‘ಪ್ರವಾಸಿ’ ತಾಣಕ್ಕೆ ಬರಲಿದ್ದಾರೆ ‘ಮಾರ್ಗದರ್ಶಿ’

Mysore palace
Published on

ಸದೇಶ್ ಕಾರ್ಮಾಡ್ ಮೈಸೂರು
ಜಿಲ್ಲೆಯ ಪ್ರವಾಸಿ ತಾಣಗಳ ಕುರಿತು ಸಂಪೂರ್ಣ ಮಾಹಿತಿ ನೀಡಲು ಯಾರು ಇಲ್ಲವಲ್ಲ ಎಂಬ ಕೊರಗು ಸದ್ಯದಲ್ಲಿಯೇ ನೀಗಲಿದೆ. ಪ್ರವಾಸಿಗರಿಗೆ ಪ್ರವಾಸಿ ತಾಣಗಳನ್ನು ಸಂಪೂರ್ಣ ಪರಿಚಯಿಸಿ ಆ ಮೂಲಕ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡಲು ‘ಪ್ರವಾಸಿ ಮಾರ್ಗದರ್ಶಿ’ಗಳು ಜಿಲ್ಲೆಗೆ ಬರಲಿದ್ದಾರೆ.

ದೇಶ, ವಿದೇಶದಿಂದ ಪ್ರತಿ ವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಜಿಲ್ಲೆಯ ಪ್ರವಾಸಿ ತಾಣಗಳು ಸೆಳೆಯುತ್ತಿದೆ. ಆದರೆ, ಪ್ರವಾಸಿ ತಾಣದ ಕುರಿತು ಹೆಚ್ಚಿನ ಮಾಹಿತಿ ಬೇಕು ಎಂದು ಬಯಸುವ ಪ್ರವಾಸಿಗರಿಗೆ ಮೈಸೂರು ಅರಮನೆ ಹೊರತು ಪಡಿಸಿ ಉಳಿದ ಪ್ರವಾಸಿ ತಾಣಗಳಲ್ಲಿ ಮಾಹಿತಿ ದೊರೆಯುತ್ತಿಲ್ಲ. ಈ ಕೊರತೆ ನೀಗಿಸುವ ಸಲುವಾಗಿ ಪ್ರವಾಸೋದ್ಯಮ ಇಲಾಖೆಯು ‘ಪ್ರವಾಸಿ ಮಾರ್ಗ ದರ್ಶಿ’ ಹುದ್ದೆಗೆ ಅರ್ಹರನ್ನು ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದೆ.

ಜಿಲ್ಲೆಯಲ್ಲಿ ಧಾರ್ಮಿಕ, ಸಾಂಸ್ಕೃತಿ, ಪಾರಂಪರಿಕ ಹಾಗೂ ನೈಸರ್ಗಿಕ ಪ್ರವಾಸಿ ತಾಣಗಳು ಸಾಕಷ್ಟು ಸಂಖ್ಯೆಯಲ್ಲಿ ಇದೆ. ಮೈಸೂರು ಅರಮನೆ ವೀಕ್ಷಿಸುವ ಸಲುವಾಗಿಯೇ ವಿಶ್ವದ ವಿವಿಧ ಭಾಗಗಳಿಂದ ಪ್ರವಾಸಿಗರು ಪ್ರತಿ ವರ್ಷ ಜಿಲ್ಲೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿ ಸುತ್ತಾರೆ. ಆದರೆ, ಪ್ರಚಾರದ ಕೊರತೆಯಿಂದ ಜಿಲ್ಲೆಯ ಉಳಿದ ಪ್ರವಾಸಿ ತಾಣಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿಲ್ಲ. ಅಲ್ಲದೆ, ತಾಣಗಳ ಕುರಿತು ಹೆಚ್ಚಿನ ಮಾಹಿತಿ ಪ್ರವಾಸಿಗರು ದೊರೆಯುತ್ತಿಲ್ಲ.

