

ನರೇಗಲ್ಲ: ಗುರುವಿಲ್ಲದೆ ಯಾವ ವ್ಯಕ್ತಿಯ ವ್ಯಕ್ತಿತ್ವವೂ ವಿಕಸನವಾಗುವುದಿಲ್ಲ. ಮನೆಯಲ್ಲಿ ತಾಯಿ ಮೊದಲ ಗುರುವಾದರೆ, ನಮ್ಮ ಭವಿಷ್ಯದ ಜೀವನಕ್ಕೆ ಗುರುಗಳು ಅವಶ್ಯಕವಾಗಿ ಬೇಕೇ ಬೇಕು. ಈ ಜಗತ್ತಿನಲ್ಲಿ ಗುರುವಿಗಿಂತ ದೊಡ್ಡವರು ಯಾರೂ ಇಲ್ಲ ಎಂದು ಗದಗ ಕನಕದಾಸ ಶಿಕ್ಷಣ ಸಮಿತಿಯ ಪ್ರಧಾನ ಕಾರ್ಯದರ್ಶಿ ರವಿ ದಂಡಿನ ಹೇಳಿದರು.
ಸಮೀಪದ ನಿಡಗುಂದಿ ಗ್ರಾಮದ ಶ್ರೀವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ನಿಡಗುಂದಿಕೊಪ್ಪದ ಶಾಖಾ ಮಠದಿಂದ ಇತ್ತಿಚೆಗೆ ಆಯೋಜಿಸಿದ್ದ ಶಿವಾನುಭವ ಸಂಪದ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಪರಂಪರೆಯಲ್ಲಿ ಗುರು-ಶಿಷ್ಯ ಪರಂಪರೆಗೆ ಅಪಾರ ಮಹತ್ವವಿದೆ. ರಾಮಕೃಷ್ಣ ಪರಮಹಂಸರು-ಸ್ವಾಮಿ ವಿವೇಕಾನಂದ, ಗುರು ಗೋವಿಂದಭಟ್ಟರು-ಸಂತ ಶಿಶುನಾಳ ಷರೀಫ ಮುಂತಾದ ಗುರು ಪರಂಪರೆ ನಮ್ಮ ಕಣ್ಣ ಮುಂದೆ ಆದರ್ಶವಾಗಿ ನಿಲ್ಲುತ್ತದೆ. ಗುರುವನ್ನು ಮತ್ತು ತಂದೆ-ತಾಯಿಯನ್ನು ಗೌರವಿಸದ ಯಾವುದೇ ವ್ಯಕ್ತಿ ಸಮಾಜದಲ್ಲಿರಲು ಅನರ್ಹನೆನಿಸಿಕೊಳ್ಳುತ್ತಾನೆ ಎಂದರು.
ಸಿದ್ದಲಿಂಗಯ್ಯ ಗುಡದೂರುಕಲ್ಲಮಠ ಉಪನ್ಯಾಸ ನೀಡಿ, ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ದಾಸರು ಹಾಡಿದ್ದಾರೆ. ನಮ್ಮ ಸಮಾಜಕ್ಕೆ ಗುರು ಕುಮಾರೇಶ್ವರರು, ಅನ್ನದಾನ ಶ್ರೀಗಳು, ಚನ್ನಬಸವ ಶ್ರೀಗಳಂಥವರು ಈಗಿನ ಅಭಿನವ ಚನ್ನಬಸವ ಶ್ರೀಗಳಂಥವರು ಅವಶ್ಯವಾಗಿ ಬೇಕಾಗಿದ್ದು, ಅವರ ನೆರಳಿನಲ್ಲಿ, ಅವರ ಮಾರ್ಗದರ್ಶನದಲ್ಲಿ ನಾವು ಮುನ್ನಡೆದರೆ ನಮ್ಮ ಜೀವನ ಪಾವನವಾಗುತ್ತದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಅಭಿನವ ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿ, ಶಿವಾನುಭವ ಸಂಪದ ಶಿವನ ಅನುಭೂತಿಯನ್ನು ನೀಡುತ್ತದೆ. ಇಲ್ಲಿ ವ್ಯಕ್ತವಾಗುವ ವಿಚಾರಗಳನ್ನು ನೀವು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿದರೆ ನಿಮ್ಮ ಜೀವನ ಪಾವನವಾಗುತ್ತದೆ ಎಂದರು.
ನಿಡಗುಂದಿಯ ಅಕ್ಕಮಹಾದೇವಿ ಮಹಿಳಾ ವೇದಿಕೆಯವರು ಕುಮಾರೇಶ್ವರ ನಾಮಾವಳಿ ಹೇಳಿದರು. ಧರ್ಮರ ಮಠದ ಷಣ್ಮುಖಪ್ಪಜ್ಜನವರು ಸಮ್ಮುಖ ವಹಿಸಿದ್ದರು. ಬಸವರಾಜ ಜಂಗಣ್ಣವರ ಮತ್ತು ಶರಣಪ್ಪ ಅರಮನಿ ಸಂಗೀತ ಸೇವೆ ನೀಡಿದರು. ಎ.ಎಸ್. ಗೆದಗೇರಿ ಸ್ವಾಗತಿಸಿದರು. ಶಿಕ್ಷಕ ಡಿ.ಎಸ್. ಬಡಿಗೇರ ನಿರೂಪಿಸಿದರು.