ಪತ್ನಿಯನ್ನು ಕೊಂದ ಪಾಪಿ ಪತಿಗೆ ಜೀವಾಧಿ ಶಿಕ್ಷೆ

Rajkumar.
Published on

ಕಾರವಾರ:ಪತ್ನಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಶಿರಸಿಯ 1ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ.
ಹಳಿಯಾಳ ಯಡೋಗಾ ಗ್ರಾಮದ ರಾಜಕುಮಾರ್ ನಾಗೇಂದ್ರ ಕುಂದೇಕರ್ ಶಿಕ್ಷೆಗೊಳಗಾದ ಅಪರಾಧಿ. ಆತನಿಗೆ 25 ಸಾವಿರ ರೂ. ದಂಡ ವಿಧಿಸಿದ್ದು, ಅದನ್ನು ಆತನ ತಬ್ಬಲಿ ಮಕ್ಕಳಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಪತ್ನಿ ಅಪರ್ಣಾ ಪರ ಪುರುಷನೊಂದಿಗೆ ಮಾತನಾಡುತ್ತಾಳೆ ಎಂದು ಅನುಮಾನಗೊಂಡ ರಾಜಕುಮಾರ ದುಷ್ಕೃತ್ಯ ನಡೆಸಿದ್ದ. ಆತನ ತಂದೆ ಇಬ್ಬರು ಚಿಕ್ಕ ಮೊಮ್ಮಳ ಜತೆ ಅಂಗಡಿಗೆ ಹೊದಾಗ ತನ್ನ ಮನೆಯಲ್ಲೇ ಪತ್ನಿಯನ್ನು ಹಿಂದಿನಿಂದ ಒದ್ದು ಬೀಳಿಸಿ, ಬೆನ್ನು ಮೇಲೆ ಕಾಲು ಹಾಕಿ ನಿಂತು ಚಾಕುವಿನಿಂದ ಕುತ್ತಿಗೆಗೆ ಇರಿದು ಕೊಂದಿದ್ದ.
ಹಳಿಯಾಳ ಠಾಣೆ ಸಿಪಿಐ ರಂಗನಾಥ ನೀಲಮ್ಮನವರ್ ಪ್ರಕರಣ ದಾಖಲಿಸಿಕೊಂಡು ರಾಜಕುಮಾರನನ್ನು ಬಂಧಿಸಿ, ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕ ರಾಜೇಶ ಮಳಗೀಕರ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ದುಷ್ಕೃತ್ಯಕ್ಕೆ ಅಕ್ಕಪಕ್ಕದ ಮನೆಯವರು ಹಾಗೂ ಸ್ವತಃ ರಾಜಕುಮಾರನ ತಂದೆ ಸಹ ಕೂಡ ಸಾಕ್ಷಿ ನುಡಿದಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕಿರಣ ಕಿಣಿ ತೀರ್ಪು ಪ್ರಕಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net