ಲಯನ್ಸ್ ಸಂಸ್ಥೆ ಬೆಳವಣಿಗೆಯ ಹಿಂದೆ ಹಲವರ ಪರಿಶ್ರಮ

23 ckm 1
ಚಿಕ್ಕಮಗಳೂರು ಲಯನ್ಸ್ ಭವನದಲ್ಲಿ ಲಯನ್ಸ್ ಕ್ಲಬ್‌ನಿಂದ ಏರ್ಪಡಿಸಿದ್ದ ಹಿರಿಯ ನಾಗರಿಕರ ದಿನಾಚರಣೆ ಮತ್ತು ಲಯನ್ಸ್ ಕ್ಲಬ್‌ನ ಸರ್ವ ಸದಸ್ಯರ ಸಭೆಯಲ್ಲಿ ಕ್ಲಬ್‌ನ ಹಿರಿಯ ಸದಸ್ಯರಾದ ಎಂ.ಆರ್.ನಾಗರಾಜ್ ಮತ್ತು ದೇವೀಚಂದ್ ಅವರನ್ನು ಸನ್ಮಾನಿಸಲಾಯಿತು. ಡಾ.ಜೆ.ಪಿ.ಕೃಷ್ಣೇಗೌಡ, ಜಿ.ರಮೇಶ್, ಪುಷ್ಪರಾಜ್, ಶ್ರೀಧರ್, ಶಶಿಪ್ರಸಾದ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಸೇವಾ ಕಾರ್ಯಗಳ ಮೂಲಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಲಯನ್ಸ್ ಸಂಸ್ಥೆಗೆ ದೇಣಿಗೆ ನೀಡಿ ಪ್ರೋತ್ಸಾಹಿಸುತ್ತಿರುವ ಹಿರಿಯ ನಾಗರಿಕರನ್ನು ಗೌರವಿಸುವುದು ಅತ್ಯಂತ ಶ್ಲಾಘನೀಯವಾದ ಕೆಲಸ ಎಂದು ಲಯನ್ಸ್ ಸುವರ್ಣ ಮಹೋತ್ಸವದ ಸುವರ್ಣ ಭವನ ನಿರ್ಮಾಣ ಸಮಿತಿ ಅಧ್ಯಕ್ಷ ಡಾ. ಜೆ.ಪಿ. ಕೃಷ್ಣೇಗೌಡ ತಿಳಿಸಿದರು.

ನಗರದ ಲಯನ್ಸ್ ಭವನದಲ್ಲಿ ಲಯನ್ಸ್ ಕ್ಲಬ್‌ನಿಂದ ಏರ್ಪಡಿಸಿದ್ದ ಹಿರಿಯ ನಾಗರಿಕರ ದಿನಾಚರಣೆ ಮತ್ತು ಲಯನ್ಸ್ ಕ್ಲಬ್‌ನ ಸರ್ವ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಲಯನ್ಸ್ ಸಂಸ್ಥೆ ಚಿಕ್ಕಮಗಳೂರಿನಲ್ಲಿ ಅಸ್ಥಿತ್ವಕ್ಕೆ ಬಂದು ೪೯ ವಸಂತವನ್ನು ಪೂರೈಸಿ ೫೦ನೇ ವರ್ಷದ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಇದರ ಸವಿ ನೆನಪಿಗಾಗಿ ನಿರ್ಮಿಸುತ್ತಿರುವ ಸುವರ್ಣ ಭವನ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಸುವರ್ಣ ಭವನ ನಿರ್ಮಾಣಕ್ಕೆ ಲಯನ್ಸ್ ಕ್ಲಬ್‌ನ ಹಿರಿಯ ಸದಸ್ಯರು ಸೇರಿದಂತೆ ಹಲವು ದಾನಿಗಳು ಕೈಜೋಡಿಸಿ ದೇಣಿಗೆ ನೀಡಿ ಸಹಾಯದ ಹಸ್ತ ಚಾಚಿದ್ದಾರೆ. ಇಂತಹ ದಾನಿಗಳಲ್ಲಿ ಲಯನ್ಸ್ ಕ್ಲಬ್‌ನ ಹಿರಿಯ ಸದಸ್ಯರಾದ ಎಂ.ಆರ್.ನಾಗರಾಜ್ ಮತ್ತು ದೇವೀಚಂದ್ ಪ್ರಮುಖರಾಗಿದ್ದು, ೮೦ ವಸಂತಗಳನ್ನು ಪೂರೈಸಿರುವ ಇವರನ್ನು ಹಿರಿಯ ನಾಗರಿಕರ ದಿನಾಚರಣೆ ಸಂದರ್ಭದಲ್ಲಿ ಲಯನ್ಸ್ ಕ್ಲಬ್‌ನಿಂದ ಗೌರವಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.
