ದೊಡ್ಡ ಅಧಿಕಾರಿಯ ಕೈವಾಡ ಶಂಕೆ

KMT Manavi
Published on

ಕುಮಟಾ: ಹಿಂದು ಸಂಸ್ಕೃತಿ, ಸಂಸ್ಕಾರ ಮುರಿಯಬೇಕು ಎಂಬ ಉದ್ದೇಶದಿಂದ ರಾಜ್ಯದ ಹಲವೆಡೆ ಸಿಇಟಿ ಪರೀಕ್ಷಾರ್ಥಿಗಳ ಜನಿವಾರ ತೆಗೆಸಿದ ವರ್ತನೆ ಹಿಂದೆ ಯಾವುದೋ ದೊಡ್ಡ ಅಧಿಕಾರಿಯ ಕೈವಾಡವಿದೆ ಎಂದು ಹಿಂದು ಹೋರಾಟಗಾರ ಎಂ.ಜಿ. ಭಟ್ ಶಂಕೆ ವ್ಯಕ್ತಪಡಿಸಿದರು.

ರಾಜ್ಯದ ವಿವಿಧೆಡೆ ಸಿಇಟಿ ಪರೀಕ್ಷೆ ವೇಳೆ ಜನಿವಾರ, ಓಲೆ, ಮೂಗುತಿ ಮುಂತಾದವನ್ನು ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ಹಿಂದು ವಿರೋಧಿ ನಡೆ ಖಂಡಿಸಿ ತಾಲೂಕು ಸೌಧದೆದುರು ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ಜನಿವಾರ ತೆಗೆಸಿದ ದುರ್ಘಟನೆ ಹಲವೆಡೆ ಆಗಿರುವುದು ಹಿಂದು ಧರ್ಮವನ್ನು ಕೆಣಕಿ ನೋಡಿ, ಹಂತಹಂತವಾಗಿ ನಾಶ ಮಾಡಲು ನಡೆಸಿದ ಹೊಂಚು ಎನ್ನುವುದು ಸ್ಪಷ್ಟ. ಸರ್ಕಾರದ ಈ ಕ್ರಮವನ್ನು ಎಲ್ಲ ಹಿಂದುಗಳು ವಿರೋಧಿಸುತ್ತಿದ್ದೇವೆ ಎಂದರು.

ಜಿ.ಐ. ಹೆಗಡೆ ಮೂರೂರು ಮಾತನಾಡಿ, ಪರೀಕ್ಷಾರ್ಥಿಗಳ ಜನಿವಾರ ತೆಗೆಸಿ ಮಾನಸಿಕ ದೌರ್ಜನ್ಯ ಎಸಗಲಾಗಿದೆ. ಅಧಿಕಾರಿಗಳ ವರ್ತನೆಯ ಹಿಂದೆ ಸರ್ಕಾರದ ಕೈವಾಡವಿದೆ ಎಂದರು.

ಮುರಳೀಧರ ಪ್ರಭು ಮಾತನಾಡಿ, ಹಿಂದುಗಳ ಮಾನಬಿಂದುಗಳನ್ನು ಒಂದೊಂದಾಗಿ ಕಳಚುವ ಸರ್ಕಾರದ ನಿಲುವನ್ನು ವಿರೋಧಿಸಿ, ಜನಿವಾರಕ್ಕಾಗಿ ಪರೀಕ್ಷೆಯನ್ನೇ ಬರೆಯದ ಆ ಬಾಲಕ ನಮಗೆ ಮಾದರಿ ಎಂದರು.

ವೆಂಕಟೇಶ ನಾಯಕ ಮಾತನಾಡಿ, ರಾಷ್ಟ್ರ ಮಟ್ಟದಲ್ಲಿ ಸನಾತನ ವಿರೋಧಿ ನೀತಿ ನಡೆಸುತ್ತಿದ್ದು, ಕರ್ನಾಟಕದಲ್ಲಿ ಈ ರೀತಿ ಪ್ರಯೋಗ ಮಾಡುತ್ತಿದ್ದಾರೆ. ಇದನ್ನು ನಾವೆಲ್ಲ ಒಂದಾಗಿ ವಿರೋಧಿಸುತ್ತಿದ್ದೇವೆ ಎಂದರು.

ವೀಣಾ ಭಟ್ಟ ಹೊಲನಗದ್ದೆ ಮಾತನಾಡಿ, ಮಹಿಳೆಯರಿಗೆ ಕಟ್ಟಿದ ತಾಳಿಯನ್ನು ಸ್ವಂತ ಗಂಡನಿಗೂ ತೆಗೆಸುವ ಅಧಿಕಾರ ಇಲ್ಲ ಎಂದರು.

ಎನ್.ಎಸ್. ಹೆಗಡೆ ಕರ್ಕಿ, ಶಿವಾನಂದ ಹೆಗಡೆ ಕಡತೋಕ, ಎನ್.ಆರ್. ಮುಕ್ರಿ, ಮಂಜುನಾಥ ಭಟ್ಟ ಸುವರ್ಣಗದ್ದೆ ಇತರರು ಮಾತನಾಡಿದರು. ಅರುಣ ಹೆಗಡೆ ಮನವಿ ವಾಚಿಸಿದರು. ಉಪವಿಭಾಗಾಧಿಕಾರಿ ಕಚೇರಿ ತಹಸೀಲ್ದಾರ್ ಅಶೋಕ ಭಟ್, ಗ್ರೇಡ್ 2 ತಹಸೀಲ್ದಾರ್ ಸತೀಶ ಗೌಡ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net