ಕೈಕೊಟ್ಟ ಮಳೆ, ಕೈಕಟ್ಟಿ ಕುಳಿತ ಅನ್ನದಾತ

MLK SHENGA 01
Published on

ಮೊಳಕಾಲ್ಮೂರು ಕೆ.ಕೆಂಚಪ್ಪ: ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯ ಕೃಷಿ ಕ್ಷೇತ್ರ ಮಳೆಯಾಶ್ರೀತ ಪ್ರದೇಶ. ಅದರಲ್ಲೂ ಬೆರಳೆಣಿಕೆ ಬೆಳೆ ನಂಬಿ ಬದುಕುಕಟ್ಟಿಕೊಂಡ ರೈತ ವರ್ಗವೇ ಹೆಚ್ಚು. ಮೊಳಕಾಲ್ಮೂರು, ಚಳ್ಳಕೆರೆ, ಹಿರಿಯೂರು ತಾಲೂಕಿನ ಪ್ರಮುಖ ಬೆಳೆ ಬಡವರ ಬದಾಮಿ ಖ್ಯಾತಿಯ ಶೇಂಗಾ.

ಆದರೆ, ಈ ಬಾರಿ ಈ ಬೆಳೆಗೆ ಬರದ ಛಾಯೆ ಭೀತಿ ಆವರಿಸಿಕೊಂಡಿದೆ. ಬಿರು ಬಿಸಿಲಿನ ಝಳಕ್ಕೆ ಶೇಂಗಾ ಬೆಳೆ ಒಣಗುತ್ತಿದ್ದು, ತಾಲಕಿನಾದ್ಯಂತ ಶೇಂಗಾ ಬಿತ್ತನೆಗೆ ವೆಚ್ಚ ಮಾಡಿದ್ದ 50 ಕೋಟಿಗೂ ಹೆಚ್ಚು ಹಣ ನಷ್ಟವಾಗಲಿದ್ದು, ತಾಲೂಕಿನ ಕೃಷಿಕರು ದಿಕ್ಕು ತೋಚದೆ ಕೈಕಟ್ಟಿ ಕುಳಿತಿದ್ದಾರೆ.

ಮುಂಗಾರು ಬೆಳೆಯಾಗಿ ತಾಲೂಕಿನಲ್ಲಿ 21 ಸಾವಿರ ಹೆಕ್ಟೇರ್‌ನಲ್ಲಿ 26.250 ಕ್ವಿಂಟಾಲ್ ಶೇಂಗಾ ಬಿತ್ತನೆಯಾಗಿದೆ. 3 ಸಾವಿರಕ್ಕೂ ಅಧಿಕ ಮೆಟ್ರಿಕ್ ಟನ್ ಡಿಎಪಿ, ಯೂರಿಯಾ, ಕೊಟ್ಟಿಗೆ ಗೊಬ್ಬರ, ಬೇಸಾಯ ಇತರ ವೆಚ್ಚವಾಗಿ 50 ಕೋಟಿಗೂ ಅಧಿಕ ಮೊತ್ತವನ್ನು ಭೂಮಿತಾಯಿ ಮಡಿಲಿಗೆ ಹಾಕಲಾಗಿದೆ. ಲಾಭ ಸಿಗದಿದ್ದರೂ ಪರವಾಗಿಲ್ಲ, ಹಾಕಿದ ಬಂಡವಾಳ ಕೈಸೇರಿದರೆ ಸಾಕೆಂಬ ನಿರೀಕ್ಷೆಯಲ್ಲಿದ್ದ ರೈತರು ಈಗ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಬಿತ್ತನೆ ಮಾಡುವ ಮುನ್ನ ಒಂದಿಷ್ಟು ಮಳೆಯಿಂದ ತೇವಾಂಶ ಬಿಟ್ಟರೆ ಇದುವರೆಗೂ ಮಳೆ ಸುರಿದಿಲ್ಲ. ಪರಿಣಾಮ ಒಣ ಹವೆಯಲ್ಲಿ ಜೀವ ಹಿಡಿದಿಕೊಂಡು ಹೂವು ಕಟ್ಟುತ್ತಿದೆ. ಆದರೆ, ಕಳೆದ 15 ದಿನಗಳಿಂದ ಬಿಸಿಲಿನ ತಾಪಕ್ಕೆ ಶೇಂಗಾ ಬೆಳೆ ನೆಲಕಚ್ಚುತ್ತಿದೆ. ಇದೇ ವಾತಾವರಣ ಮುಂದುವರಿದರೆ ಮೇವು ಕೂಡ ಸಿಗುವುದು ಕಷ್ಟ.

