

ಬೆಳಗಾವಿ: ಸರ್ಕಾರದ ಅಭಿವೃದ್ಧಿ ಕಾರ್ಯಗಳು, ಗ್ಯಾರಂಟಿ ಯೋಜನೆಗಳು ಮತ್ತು ಕಾರ್ಯಕರ್ತರ ಶ್ರಮದಿಂದಲೇ ವಿಧಾನಸಭಾ ಉಪಚುನಾವಣೆಯಲ್ಲಿ ಮೂರೂ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದು ಲೋಕಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಯಕತ್ವದ ಕೊರತೆಯಿಂದ ಚದುರುತ್ತಿದ್ದ ಮತಗಳು ಶಿಗ್ಗಾವಿಯಲ್ಲಿ ಅಹಿಂದ ಅಭ್ಯರ್ಥಿಯ ಗೆಲುವಿಗೆ ಕಾರಣವಾಗಿದೆ. ಕೇವಲ ಸಂಡೂರಿನಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ, ಈಗ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದರು.
ಕಿಂಗ್ ಮೇಕರ್ ಆಗಲು ತಾವು ಉಪಯೋಗಿಸಿದ ತಂತ್ರಗಾರಿಕೆ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದೊಂದು ಆಯುರ್ವೇದಿಕ್ ಔಷಧಿ ಇದ್ದಂತೆ ಎಲ್ಲವನ್ನು ಹೇಳಲಾಗುವುದಿಲ್ಲ. ಅನೇಕ ಸವಾಲುಗಳನ್ನು ಎದುರಿಸಿ ಪ್ರತಿನಿಧಿತ್ವದ ಕ್ಷೇತ್ರಗಳನ್ನು ಗೆಲ್ಲಿಸಲಾಗಿದೆ. ಚಿಕ್ಕೋಡಿ ಲೋಕಸಭೆಯಲ್ಲಿಯೂ ಕಾಂಗ್ರೆಸ್ ಅನ್ನು ಗೆಲ್ಲಿಸಲಾಗಿದೆ. ಉಪಚುನಾವಣೆಯಲ್ಲಿಯೂ ಗೆಲ್ಲುವ ವಿಶ್ವಾಸವಿತ್ತು. ಇದರ ಶ್ರೇಯ ಕಾರ್ಯಕರ್ತರಿಗೆ ದಕ್ಕಬೇಕು ಎಂದರು.
ರಾಜ್ಯದ ಎಲ್ಲೆಡೆಯೂ ನಮ್ಮ ಮಾದರಿಯಂತೆ ಚುನಾವಣೆಯನ್ನು ನಡೆಸಿದರೆ ಕಾಂಗ್ರೆಸ್ ಗೆಲುವು ಕಟ್ಟಿಟ್ಟ ಬುತ್ತಿ. ಈ ಬಾರಿಯ ಚುನಾವಣೆಯಿಂದ ಅಲ್ಪಸಂಖ್ಯಾತರಲ್ಲೂ ಗೆಲ್ಲುವ ವಿಶ್ವಾಸ ಬೆಳೆದಿದೆ. ವಕ್ಫ್ ಪರಿಣಾಮ ಚುನಾವಣೆಯ ಮೇಲೆ ಬೀರಿಲ್ಲ. ಶಿಗ್ಗಾವಿಯಲ್ಲಿಯೂ 650 ಜನರಿಗೆ ನೋಟಿಸ್ ಬಂದಿದೆ. ಅದರಲ್ಲಿ ಕೇವಲ 150 ಜನ ಹಿಂದುಗಳಿದ್ದಾರೆ. ಉಳಿದೆಲ್ಲವೂ ಮುಸ್ಲಿಮ್ ರೈತರೇ ಆಗಿದ್ದಾರೆ. ವಕ್ಫ್ ವಿರುದ್ಧ ಹೊರಾಡಲು ಕಾನೂನಿದೆ. ಇದರ ಪರಿಣಾಮ ಸಂಪೂರ್ಣ ಸಮಾಜದ ಮೇಲಾಗುವುದಿಲ್ಲ. ಚುನಾವಣೆ ಫಲಿತಾಂಶದಿಂದ ನಾಯಕತ್ವ ಬದಲಾವಣೆಯ ಪ್ರಶ್ನೆ ಬರುವುದಿಲ್ಲ. ಅದ್ರೇ, ಡಬಲ್ ಪ್ರಮೋಷನ್ ಸಿಕ್ಕಂತಾಗಿದೆ ಎಂದರು. ಸದ್ಯ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ನಮ್ಮ ಸಿಎಂ ಗಟ್ಟಿಯಾಗಿದ್ದಾರೆ ಎಂದರು. ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಇವಿಎಂ ಮಷಿನ್ ಇರುವ ವರೆಗೂ ಇಂತಹ ತಂತ್ರಗಾರಿಕೆಗಳು ನಡೆಯಲಿವೆ. ಗಿವ್ ಆ್ಯಂಡ್ ಟೇಕ್ ನಿಯಮವನ್ನು ಇದರಲ್ಲಿ ಅನುಸರಿಸಲಾಗಿದೆ ಎಂದರು.
ಮಹಾತ್ಮಾ ಗಾಂಧೀಜಿ ಅವರು ಅಧ್ಯಕ್ಷತೆ ವಹಿಸಿದ್ದ ಎಐಸಿಸಿ ಅಧಿವೇಶನದ ಶತಮಾನೋತ್ಸವದ ನಿಮಿತ್ತ ಬೆಳಗಾವಿಯಲ್ಲಿ ‘ಗಾಂಧಿ ಭಾರತ’ ಕಾರ್ಯಕ್ರಮವನ್ನು ಅದ್ದೂರಿಯಾಗಿ ಅಚರಿಸಲಾಗುವುದು. ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ವಿನಯ್ ನಾವಲಗಟ್ಟಿ, ರಾಜಾಸಲೀಂ ಕಾಶಮ್ಮನವರ, ಜಿಪಂ ಮಾಜಿ ಸದಸ್ಯ ಸಿದ್ದು ಸುಣಗಾರ, ಪ್ರದೀಪ ಎಂ.ಜೆ., ಅನಂತಕುಮಾರ ಬ್ಯಾಕೋಡ, ಪ್ರಭಾವತಿ ಚವಡಿ ಇತರರಿದ್ದರು.