕೆ ಅಳಿವುಂಟು, ಜಂಗಮಕ್ಕೆ ಅಳಿವಿಲ್ಲ ಎನ್ನುವ ಬಸವಣ್ಣ ಅವರ ವಚನದಂತೆ ಇಲ್ಲಿ ಸ್ಥಾವರ ಎಂಬುದು ಸರ್ಕಾರವಾದರೆ, ರೈತರು ಜಂಗಮ. ಸರ್ಕಾರಕ್ಕೆ ಅಳಿವಿದೆ, ರೈತರಿಗೆ ಅಲ್ಲ. ರೈತರು ಎರಡು ವರ್ಷ ಹೊಲ ಉಳಲಿಲ್ಲ. ಬೆಳೆಯಲಿಲ್ಲ ಎಂದರೆ ಏನಾಗುತ್ತದೆ ಹೇಳಿ ಎಂದು ಅವರು ಪ್ರಶ್ನಿಸಿದರು.

ಸರ್ಕಾರ ನಡೆಸುವವರು ನೀವು ಜಂಗಮರಾಗಿ ರೈತರ ಹತ್ತಿರ ಬಂದು ಕೆಲಸ ಮಾಡಬೇಕಿತ್ತು. ಇಲ್ಲ ಯಾರನ್ನಾದರೂ ಪ್ರತಿನಿಧಿಯನ್ನಾದರೂ ಕಳುಹಿಸಬೇಕಿತ್ತು. ಇದು ಬೇಜವಾಬ್ದಾರಿತನವಾಗುತ್ತದೆ. ನಿಮ್ಮ 21 ಬೇಡಿಕೆಗಳಲ್ಲಿ ಬಹುತೇಕ ಮಾಡಬೇಕಿರುವುದೆ. ಮುಂದಿನ ದಾರಿಯಲ್ಲಿ ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಕಾಯಕವೇ ಕೈಲಾಸ ಎಂದರು ಬಸವಣ್ಣ. ದುಡಿಮೆ, ದಾಸೋಹವೇ ನಮ್ಮ ಕಾಯಕ, ಕರ್ಮ ಎಂದು ಹೇಳಿದರು.

ನಾವು ಬೆಳೆಯುತ್ತೇವೆ, ಬೇರೆಯವರು ಬದುಕುತ್ತಿದ್ದಾರೆ. ನಮ್ಮ ಗೋಳನ್ನು ಕೇಳುವವರು ಯಾರು? ಆದ್ದರಿಂದಲೇ ಇಂತಹ ಹೋರಾಟ ಹಮ್ಮಿಕೊಂಡಿದ್ದೇವೆ. ಲಂಚಾವತಾರ ಹೆಚ್ಚಿ ಅಧಿಕಾರ ಕೇಂದ್ರೀಕರಣ ಮಾಡಿಕೊಳ್ಳಲಾಗಿದೆ. ಹತ್ತಿ ಬೆಳೆದವರು ಹಾಗೆಯೇ ಇದ್ದಾರೆ, ಬಟ್ಟೆ ಮಾರುವವನು ಶ್ರೀಮಂತ. ಬಾಳೆಕಾಯಿ, ಆಲೂಗಡ್ಡೆ ಬೆಳೆಯುವವರು ನಾವು, ಚಿಪ್ಸ್ ಮಾಡುವವರು ದುಡ್ಡು ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದರು.

ರೈತರ ಮುಗ್ಧತೆ ದುರ್ಬಳಕೆ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುರುಬೂರು ಶಾಂತಕುಮಾರ್ ಮಾತನಾಡಿ, ರೈತರ ಮುಗ್ಧತೆಯನ್ನು ದುರ್ಬಳಕೆ ಮಾಡಿಕೊಂಡು ಅವರಲ್ಲಿ ಜಾತಿ ವಿಷ ಬೀಜ ಬಿತ್ತಿ ಎಲ್ಲ ಸರ್ಕಾರಗಳು ದಬ್ಬಾಳಿಕೆ ನಡೆಸಿವೆ. ಸರ್ಕಾರಿ ನೌಕರಿಗಳಿಗೆ ಸಂಬಳ ಹೆಚ್ಚು ಮಾಡಿದ್ದಾರೆ. ಆದರೆ ರೈತರ ಬದುಕು ದುಸ್ಥಿತಿಗೆ ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದರು.

ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುತ್ತಿಲ್ಲ. ಈ ಬಾರಿ ಭತ್ತ ನಷ್ಟವಾಗುತ್ತಿದೆ. ರೈತ ಸಾಲದ ದವಡೆಗೆ ಸಿಲುಕಿ ನರಳುತ್ತಿದ್ದಾನೆ. ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ಖಾತ್ರಿ ಆಗಬೇಕು. ಭತ್ತದ ಬೆಲೆ ಕುಸಿದಿದೆ. ರಾಜ್ಯ ಸರ್ಕಾರ ಗ್ಯಾರಂಟಿ ಕೊಡುತ್ತಿರುವುದರಿಂದ ಸರ್ಕಾರ ಹೈನುಗಾರಿಕೆಗೆ ಕೊಡುತ್ತಿದ್ದ ಪ್ರೋತ್ಸಾಹ ಧನ ಸ್ಥಗಿತವಾಗಿದೆ. ರೈತರ ಮಕ್ಕಳಿಗೆ ವಿದ್ಯಾನಿಧಿ ಹಣವನ್ನೂ ನಿಲ್ಲಿಸಿದ್ದಾರೆ. ಅಧಿಕಾರಕ್ಕೆ ಬಂದ ಕೂಡಲೇ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಹಿಂದಕ್ಕೆ ತೆಗೆದುಕೊಳ್ಳುತ್ತೇವೆ ಎಂದಿದ್ದರು. ಆದರೆ ಮಾಡಲಿಲ್ಲ ಎಂದು ಅವರು ಟೀಕಿಸಿದರು.

ತೆಲಂಗಾಣದ ಪ್ರಗತಿಪರ ರೈತ ವೆಂಕಟೇಶ್, ಲಕ್ಷ್ಮೀದೇವಿ ಮಹಿಳಾ ಸಂಘದ ಅಧ್ಯಕ್ಷ ವಸಂತ ಕುಮಾರ್, ತಮಿಳುನಾಡಿನ ಪ್ರಗತಿಪರ ರೈತರಾದ ಬಾಬು, ಶ್ರೀರಾಮನ್, ಗೌಂಡರ್, ಆರ್.ಪಿ. ಪಾಂಡಿಯನ್, ಬಿಜು ಇತರರು ಇದ್ದರು.

ರಂಜಿಸಿದ ತಂಡ

ನಿವೃತ್ತ ಅಧಿಕಾರಿ ಡಾ.ಕಾ.ರಾಮೇಶ್ವರಪ್ಪ ಅವರ ನೇತೃತ್ವದಲ್ಲಿ ಇನಿದನಿ ಮಣ್ಣ ಮಕ್ಕಳ ಹೊನ್ನ ಪದಗಳ ಬಳಗದ ಕಲಾವಿದರಿಂದ ಜಾನಪದ ಸಂಗೀತ ವೈಭವ ಪ್ರಸ್ತುತಗೊಂಡಿತು. ತಮ್ಮ ವಿಭಿನ್ನ ಗಾಯನ ಶೈಲಿಯ ಮೂಲಕ ರೈತರಿಗೆ ಜಾನಪದ ಸೊಗಡು ಉಣ ಬಡಿಸಲಾಯಿತು. ಪ್ರಗತಿಪರ ರೈತರನ್ನು ದಂಡಿನ್ ಪ್ರತಿಷ್ಠಾನದ ಸಹಯೋಗದಲ್ಲಿ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net