ಇತ್ತ ಅಲ್ಪ-ಸ್ವಲ್ಪ ನಿರಾವರಿ ಕ್ಷೇತ್ರದ ಕೃಷಿಕರಲ್ಲೂ ಭಯ ಶುರುವಾಗಿದೆ. ಹತ್ತಿ, ಮಕ್ಕೇಜೋಳ ಸೇರಿ ಹಲವು ಬೆಳೆ ಇಟ್ಟಿದ್ದಾರೆ. ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಗಣನೀಯ ಇಳಿಕೆ ಕಂಡಿದೆ. ಜತೆಗೆ ವಿದ್ಯುತ್ ಕಣ್ಣಾಮುಚ್ಚಾಲೆ ಆಟ. ಬಿಸಿಲಿನ ಝಳ ದಿನೇ ದಿನೆ ಹೆಚ್ಚುತ್ತಿದೆ. ಪರಿಣಾಮ ನೀರಾವರಿ ಪ್ರದೇಶದ ಕೃಷಿಕರು ಕೂಡ ಸಂಕಷ್ಟಕ್ಕೆ ಸಿಲುಕುವ ಮುನ್ಸೂಚನೆ ದಟ್ಟವಾಗಿದೆ.

ಬೆಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರಕ್ಕೆ ಬಹುದೊಡ್ಡ ನಷ್ಟ ಉಂಟಾಗಲಿದ್ದು, ಜತೆಗೆ ಜಾನುವಾರುಗಳಿಗೆ ಮೇವಿನ ಕೊರತೆ ಕೂಡ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಗೋ ಶಾಲೆಗಳನ್ನು ತೆರೆಯಬೇಕೆಂಬ ಒತ್ತಡ ತಾಲೂಕಿನಲ್ಲಿ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ತಕ್ಷಣ ಕ್ರಮಕೈಗೊಳ್ಳಬೇಕೆಂಬುದು ವಿವಿಧ ಸಂಘಟನೆಗಳ ಒತ್ತಾಯ.

ವರದಿ ಸಂಗ್ರಹ ಪ್ರಕ್ರಿಯೆ: ವಾಡಿಕೆ ಮಳೆ ಕುಂಠಿತವಾಗಿರುವ ಕಾರಣ ಶೇ.50- 60ಕ್ಕೂ ಹೆಚ್ಚು ಶೇಂಗಾ ಬೆಳೆ ನಷ್ಟಕ್ಕೆ ತುತ್ತಾಗಿರುವ ಪರಿಸ್ಥಿತಿ ಇದೆ. ಬರಗಾಲದ ಮುನ್ಸೂಸೂಚನೆ ಅರಿತ ರಾಜ್ಯ ಸರ್ಕಾರ, ಜಂಟಿ ಸಮೀಕ್ಷೆ ನಡೆಸಿ ವರದಿ ಕೊಡುವಂತೆ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಬರಗಾಲಕ್ಕೆ ಪೂರಕವಾಗಿ ವಾಸ್ತವ ವರದಿ ಸಂಗ್ರಹ ಪ್ರಗತಿಯಲ್ಲಿದೆ.- ಡಾ.ಉಮೇಶ್, ಕೃಷಿ ಅಧಿಕಾರಿ

ಪರಿಹಾರ ಘೋಷಿಸಬೇಕು: ಮೊಳಕಾಲ್ಮೂರು, ಚಳ್ಳಕೆರೆ ಅವಳಿ ತಾಲೂಕುಗಳಲ್ಲಿ ಶೇಂಗಾ ಪ್ರಧಾನ ಬೆಳೆ. ಮಳೆಯ ಕಣ್ಣಾಮುಚ್ಚಾಲೆ ಆಟದಲ್ಲಿ ಪ್ರತಿ ವರ್ಷವೂ ನಷ್ಟಕ್ಕೆ ತುತ್ತಾಗುತ್ತಿರುವ ಕೃಷಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಭೂಮಿಗೆ ಹಾಕಿದ ಬಂಡವಾಳವೂ ವಾಪಸ್ ಬರುತ್ತಿಲ್ಲ. ರಾಜ್ಯ ಸರ್ಕಾರ ಕೂಡಲೇ ಕೃಷಿಕರ ನೆರವಿಗೆ ಬರಬೇಕು. ಎಕರೆಗೆ 30 ಸಾವಿರ ರೂ. ಪರಿಹಾರ ಘೋಷಿಸಬೇಕು.- ಬೇಡರಡ್ಡಿಹಳ್ಳಿ ಬಸವರಡ್ಡಿ, ಉಪಾಧ್ಯಕ್ಷ, ರಾಜ್ಯ ರೈತಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net