

ಗದಗ: ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದ ಬಡಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ಸಹಕಾರಿಯಾಗಿವೆ. ಅರ್ಹರಿಗೆ ಯೋಜನೆಗಳ ಸೌಲಭ್ಯ ಸುಲಭವಾಗಿ ತಲುಪಲು ಅಧಿಕಾರಿ ವರ್ಗ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು ಎಂದು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ತಿಳಿಸಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಗುರುವಾರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಸಹಯೋಗದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅಧಿಕಾರಿಗಳಿಗೆ ಸೂಕ್ತ ಸಲಹೆ, ಸೂಚನೆಗಳನ್ನು ನೀಡಿದರು.
ಸೆ.19ರಂದು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಕೆ. ಪಾಟೀಲ ನೇತೃತ್ವದಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ ಸಚಿವರ ಸೂಚನೆಯಂತೆ ತಾಲೂಕು ಮಟ್ಟದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಶೇ 100ರಷ್ಟು ಪ್ರಗತಿ ಸಾಧಿಸಬೇಕು ಹಾಗೂ ಪಂಚ ಗ್ಯಾರಂಟಿಗಳ ಅನುಷ್ಠಾನಕ್ಕೆ ಇರುವ ತಾಂತ್ರಿಕ ತೊಡಕುಗಳ ನಿವಾರಣೆಗೆ ಸಮಿತಿ ಚಟುವಟಿಕೆಯಿಂದ ಕಾರ್ಯನಿರ್ವಹಿಸುವಂತೆ ಹೇಳಿದ್ದರು. ಅವರ ಮಾರ್ಗದರ್ಶನದಂತೆ ನಾವೆಲ್ಲರೂ ಅರ್ಹರಿಗೆ ಗ್ಯಾರಂಟಿಗಳ ಸೌಲಭ್ಯ ತಲುಪುವಂತೆ ಕಾರ್ಯನಿರ್ವಹಿಸೋಣ ಎಂದರು.
ತಾಂತ್ರಿಕ ಸಮಸ್ಯೆಗಳ ನಿವಾರಣೆಗೆ ಅಧಿಕಾರಿಗಳು ಮುತುವರ್ಜಿ ವಹಿಸಿ, ಸಮಿತಿ ಸದಸ್ಯರನ್ನು ಒಳಗೊಂಡಂತೆ ಪ್ರತ್ಯೇಕ ಸಭೆಗಳನ್ನು ಏರ್ಪಡಿಸಿ ತಾಂತ್ರಿಕ ಸಮಸ್ಯೆಗಳ ಇತ್ಯರ್ಥಕ್ಕೆ ಮುಂದಾಗೋಣ. ಅಧಿಕಾರಿಗಳ ಸಹಕಾರದೊಂದಿಗೆ ಕೆಲಸ ನಿರ್ವಹಿಸಬೇಕು. ಸರ್ಕಾರದ ಉದ್ದೇಶ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಬಲಗೊಳಿಸುವುದಾಗಿದೆ. ಸರ್ಕಾರದ ಉದ್ದೇಶ ಸಾಕಾರಕ್ಕಾಗಿ ನಾವೆಲ್ಲ ಒಮ್ಮತದಿಂದ ಶ್ರಮಿಸೋಣ ಎಂದು ಹೇಳಿದರು.
ಸಮಿತಿ ಸದಸ್ಯ ಕೃಷ್ಣಗೌಡ ಪಾಟೀಲ ಮಾತನಾಡಿ, ರಾಜ್ಯದ 1.10 ಕೋಟಿ ಕುಟುಂಬಗಳ ಬಡತನ ನಿರ್ಮೂಲನೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಸಫಲವಾಗಿವೆ. ಪಂಚ ಗ್ಯಾರಂಟಿಗಳ ಸದ್ಬಳಕೆಯಿಂದ ಪ್ರತಿ ತಿಂಗಳು ಪ್ರತಿ ಕುಟುಂಬಕ್ಕೆ 5,000 ರೂ. ಸಹಾಯ ಸಿಗುತ್ತಿದೆ. ಬಡವರು ಹಸಿವಿನಿಂದ ಬಳಲಬಾರದು. ಜನಪ್ರತಿನಿಧಿಗಳಾದವರು ಸರ್ಕಾರದ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಬೇಕು ಎಂದರು.
ಗ್ಯಾರಂಟಿ ಸಮಿತಿ ಜಿಲ್ಲಾ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ಪಡಿತರ ಪಡೆಯಲು ಪಡಿತರದಾರರು ಥಂಬ್ ನೀಡಿದರೂ ತಾಂತ್ರಿಕ ಸಮಸ್ಯೆಗಳಿಂದ ಪಡಿತರ ಪಡೆಯಲು ಸಾಧ್ಯವಾಗುತ್ತಿಲ್ಲ. ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿ ಹಲವಾರು ತಿಂಗಳುಗಳೇ ಗತಿಸಿದರೂ ಈವರೆಗೂ ಮಂಜೂರಾತಿ ದೊರೆತಿಲ್ಲ. ಇಂತಹ ಹಲವಾರು ಸಮಸ್ಯೆಗಳಿದ್ದು ಅವುಗಳ ನಿವಾರಣೆಗೆ ವಿಶೇಷ ಶಿಬಿರ ಹಮ್ಮಿಕೊಳ್ಳುವ ಮೂಲಕ ಸ್ಥಳದಲ್ಲೇ ತಾಂತ್ರಿಕ ಸಮಸ್ಯೆಗಳ ಇತ್ಯರ್ಥಕ್ಕೆ ಮುಂದಾಗೋಣ ಎಂದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಮಾತನಾಡಿ, ಗ್ಯಾರಂಟಿಗಳ ಅನುಷ್ಠಾನ ಪ್ರತಿಶತ ನೂರರಷ್ಟು ಸಾಧನೆಗೆ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದರು.
ತಾಪಂ ಇಒ ಮಲ್ಲಯ್ಯ ಕೆ. ಮಾತನಾಡಿ, ಶೇ 100ರಷ್ಟು ಪ್ರಗತಿ ನಮ್ಮ ಗುರಿಯಾಗಿರಲಿ. ರಾಜ್ಯದಲ್ಲಿಯೇ ಗದಗ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನದಲ್ಲಿ ಉನ್ನತ ಸ್ಥಾನದಲ್ಲಿರುವಂತೆ ನೋಡಿಕೊಳ್ಳೋಣ ಎಂದರು.
ಸಮಿತಿ ಸದಸ್ಯರಾದ ದಯಾನಂದ ಪವಾರ, ಸಂಗು ಕರಕಲಕಟ್ಟಿ, ಮೀನಾಕ್ಷಿ ಬೆನಕಣ್ಣವರ, ಶಂಭು ಕಾಳೆ, ನಿಂಗಪ್ಪ ದೇಸಾಯಿ, ಸಂಗಮೇಶ ಹಾದಿಮನಿ, ರಮೇಶ , ದೇವರೆಡ್ಡಿ ತಿರ್ಲಾಪುರ, ಮಲ್ಲಪ್ಪ ದಂಡಿನ, ಗಣೇಶ ಸಿಂಗ್ ಮಿಟಾಡಿ, ಮಲ್ಲಪ್ಪ ಬಾರಕೇರ, ಭಾಷಾ ಮಲ್ಲಸಮುದ್ರ, ಸಾವಿತ್ರಿ ಹೂಗಾರ ಸಲಹೆ ಸೂಚನೆಗಳನ್ನು ನೀಡಿದರು. ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.