ಸಂಸ್ಥೆ ಬೆಳವಣಿಗೆಗೆ ಹಿರಿಯರ ಶ್ರಮವೇ ಕಾರಣ

22 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕೆನರಾ ಬ್ಯಾಂಕ್​ ಇಂದು ಇಷ್ಟೊಂದು ಪ್ರಸಿದ್ಧಿ, ಸುರಕ್ಷತೆಗೆ ಹೆಸರಾಗಲು ನಮಗಿಂತ ಮೊದಲು ಕೆಲಸ ಮಾಡಿ ಭದ್ರ ಅಡಿಪಾಯ ಹಾಕಿದ ಹಿರಿಯರು ಕಾರಣ. ಅವರ ಪರಿಶ್ರಮ, ಶ್ರದ್ಧೆ, ತ್ಯಾಗ, ವಿನಯ ಪೂರ್ಣ ಸೇವೆಯಿಂದ ಬ್ಯಾಂಕ್​ ರಾಷ್ಟ್ರದ ಮುಂಚೂಣಿಯಲ್ಲಿ ತನ್ನ ಸ್ಥಾನ ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್​ ಅಧ್ಯಕ್ಷ ಶ್ರೀಕಾಂತ ಭಂಡಿವಾಡ ಹೇಳಿದರು.
ನಗರದ ಆಲೂರು ವೆಂಕಟರಾವ್​ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕೆನರಾ ಬ್ಯಾಂಕ್​ ನಿವೃತ್ತ ಅಧಿಕಾರಿಗಳ ಸಂಘದ ಸದಸ್ಯರ ಹಾಗೂ ಸಹ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.
ನಿವೃತ್ತರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಸಾಧ್ಯವಾದಷ್ಟು ಸಾಮಾಜಿಕ ಸೇವೆಯಲ್ಲಿ ತೊಡಗಿ ಯುವಕರಿಗೆ ಮಾರ್ಗದರ್ಶನ ಮಾಡಬೇಕು ಎಂದರು.
ಕೆನರಾ ಬ್ಯಾಂಕ್​ ಪ್ರಾದೇಶಿಕ ಕಚೇರಿ ಉಪ ಮಹಾ ಪ್ರಬಂಧಕ ಸಾಜಲ್​ ಸಮೀರ ಮಾತನಾಡಿ, ಕೆನೆರಾ ಬ್ಯಾಂಕ್​ ದೊಡ್ಡ ಸಂಸ್ಥೆಯಾಗಿ ಬೆಳೆಯುವಲ್ಲಿ ಹಿಂದೆ ದುಡಿದು ಭದ್ರ ಬುನಾದಿ ಹಾಕಿದ ಹಿರಿಯರ ಶ್ರಮ ದಾಖಲಿಸುವಂತಹದು. ನಿವೃತ್ತರ ಯಾವುದೇ ಸಮಸ್ಯೆಗಳನ್ನು ತಮ್ಮ ಜತೆ ಹಂಚಿಕೊಂಡು ಪರಿಹರಿಸಿಕೊಳ್ಳಬೇಕು ಎಂದರು.
ಉದಯ ಮಹಾಲೆ, ವಿಲಾಸ ಮಹಾಲೆ, ಇತರರು ಇದ್ದರು. ನಿವೃತ್ತ ವಿಭಾಗೀಯ ಮ್ಯಾನೇಜರ್​ ಕೆ.ಪಿ. ರಾವ್​ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತರ ಸಮಸ್ಯೆಗಳಾದ ಆರೋಗ್ಯ ವಿಮೆ, ಪಿಂಚಣಿ ಹೆಚ್ಚಳ, ಕುಟುಂಬ ಪಿಂಚಣಿ ಸೇರಿ ಇತರ ವಿಷಯಗಳ ಕುರಿತು ಜೆ.ಎಸ್​.ಎಸ್​ ಜಗದೀಶ, ಶಾಶ್ವತ ಸಲಹೆಗಾರ ಕೆ.ಬಿ. ಬಳ್ಳೂರ ಸದಸ್ಯರ ಜತೆ ಸಂವಾದ ನಡೆಸಿದರು. 75 ವರ್ಷಗಳನ್ನು ಪೂರ್ಣಗೊಳಿಸಿದ ನಿವೃತ್ತ ಅಧಿಕಾರಿಗಳಾದ ಸುರೇಶ ಕಾಮತ, ಜಿ.ಆರ್​. ಮಳೇಕರ, ಅನಂತ ಥಿಟೆ, ಪ್ರಕಾಶ ಕುಲಕಣಿರ್, ಬಿ.ಎಂ. ಜೋಶಿ ಅವರಿಗೆ ಸನ್ಮಾನಿಸಲಾಯಿತು.
ಕಿಶೋರ ಮಾಡಲಗಿ ಸ್ವಾಗತಿಸಿದರು. ಗುರುನಾಥ ಇನಾಮದಾರ ನಿರೂಪಿಸಿದರು. ಮಾಲತೇಶ ಹುಬ್ಬಳ್ಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net