ಶಿಸ್ತು ಸಂಯಮ ಮತ್ತು ಸಮಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿರುವ ಎಂ.ಆರ್. ನಾಗರಾಜ್ ಮತ್ತು ಅವರ ಕುಟುಂಬ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.
ಲಯನ್ಸ್ ಕ್ಲಬ್ ಮಾಜಿ ರಾಜ್ಯಪಾಲ ಎಚ್.ಆರ್.ಹರೀಶ್ ಮಾತನಾಡಿ, ಚಿಕ್ಕಮಗಳೂರು ಲಯನ್ಸ್ ಸಂಸ್ಥೆ ಈ ವರ್ಷ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಈ ಭವನ ನಿರ್ಮಾಣಕ್ಕೆ ಹಲವು ದಾನಿಗಳು ನೆರವು ನೀಡಿದ್ದಾರೆ. ಯಾವುದೇ ಸಂಘ ಸಂಸ್ಥೆಗಳ ಬೆಳವಣಿಗೆಗೆ ಹಣಕಾಸಿನ ವ್ಯವಹಾರ ಮತ್ತು ಲೆಕ್ಕಪತ್ರ ಪಾರದರ್ಶಕವಾಗಿದ್ದಲ್ಲಿ ಮಾತ್ರ ಸಂಸ್ಥೆ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಕೆ. ಪುಷ್ಪರಾಜ್ ಮಾತನಾಡಿ, ಚಿಕ್ಕಮಗಳೂರಿನಲ್ಲಿ ಅಸ್ಥಿತ್ವಕ್ಕೆ ಬಂದ ಲಯನ್ಸ್ ಸಂಸ್ಥೆ ಕಳೆದ ೫೦ ವರ್ಷಗಳಿಂದ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಾ ಬಂದಿದೆ. ಸುವರ್ಣ ಮಹೋತ್ಸವದ ಅಂಗವಾಗಿ ನಿರ್ಮಾಣ ಮಾಡುತ್ತಿರುವ ಲಯನ್ಸ್ ಸೇವಾ ಭವನಕ್ಕೆ ಹಲವು ದಾನಿಗಳು ನೆರವು ನೀಡುವ ಮೂಲಕ ಸಹಕಾರ ನೀಡಿದ್ದಾರೆ. ಇಂತಹ ಮಹನೀಯರು ಮಾಡಿರುವ ಕೆಲಸವನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಈ ಸಂಸ್ಥೆಯನ್ನು ಕಟ್ಟಿದ ಹಿರಿಯರ ಸಲಹೆ, ಸಹಕಾರ ಪಡೆದು ಅವರ ಆಶಯಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ತಾವು ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಎಂ.ಆರ್. ನಾಗರಾಜ್ ದಂಪತಿ ಮತ್ತು ದೇವೀಚಂದ್ ಅವರನ್ನು ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಜಿ. ರಮೇಶ್, ಕಾರ್ಯದರ್ಶಿ ಟಿ. ನಾರಾಯಣಸ್ವಾಮಿ, ಖಜಾಂಚಿ ಬಾಲಕೃಷ್ಣ, ೨೦೨೩-೨೪ನೇ ಸಾಲಿನ ಲೆಕ್ಕಪತ್ರಗಳನ್ನು ಸಭೆಗೆ ಮಂಡಿಸಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಗೋಪಿಕೃಷ್ಣ ತರೀಕೆರೆಯಲ್ಲಿ ಲಯನ್ಸ್ಕ್ಲಬ್‌ನ ನೂತನ ಶಾಖೆ ತೆರೆಯುವ ಪ್ರಸ್ತಾವನೆಗೆ ಸಭೆ ಸರ್ವಾನುಮತದಿಂದ ಒಪ್ಪಿಗೆ ನೀಡಿತು.
ಲಯನ್ಸ್ ಕ್ಲಬ್‌ನ ಹಿರಿಯ ಸದಸ್ಯರಾದ ಎಂ.ಆರ್. ಕೇಶವಮೂರ್ತಿ, ಎಂ.ಆರ್.ಶ್ರೀಧರ್, ಲಯನ್ಸ್ ಸೇವಾ ಟ್ರಸ್ಟ್ನ ಅಧ್ಯಕ್ಷ ಶಶಿಪ್ರಸಾದ್, ಕಾರ್ಯದರ್ಶಿ ಪ್ರೊ.ಜಗದೀಶಪ್ಪ, ಟ್ರಸ್ಟ್ನ ಖಜಾಂಚಿ ಮನೋಜ್, ಎಸ್.ಆರ್. ವೈದ್ಯ, ಸರಳ ಶ್ರೀಧರ್, ಕವಿತಾ ರಮೇಶ್, ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ಲಯನ್ಸ್ ಕ್ಲಬ್‌ನ ಪ್ರಾಂತೀಯ ಅಧ್ಯಕ್ಷ ವೆಂಕಟೇಶ್ ಹೆಬ್ಬಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net