ಪಿಎಲ್​ಡಿ ಬ್ಯಾಂಕ್​ ಚುಕ್ಕಾಣಿ ಹಿಡಿದ ಕೈ

PLD
Published on

ಬಂಗಾರಪೇಟೆ: ಕೆಜಿಎಫ್​ ಪಿಎಲ್​ಡಿ ಬ್ಯಾಂಕಿನ 5 ಸ್ಥಾನಗಳಿಗೆ ಭಾನುವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್​ 4, ಎನ್​ಡಿಎ ಮೈತ್ರಿ ಒಂದು ಸ್ಥಾನ ಗೆಲುವು ಸಾಧಿಸಿದೆ. ಸಂಭ್ರಮಾಚರಣೆ ನೆಪದಲ್ಲಿ ಕಾಂಗ್ರೆಸ್​-&ಜೆಡಿಎಸ್​ ಕಾರ್ಯಕರ್ತರ ನಡುವೆ ತಳ್ಳಾಟ, ನೂಕಾಟ, ಜತೆಗೆ ಮಾತಿನ ಚಕಮಕಿಯೂ ನಡೆದಿದ್ದು, ಚುನಾವಣಾ ಕೇಂದ್ರದ ಬಳಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಎದುರಾಗಿತ್ತು.

ನಿಗದಿಯಂತೆ ಭಾನುವಾರ ಪಟ್ಟಣದ ಪಿಎಲ್​ಡಿ ಬ್ಯಾಂಕಿನ ಚುನಾವಣೆ ನಡೆದಿದ್ದು, 5 ಸ್ಥಾನಗಳು ಕಾಂಗ್ರೆಸ್​ ಪಾಲಾಗುವ ಭರವಸೆಯಲ್ಲಿದ್ದ ಮುಖಂಡರಿಗೆ ನಿರಾಸೆಯಾಗಿ 4 ಸ್ಥಾನ ಪಡೆದುಕೊಂಡಿದೆ. ಸಾಲಗಾರರಲ್ಲದ ಕ್ಷೇತ್ರದಿಂದ ಕಾಂಗ್ರೆಸ್​ನ ಹಿರಿಯ ಮುಖಂಡ ಹೊಸೂರು ಕೃಷ್ಣಪ್ಪ ಹಾಗೂ ಮೈತ್ರಿ ಅಭ್ಯರ್ಥಿ ಹುಣಸನಹಳ್ಳಿ ಎಂ.ಬಾಲಕೃಷ್ಣ ನಡುವೆ ಪೈಪೋಟಿ ನಡೆದಿದ್ದು, ಬಾಲಕೃಷ್ಣ 28 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಸಾಲಗಾರರಲ್ಲದ ಕ್ಷೇತ್ರಕ್ಕೆ ಮತದಾನ ನಡೆಯುವಾಗ ಕೆಲವು ತಪು$್ಪ ಸಂಭವಿಸಿದ್ದು, ಇದರಲ್ಲಿ ಪೊಲೀಸರು ಶಾಮಿಲಾಗಿದ್ದರಿಂದ ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸಲಿಲ್ಲ. ಮತದಾನದ ವೇಳೆ ಕೆಲವು ಮೈತ್ರಿ ಪಕ್ಷದ ಮುಖಂಡರು ಮತದಾನ ಸ್ಥಳದಲ್ಲಿದ್ದುಕೊಂಡು ಕಾನೂನು ಬಾಹಿರ ಮತಯಾಚನೆ ಮಾಡಿರುವುದರಿಂದ ಕಾಂಗ್ರೆಸ್​ ಬೆಂಬಲಿತ ಅಭ್ಯರ್ಥಿ ಹೊಸೂರು ಕೃಷ್ಣಪ್ಪ ಅವರಿಗೆ ಸೋಲಾಗಿದೆ ಎಂದು ಶಾಸಕ ಎಸ್​.ಎನ್​. ನಾರಾಯಣಸ್ವಾಮಿ ಆಕ್ರೋಶ ಹೊರಹಾಕಿದರು.

ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಹಾಗೂ ಕಾಂಗ್ರೆಸ್​ ಮುಖಂಡರು ಮತದಾನದ ಸ್ಥಳದಿಂದ ಹೊರಗೆ ಹೋಗುವಾಗ ಕೆಲವು ಜೆಡಿಎಸ್​ ಕಾರ್ಯಕರ್ತರು, ಮೈತ್ರಿ ಅಭ್ಯರ್ಥಿ ಎಂ.ಬಾಲಕೃಷ್ಣ ಗೆಲುವು ಸಾಧಿಸಿರುವ ಬಗ್ಗೆ ಹಿರಿಯ ಮುಖಂಡರ ಪರವಾಗಿ ಜೈಕಾರ ಹಾಕಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು, ಪಿಎಲ್​ಡಿ ಬ್ಯಾಂಕ್​ ಚುನಾವಣೆಯಲ್ಲಿ 16 ಸ್ಥಾನಗಳ ಪೈಕಿ 15 ಸ್ಥಾನವನ್ನು ಕಾಂಗ್ರೆಸ್​ ಗೆದ್ದುಕೊಂಡಿದೆ. ಕೇವಲ ಒಂದು ಸ್ಥಾನ ಗೆದ್ದಿದ್ದಕ್ಕೆ ಜೈಕಾರ ಹಾಕಿ ಕಾಂಗ್ರೆಸ್​ ಕಾರ್ಯಕರ್ತರಿಗೆ ಅಗೌರವ ತೋರುತ್ತಿರುವುದು ಸರಿಯಲ್ಲ ಎಂದು ಹೇಳಿದ ತಕ್ಷಣ ಕಾಂಗ್ರೆಸ್​-&ಜೆಡಿಎಸ್​ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.

ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಅವರ ವಿರುದ್ಧ ಜೆಡಿಎಸ್​ ಕಾರ್ಯಕರ್ತರು ಅವಹೇಳನಕಾರಿ ಘೋಷಣೆ ಕೂಗಿ ಏಕವಚನದಲ್ಲಿ ಮಾತನಾಡಿದ್ದಾರೆಂದು ಆರೋಪಿಸಿ ಕಾಂಗ್ರೆಸ್​-&ಜೆಡಿಎಸ್​ ಮುಖಂಡರ ನಡುವೆ ತೀವ್ರ ತಳ್ಳಾಟ, ಮಾತಿನ ಚಕಮಕಿ ನಡೆಯಿತು. ಈ ನಡುವೆ ಪೊಲೀಸರು ಮಧ್ಯೆ ಪ್ರವೇಶಿಸಿ ಎರಡು ಗುಂಪನ್ನು ಚದುರಿಸಿದರು. ಸರ್ಕಾರಿ ಮಾದರಿ ಶಾಲೆಯಿಂದ ಓಸ್ವಾಲ್​ ಆಸ್ಪತ್ರೆಯವರೆಗೂ ನೂಕುನುಗ್ಗಲು, ಮಾತಿನ ಚಕಮಕಿ ನಡೆಯಿತು. ನಂತರ ಪೊಲೀಸರು ಹರಸಾಹಸ ಮಾಡಿ ಉದ್ವಿಗ್ನ ಪರಿಸ್ಥಿತಿ ತಿಳಿಸಿಗೊಳಿಸಿದರು.

ರೌಡಿಸಂಗೆ ಅವಕಾಶ ನೀಡಲ್ಲ

ಬಂಗಾರಪೇಟೆ ಕ್ಷೇತ್ರದಲ್ಲಿ ಮೈತ್ರಿ ಪಕ್ಷ ರೌಡಿಸಂ ಮಾಡುವುದಕ್ಕೆ ಬಿಡುವುದಿಲ್ಲ. ಒಂದು ಸ್ಥಾನ ಗೆದ್ದಿರುವುದಕ್ಕೆ ಪುಂಡಾಟ ನಡೆಸಿದರೆ ಪೊಲೀಸ್​ ಇಲಾಖೆಯು ಸೂಕ್ತ ಕ್ರಮಕೈಗೊಳ್ಳಬೇಕಿದೆ. ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಜೆಡಿಎಸ್​ನ ಕೆಲವು ಯುವಕರು ವಿನಾಕಾರಣ ನನ್ನ ವಿರುದ್ಧ ಕೂಗಾಡಿದ್ದಾರೆ. ದುರಹಂಕಾರದಿಂದ ಮೆರೆದರೆ ಬಿಡುವುದಿಲ್ಲ. ಇವರ ಅಹಂಕಾರದ ಆಟ ಸಹಿಸುವುದಿಲ್ಲ. ಪೊಲೀಸರು ಈ ಬಗ್ಗೆ ಎಚ್ಚರವಹಿಸಬೇಕಾಗಿತ್ತು. ಪಿಎಲ್​ಡಿ ಬ್ಯಾಂಕ್​ನಲ್ಲಿ 99% ಗೆಲುವು ಸಾಧಿಸಿದ್ದು, ಜನ ಕಾಂಗ್ರೆಸ್​ ಪರ ಎನ್ನುವುದನ್ನು ತಿಳಿದುಕೊಳ್ಳಲಿ ಎಂದು ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಎಚ್ಚರಿಸಿದರು.

"ಮೈತ್ರಿ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಹಾಗೂ ನನಗೆ ಮತದಾನ ಮಾಡಿದವರು ನೆರವಿನಿಂದ ನನ್ನ ಪ್ರತಿ ಸ್ಪರ್ಧಿ ವಿರುದ್ಧ 8 ಮತಗಳ ಅಂತರದಿಂದ ಗೆಲವು ಸಾಧಿಸಲು ಸಾಧ್ಯವಾಯಿತು. ಅಧಿಕಾರದಲ್ಲಿ ಇರುವವರೆಗೂ ಬ್ಯಾಂಕಿನಿಂದ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಪಕ್ಷಾತಿತವಾಗಿ ಪ್ರತಿಯೊಬ್ಬರಿಗೂ ಸಿಗುವಂತೆ ಕ್ರಮಕೈಗೊಳ್ಳುತ್ತೇನೆ. ಜತೆಗೆ ಮುಂದಿನ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲವು ಸಾಧಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ."

- ಹುಣಸನಹಳ್ಳಿ ಎಂ.ಬಾಲಕೃಷ್ಣ

ಮೈತ್ರಿ ಅಭ್ಯರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net