ಈ ಕೊರತೆ ಮನಗಂಡಿರುವ ಪ್ರವಾಸೋದ್ಯಮ ಇಲಾಖೆಯು ಜಿಲ್ಲೆಯ ಐತಿಹಾಸಿಕ, ಧಾರ್ಮಿಕ, ಪಾರಂಪರಿಕ, ಸಾಂಸ್ಕೃತಿಕ ಹಾಗೂ ಜಾನಪದ ಕಾಲ ತಾಣಗಳ ಕುರಿತು ಸಂಪೂರ್ಣ ಮಾಹಿತಿಯನ್ನು ದೇಶ, ವಿದೇಶದ ಪ್ರವಾಸಿಗರಿಗೆ ಪರಿಚಯಿಸಲು ಹಾಗೂ ‘ಒಂದು ರಾಜ್ಯ-ಹಲವು ಜಗತ್ತುಗಳು’ ಪರಿಕಲ್ಪನೆಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಅನುಭವ ಹೊಂದಿರುವವರನ್ನು ಪ್ರವಾಸಿ ಮಾರ್ಗದರ್ಶಿಗಳನ್ನು ನೇಮಕ ಮಾಡಿಕೊಳ್ಳಲಿದೆ. ನೇಮಕಾತಿ ನಂತರ ಅವರಿಗೆ ಇಲಾಖೆಯಿಂದ ತರಬೇತಿ ನೀಡಲಾಗುವುದು. ತರಬೇತಿ ಪಡೆದ ಪ್ರವಾಸಿ ಮಾರ್ಗದರ್ಶಿಗಳಿಗೆ ಇಲಾಖೆಯಿಂದ ಗೌರವ ಧನ ದೊರೆಯಲಿದೆ. ಅಲ್ಲದೆ, ಪ್ರವಾಸಿಗರಿಂದಲೂ ಗೌರವ ಸಂಭಾವನೆ ದೊರೆಯಲಿದೆ.

ಇದು ಮಾಹಿತಿ ತಂತ್ರಜ್ಞಾನದ ಯುಗವಾಗಿದ್ದು, ಹಲವಾರು ಜನರು ಗೂಗಲ್ ಮೂಲಕವೇ ಪ್ರವಾಸಿ ತಾಣಗಳ ಮಾಹಿತಿ ಪಡೆಯುತ್ತಿದ್ದಾರೆ. ಗೂಗಲ್‌ನಲ್ಲಿ ಪ್ರವಾಸಿ ತಾಣಗಳ ಸಂಕ್ಷಿಪ್ತ ಮಾಹಿತಿ ಮಾತ್ರ ದೊರೆಯುತ್ತಿದೆ. ಅಲ್ಲದೆ, ಕೆಲವೊಂದು ಬಾರಿ ತಪ್ಪು ಮಾಹಿತಿಗಳು ಸಹ ಸೇರ್ಪಡೆಗೊಂಡಿರುವ ಸಾಧ್ಯತೆ ಇರುತ್ತದೆ. ಹಾಗಾಗಿ ಅಧ್ಯಯನದ ದೃಷ್ಟಿಯಿಂದ ಪ್ರವಾಸೋದ್ಯಮ ಕೈಗೊಳ್ಳುವವರೆಗೆ ಗೂಗಲ್‌ನಲ್ಲಿ ದೊರೆಯುವ ಮಾಹಿತಿ ಸಾಕಾವುದಿಲ್ಲ ಅಲ್ಲದೆ ಆ ಮಾಹಿತಿಯು ಅವರಿಗೆ ಸಂತೃಪ್ತಿಯನ್ನು ನೀಡುವುದಿಲ್ಲ. ಹಾಗಾಗಿ ಅಂತಹ ಪ್ರವಾಸಿಗರಿಗೆ ನೂತನವಾಗಿ ನೇಮಕಗೊಳ್ಳುವ ಪ್ರವಾಸಿ ಮಾರ್ಗದರ್ಶಿಗಳು ನಿಖರವಾದ ಮಾಹಿತಿಯನ್ನು ನೀಡುತ್ತಾರೆ. ಪ್ರವಾಸಿಗರು ಪ್ರವಾಸಿ ಮಾರ್ಗದರ್ಶಿಯ ಅವಶ್ಯಕತೆ ಇದ್ದರೆ ಇಲಾಖೆಯ ಗಮನಕ್ಕೆ ತಂದರೆ ಇಲಾಖೆಯ ಮೂಲಕ ಪ್ರವಾಸಿ ಮಾಗದರ್ಶಿಯನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ.

