ಸಮಾಜಕ್ಕೆ ಹಿರಿಯರ ಮಾರ್ಗದರ್ಶನ ಅತ್ಯವಶ್ಯ

11-09-Shiva-3
ರಾಯಚೂರಿನ ಬೋಳಮಾನದೊಡ್ಡಿ ರಸ್ತೆಯಲ್ಲಿ ನಿವೃತ್ತ ಸರ್ಕಾರಿ ನೌಕರರ ಸಂಘದ ಭವನವನ್ನು ಸಚಿವ ಎನ್.ಎಸ್.ಬೋಸರಾಜು ಸೋಮವಾರ ಉದ್ಘಾಟಿಸಿದರು. ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಎಸ್.ಕಮಲಕುಮಾರ, ಸಂಘದ ಅಧ್ಯಕ್ಷ ಮಹಾದೇವಪ್ಪ ಏಗನೂರು, ಪದಾಕಾರಿಗಳಾದ ಮಹಾದೇವಪ್ಪ ಹಂಚಿನಾಳ, ರಾಮಣ್ಣ ಹವಳೆ ಇದ್ದರು.
Published on

ರಾಯಚೂರು: ಸಮಾಜವನ್ನು ಸರಿದಾರಿಯಲ್ಲಿ ಮುನ್ನಡೆಸಲು ಹಿರಿಯ ಮಾರ್ಗದರ್ಶನ ಅತ್ಯಗತ್ಯವಾಗಿದ್ದು, ಅನುಭವಿಗಳ ಮಾರ್ಗದರ್ಶನವೇ ನಮಗೆಲ್ಲ ಶ್ರೀರಕ್ಷೆಯಾಗಿದೆ ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ನಗರದ ಬೋಳಮಾನದೊಡ್ಡಿ ರಸ್ತೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಭವನವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ತಾವೆಲ್ಲರೂ ನಿಮ್ಮ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದು, ಸಮಾಜಕ್ಕೆ ನಿಮ್ಮ ಮಾರ್ಗದರ್ಶನ ಸದಾಕಾಲ ಇರಬೇಕು ಎಂದರು.
ನಿವೃತ್ತಿಯ ನಂತರವೂ ಹಲವರು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಳಿ ವಯಸ್ಸಿನಲ್ಲಿಯೂ ಚೈತನ್ಯವಂತರಾಗಿ ಕೆಲಸ ಮಾಡುತ್ತಿರುವುದು ಇತರರಿಗೆ ಪ್ರೇರಣಾದಾಯಕವಾಗಿದೆ ಎಂದು ಎನ್.ಎಸ್.ಬೋಸರಾಜು ತಿಳಿಸಿದರು.
ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಎಸ್.ಕಮಲಕುಮಾರ ಮತನಾಡಿ, ಚಿಂತೆಮುಕ್ತ ಜೀವನ ನಮ್ಮ ಆರೋಗ್ಯವನ್ನು ವೃದ್ಧಿಸಲು ಸಾಧ್ಯವಾಗುತ್ತಿದ್ದು, ಭೂಮಿಗೆ ಬರುವುದು ಯಾವಾಗ, ಹೋಗುವುದು ಯಾವಾಗ ಎಂದು ಯಾರಿಗೂ ಗೊತ್ತಿಲ್ಲ. ಆದರೆ ಬಂದು ಹೋಗುವ ನಡುವೆ ನಾವು ಸಮಾಜಕ್ಕೆ ನೀಡುವ ಕೊಡುಗೆ ಮಾತ್ರ ಶಾಶ್ವತವಾಗಿರುತ್ತದೆ ಎಂದು ಹೇಳಿದರು.
ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹುಟ್ಟು ಸಾವು ನಮ್ಮ ಕೈಯಲ್ಲಿಲ್ಲ. ಭಗವಂತನ ಪ್ರೇರಣೆಯಂತೆ ಹೋಗೋ ಮುಂಚೆ ಹೆಸರು ಉಳಿಸುವ ಕೆಲಸ ಮಾಡೋಣ. ನಿವೃತ್ತಿ ಹೊಂದಿದ್ದೇವೆ ಎನ್ನುವ ಭಾವನೆಯಿಂದ ಹೊರಬಂದು ಉತ್ತಮ ಜೀವನ ಸಾಗಿಸಬೇಕು ಎಂದರು.
ಸಂಘದ ಜಿಲ್ಲಾಧ್ಯಕ್ಷ ಮಹಾದೇವಪ್ಪ ಏಗನೂರು ಮಾತನಾಡಿ, ರಾಜ್ಯದಲ್ಲಿ ಜಿಲ್ಲೆಯ ಭವನ ಐದನೇಯ ಸಂಘದ ಸ್ವಂತ ಕಟ್ಟಡವಾಗಿದ್ದು, ಅದಕ್ಕೆ ಜಿಲ್ಲೆಯ ರಾಜಕೀಯ ಮುಖಂಡರ ಹಾಗೂ ಸಂಘದ ಸದಸ್ಯರ ಸಹಕಾರ ಕಾರಣವಾಗಿದೆ. ಸಂಘ ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಪದಾಕಾರಿಗಳಾದ ಮಹಾದೇವಪ್ಪ ಹಂಚಿನಾಳ, ರಾಮಣ್ಣ ಹವಳೆ, ದಾನಮ್ಮ, ಅಜೀಜಾ ಸುಲ್ತಾನ್, ಮುಖಂಡ ಸಿದ್ದನಗೌಡ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net