

ದೊಡ್ಡಬಳ್ಳಾಪುರ: ಈ ಮೊದಲು ನಾನು ಕಾಂಗ್ರೆಸ್‌ನಲ್ಲಿ ಸಕ್ರಿಯ ಕಾರ್ಯಕರ್ತನಾಗಿದ್ದು, ಬಮುಲ್ ನಿರ್ದೇಶಕ ಸೇರಿ ಅನುಭವಿಸಿರುವ ಅಧಿಕಾರ ಹಾಗೂ ಹುದ್ದೆಗಳು ನನ್ನ ಶ್ರಮದಿಂದ ಗಳಿಸಿರುವುದೇ ಹೊರತು ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರ ಭಿಕ್ಷೆಯಿಂದ ಬಂದಿದ್ದಲ್ಲ ಎಂದು ಬಮುಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್ ತಿರುಗೇಟು ನೀಡಿದರು.
ನಗರದ ಬಮುಲ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದಿನ ಬಮುಲ್ ಚುನಾವಣೆ, ಕೆಎಂಎಫ್ ನಿರ್ದೇಶಕ ಸ್ಥಾನ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೆ ನಿಲ್ಲಲು ನಾನು ಹಾಕಿದ ಭಿಕ್ಷೆ ಎನ್ನುವ ಮಾಜಿ ಶಾಸಕರ ಮಾತಿನಲ್ಲಿ ಸತ್ಯವಿಲ್ಲ. ಅವರು 2013ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಂದರು. ಆದರೆ ನಾನು 1995ರಿಂದಲೇ ಕಾಂಗ್ರೆಸ್ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೆ. ಮಾಜಿ ಶಾಸಕರು ರಾಜಕೀಯವಾಗಿ ಸಕ್ರಿಯವಾಗುವ ಮುಂಚೆಯೇ ಗ್ರಾಪಂ ಸದಸ್ಯನಾಗಿ, ಉಪಾಧ್ಯಕ್ಷನಾಗಿ ನಂತರ ಅಧ್ಯಕ್ಷನಾಗಿ ನಂತರ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಸಹ ಸ್ಪರ್ಧಿಸಿ, ಕಡಿಮೆ ಅಂತರದಿಂದ ಸೋತಿದ್ದೆ. ನನಗೆ ಪಕ್ಷ ನೀಡಿದ್ದಕ್ಕಿಂತ ಹೆಚ್ಚಾಗಿ ಅದರ ಎರಡರಷ್ಟು ನಾನು ಪಕ್ಷಕ್ಕಾಗಿ ದುಡಿದಿದ್ದೇನೆ ಎಂದರು.
ಮಾಜಿ ಶಾಸಕರಾದ ಜೆ.ನರಸಿಂಹಸ್ವಾಮಿ, ಆರ್.ಜಿ.ವೆಂಕಟಾಚಲಯ್ಯ ಅವರ ಗೆಲುವಿಗೆ ಶ್ರಮಿಸಿದ್ದೇನೆ. ಆದರೆ ಯಾವುದೇ ಆಸೆ ಆಮಿಷಕ್ಕೆ ಬಲಿಯಾಗಿಲ್ಲ. ಈಗಿನ ಶಾಸಕ ಧೀರಜ್ ಮುನಿರಾಜು ಸಹ ಉತ್ತಮ ವ್ಯಕ್ತಿ ಎಂದು ಬೆಂಬಲಿಸಿದ್ದೇನೆ. ಭ್ರಷ್ಟರಾದರೆ ಅವರು ಯಾರೇ ಆಗಲೀ ಅವರನ್ನು ಬೆಂಬಲಿಸುವುದಿಲ್ಲ. ಬಮುಲ್ ಚುನಾವಣೆಗೆ ನನ್ನ ಯೋಗ್ಯತೆ ನೋಡಿ ಸ್ಪರ್ಧಿಸಲು ಅವಕಾಶ ನೀಡಿದ್ದರು. ನನಗೆ ನೀವು ಭಿಕ್ಷೆ ಕೊಡುವಷ್ಟು ಯೋಗ್ಯರಲ್ಲ ಎಂದರು.
