

ವಿಜಯವಾಣಿ ಸುದ್ದಿಜಾಲ ಧಾರವಾಡ
ಇತ್ತೀಚಿನ ದಿನಗಳಲ್ಲಿ ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ ಎಂದು ಅಬ್ದುಲ್ ನಜೀರಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಂಸ್ಥೆ ಧಾರವಾಡ ಪ್ರಾದೇಶಿಕ ಕೇಂದ್ರದ ಉಪನಿರ್ದೇಶಕಿ ಪವಿತ್ರಾ ಪಾಟೀಲ ಅಭಿಪ್ರಾಯಪಟ್ಟರು.
ನಗರದ ರಾಯಾಪುರದ ಅಬ್ದುಲ್ ನಜೀರಸಾಬ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಂಸ್ಥೆ ಪ್ರಾದೇಶಿಕ ಕೇಂದ್ರದಲ್ಲಿ ಏರ್ಪಡಿಸಿರುವ ಸಂಪನ್ಮೂಲ ಶಿಕ್ಷಕರ ತರಬೇತಿ ಶಿಬಿರ, ಮಕ್ಕಳ ಸಹಿತ್ಯ ಸಂಭ್ರಮಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳಲ್ಲಿ ಓದುವ ಹವ್ಯಾಸ ರೂಢಿಸಿ, ಅವರದಲ್ಲಿನ ಸಾಹಿತ್ಯ ಹೊರ ಹಾಕಲು ಮಕ್ಕಳ ಸಾಹಿತ್ಯ ಹಬ್ಬವನ್ನು ರಾಜ್ಯದ 74 ತಾಲೂಕುಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಶಿಕ್ಷಕರ ಜತೆಗೆ ಮಕ್ಕಳನ್ನು ಸೇರಿಸಿ, ತರಬೇತಿ ನೀಡಿ ಓದುವ ಹವ್ಯಾಸ ರೂಪಿಸುವುದು ಈ ಸಾಹಿತ್ಯ ಸಂಭ್ರಮದ ಪ್ರಮುಖ ಉದ್ದೇಶ ಎಂದರು.
ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಉಪ ಸಮನ್ವಯಾಧಿಕಾರಿ ಎಸ್.ಎಂ. ಹುಡೇದಮನಿ ಮಾತನಾಡಿ, ನಮ್ಮ ನಿತ್ಯದ ಅವಶ್ಯಕತೆಗಳನ್ನು ಕಡಿಮೆ ಮಾಡಿಕೊಂಡು ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ರೂಢಿಸಿಕೊಳ್ಳುವುದು ಅವಶ್ಯ. ಈ ನಿಟ್ಟಿನಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಸಹಕಾರದೊಂದಿಗೆ ಶಿಕ್ಷಕರು ಮತ್ತು ಮಕ್ಕಳಿಗೆ ತರಬೇತಿ ನೀಡಿ, ಓದುವ ಅಭಿರುಚಿ ಹೆಚ್ಚಿಸುತ್ತಿರುವ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು.
ಭಾರತ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಎಫ್.ಸಿ. ಚೇಗರಡ್ಡಿ ಮಾತನಾಡಿ, ಗ್ರಂಥಾಲಯಗಳು ಮಕ್ಕಳ ಭೌದ್ಧಿಕ ವಿಕಾಸ, ಅರಿವಿನ ಕೇಂದ್ರಗಳಾಗಬೇಕು. ಮಕ್ಕಳ ಅನುಭವದ ಬರಹಗಳನ್ನು ಪುಸ್ತಕ ರೂಪದಲ್ಲಿ ಹೊರತಂದು, ಗ್ರಂಥಾಲಯಗಳಲ್ಲಿ ಮಕ್ಕಳ ಪುಸ್ತಕಗಳು ಸಿಗುವಂತಾಗಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕಕುಮಾರ ಸಿಂದಗಿ, ಸಮನ್ವಯಾಧಿಕಾರಿ ಮಂಜುನಾಥ ಅಡವೇರ, ಗುರು ತಿಗಡಿ, ನೀಲಪ್ಪ ಕಜ್ಜರಿ, ರಮೇಶ ಪರಮಣ್ಣವರ, ನಿಂಗು ಸೊಲಗಿ, ಶಿಲ್ಪ ಹಳ್ಳಿಕೇರಿ, ಸಂಧ್ಯಾ ನಾಯ್ಕ, ಸಿದ್ದು ಮಾಳವಾಡ, ವೈ.ಬಿ. ಪಾಟೀಲ, ಇತರರು ಇದ್ದರು.
ವಿವೇಕಾನಂದಗೌಡ ಪಾಟೀಲ ಸ್ವಾಗತಿಸಿದರು. ಪಾಂಡುರಂಗ ಜಟಗಣ್ಣವರ ನಿರೂಪಿಸಿದರು. ಎಲ್.ಐ. ಲಕ್ಕಮ್ಮನವರ ವಂದಿಸಿದರು.