ವಿದೇಶಿ ಪ್ರವಾಸಿಗರು ಹೆಚ್ಚುವ ನಿರೀಕ್ಷೆ: ಹೊಯ್ಸಳರು ನಿರ್ಮಿಸಿದ ಜಿಲ್ಲೆಯ ತಿ.ನರಸೀಪುರ ತಾಲೂಕಿನ ಸೋಮನಾಥಪುರದ ಚೆನ್ನಕೇಶವ ದೇವಾಲಯವನ್ನು 2023ರಲ್ಲಿ ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ವರ್ಷಗಳಲ್ಲಿ ಈ ದೇವಾಲಯಕ್ಕೆ ವಿಶೇಷವಾಗಿ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಸಾಧ್ಯತೆ ಇದೆ. ಸಾಕಷ್ಟು ದೇಶ, ವಿದೇಶದ ಪ್ರವಾಸಿಗರು ಈ ದೇವಾಲಯಕ್ಕೆ ಅಧ್ಯಯನ ಕೈಗೊಳ್ಳುವ ಉದ್ದೇಶದಿಂದ ಆಗಮಿಸುವ ನಿರೀಕ್ಷೆ ಇದೆ. ಇದಕ್ಕೆ ಪೂರಕವಾಗಿ ಪ್ರವಾಸಿ ಮಾರ್ಗದರ್ಶಿಗಳ ಅವಶ್ಯಕತೆ ಇದೆ. ಇಲ್ಲವಾದಲ್ಲಿ ಗೂಗಲ್‌ನಲ್ಲಿ ದೊರೆಯುವಷ್ಟು ಮಾಹಿತಿ ಪಡೆದು ಪ್ರವಾಸಿಗರು ನಿರಾಸೆಯಿಂದ ತೆರಳುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಕೇವಲ ಚೆನ್ನಕೇಶವ ದೇವಾಲಯ ಮಾತ್ರವಲ್ಲದೆ ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳಿಗೂ ಪ್ರವಾಸಿ ಮಾರ್ಗದರ್ಶಿಗಳ ಅವಶ್ಯಕತೆ ಇದೆ. ಇದಕ್ಕೆ ಪೂರಕವಾಗಿ ಪ್ರವಾಸೋದ್ಯಮ ಇಲಾಖೆ ಹೆಜ್ಜೆ ಇರಿಸಿರುವುದು ಸಂತಸದ ವಿಚಾರ.

ಜಿಲ್ಲೆಗೆ ಪ್ರತಿ ವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಬಹುತೇಕ ಪ್ರವಾಸಿಗರು ಪ್ರವಾಸಿ ತಾಣದ ಸಂಪೂರ್ಣ ಮಾಹಿತಿ ಬಯಸುವುದಿಲ್ಲ. ಆದರೆ, ಪ್ರವಾಸಿ ತಾಣದ ಕುರಿತು ತಿಳಿದುಕೊಳ್ಳಲು ಆಸಕ್ತಿ ಹೊಂದಿರುವ ಕೆಲವರು ಹಾಗೂ ಅಧ್ಯಯನದ ದೃಷ್ಟಿಯಿಂದ ಪ್ರವಾಸ ಕೈಗೊಳ್ಳುವವರಿಗೆ ಪ್ರವಾಸಿ ತಾಣಗಳ ಕುರಿತು ಸಂಪೂರ್ಣ ಮಾಹಿತಿ ದೊರೆಯುತ್ತಿಲ್ಲ. ಈ ಕೊರತೆ ನೀಗಿಸುವ ಸಲುವಾಗಿ ಪ್ರವಾಸಿ ಮಾರ್ಗದರ್ಶಿ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೂ ಪೂರಕವಾಗಲಿದೆ.
ಎಂ.ಕೆ. ಸವಿತಾ,
ಉಪ ನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ

ಜಿಲ್ಲೆಯ ಪ್ರವಾಸಿ ತಾಣಗಳನ್ನು ಪ್ರವಾಸಿಗರಿಗೆ ಪರಿಚಯಿಸಲು ಪ್ರವಾಸಿ ಮಾರ್ಗದರ್ಶಿಗಳ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಪ್ರವಾಸಿ ಮಾರ್ಗದರ್ಶಿಗಳ ನೇಮಕಾತಿಗೆ ಮುಂದಾಗಿರುವುದು ಸಂತಸದ ವಿಚಾರ. ಪುಸ್ತಕ ಓದಿ ಅಥವಾ ಗೂಗಲ್ ಮೂಲಕ ಪ್ರವಾಸಿ ತಾಣಗಳ ಮಾಹಿತಿ ಪಡೆಯಲು ಎಲ್ಲ ಪ್ರವಾಸಿಗರು ಬಯಸುವುದಿಲ್ಲ. ಅಂತಹ ಪ್ರವಾಸಿಗರಿಗೆ ಪ್ರವಾಸಿ ಮಾರ್ಗದರ್ಶಿಗಳ ಅವಶ್ಯಕತೆ ಇದೆ. ಇದರಿಂದ ಜಿಲ್ಲೆಯ ಪ್ರವಾಸೋದ್ಯಮ ಚಟುವಟಿಕೆಗೂ ಉತ್ತೇಜನ ದೊರೆಯಲಿದೆ.
ನಾರಾಯಣ ಗೌಡ,
ಅಧ್ಯಕ್ಷ, ಜಿಲ್ಲಾ ಹೋಟೆಲ್ ಮಾಲೀಕರ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net