ಕೆಎಂಎಫ್ ನಿರ್ದೇಶಕನನ್ನಾಗಿ ಮಾಡಿದ್ದು ಡಿಕೆಶಿ
ನಾನು ಕೆಎಂಎಫ್ ನಿರ್ದೇಶಕರಾಗಲು ಸಹ ಭಿಕ್ಷೆ ಕೊಟ್ಟಿದ್ದು ಎಂದು ಹೇಳಿದ್ದೀರಿ. ಅದು ಸುಳ್ಳು, ನನಗೆ ನಿರ್ದೇಶಕರಾಗುವ ಉದ್ದೇಶವೇ ಇರಲಿಲ್ಲ. ಡಿ.ಕೆ.ಶಿವಕುಮಾರ್ ಅವರು ನನ್ನನ್ನು ಕೆಎಂಎಫ್ ನಿರ್ದೇಶಕರಾಗಿಸಿದರು. ಕಮಿಟ್ಮೆಂಟ್ ರಾಜಕಾರಣ ಮಾಡಲ್ಲ. ನಾನು ರಾಜಕಾರಣದಲ್ಲಿ ಬಡವರ ಹಾಗೂ ಅಧಿಕಾರಿಗಳ ಹೊಟ್ಟೆ ಬಗೆದು ಹಣ ಸಂಪಾದನೆ ಮಾಡಿಲ್ಲ ಎಂದು ಬಿ.ಸಿ.ಆನಂದ್ ಕುಮಾರ್ ಕುಟುಕಿದರು. ಕೆಪಿಸಿಸಿ ಸದಸ್ಯ ಲಕ್ಷ್ಮೀಪತಿ ಆರೋಪಿಸುವಂತೆ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಲು ರಾತ್ರೋರಾತ್ರಿ ಹೋಗಿಲ್ಲ. ತಾಲೂಕಿನ ಡೇರಿಗಳಲ್ಲಿ ಕೆಲಸಗಳಾಗಬೇಕು. ಅವರ ಮೇಲಿನ ಅಭಿಮಾನದಿಂದ ಹಾರ ಹಾಕಿ ಬಂದೆ ಎಂದರು.
ಕಾಂಗ್ರೆಸ್ ಶಕ್ತಿಹೀನ
ತಾಲೂಕಿನಲ್ಲಿ ಒಬ್ಬ ಕಾಂಗ್ರೆಸ್ ಕಾರ್ಯಕರ್ತನೂ ನಿಮ್ಮಿಂದ ಉದ್ದಾರ ಆಗಿಲ್ಲ. ಪಕ್ಷ ಬಿಟ್ಟು ಹೊರಬಂದು ನಿಮ್ಮ ಶಕ್ತಿ ಪ್ರದರ್ಶಿಸಿ, ಕರೊನಾ ಸಮಯದಲ್ಲಿ ಯಾರು ಜನರಿಗೆ ಸಹಾಯ ಮಾಡಿದ್ದರೋ ಅವರನ್ನು ಜನ ಬೆಂಬಲಿಸಿದ್ದಾರೆ. ಯಾರಿಗೂ ಸಹಾಯ ಮಾಡದವರನ್ನು ದೂರ ನಿಲ್ಲಿಸಿದ್ದಾರೆ. ಶಾಸಕರಾಗಿದ್ದಾಗ ಅಧಿಕಾರಿಗಳಿಂದ ಹಣ ಪಡೆದಿಲ್ಲ ಎಂದು ನಿರೂಪಿಸಿ, ನಾನು ಏನು ಜನರಿಗೆ ಸಹಾಯ ಮಾಡಿದ್ದೇನೆ ನೀವು ಏನು ಮಾಡಿದ್ದೀರಿ, ಎನ್ನುವುದು ಸಾಬೀತು ಮಾಡಲು ಧರ್ಮಸ್ಥಳಕ್ಕೆ ಬನ್ನಿ ಪ್ರಮಾಣ ಮಾಡೋಣ ಎಂದು ಬಿ.ಸಿ.ಆನಂದ್ ಕುಮಾರ್ ಸವಾಲು ಹಾಕಿದರು.