

ಮೈಸೂರು : ವ್ಯಸನಿಯು ಕುಡಿತದಿಂದ ಹೊರಬಂದು ದೂರ ಉಳಿಯುವುದೇ ಅತೀ ದೊಡ್ಡ ಸಾಧನೆ ಎಂದು ಬಸವಮಾರ್ಗ ಸಂಸ್ಥೆಯ ಸಂಸ್ಥಾಪಕ ಬಸವಣ್ಣ ಹೇಳಿದರು.
ಬಸವಮಾರ್ಗ ವ್ಯಸನಮುಕ್ತ ಕೇಂದ್ರದ 5 ನೇ ವರ್ಷದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಸಂಸ್ಥೆಯು ಆಯೋಜಿಸಿರುವ 10 ದಿನಗಳ ಉಚಿತ ಕುಡಿತ ಬಿಡಿಸುವ ಶಿಬಿರದ ಅಂಗವಾಗಿ ಹೆಬ್ಬಾಳ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ಇರುವ ಕೇಂದ್ರದ ಶಾಖೆಯಲ್ಲಿ ಬುಧವಾರ ಆಯೋಜಿಸಿದ್ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಮಾನ್ಯ ಜನರ ಬುದ್ಧಿಶಕ್ತಿಗಿಂತ ಕುಡಿತಕ್ಕೆ ದಾಸರಾದವರ ಬುದ್ಧಿಶಕ್ತಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ವ್ಯಸನಿಗಳಷ್ಟು ಬುದ್ದಿವಂತರು, ಶಕ್ತಿಶಾಲಿಗಳು ಯಾರೂ ಇಲ್ಲ. ಯಾವ ಕ್ಷೇತ್ರದಲ್ಲಿ ನೀವು ತೊಡಗಿಸಿಕೊಳ್ಳುತ್ತೀರೋ ಆ ಕ್ಷೇತ್ರದಲ್ಲಿ ನೀವು ಅಖಂಡ ಯಶಸ್ಸನ್ನು ಸಾಧಿಸಿ ತೋರಿಸುತ್ತೀರಾ. ಯಾವುದೇ ಕೆಲಸವಾದರೂ ಸರಿ ಅದನ್ನು ತುಂಬಾ ಅಚ್ಚು ಕಟ್ಟಾಗಿ ಮಾಡುತ್ತೀರಾ. ಆದರೆ ನೀವು ಆಯ್ಕೆ ಮಾಡಿಕೊಂಡಿರುವ ಹವ್ಯಾಸದಿಂದ ನಿಮ್ಮ ಜೀವನ ನರಕದ ಕೂಪವಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಕುಡಿತದ ಚಟಕ್ಕೆ ದಾಸರಾದರೆ ಮನಷ್ಯ ತನಗೆ ಅರಿವಿಲ್ಲದಂತೆ ತನ್ನ ಜೀವನವನ್ನೇ ಕಳೆದುಕೊಳ್ಳುತ್ತಾನೆ. ಸಮಾಜ, ಕುಟುಂಬದಲ್ಲಿ ಅವನಿಗೆ ಗೌರವ ಸಿಗುವುದಿಲ್ಲ. ಉದ್ಯೋಗದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುವುದಿಲ್ಲ. ಸಂಸಾರದಲ್ಲಿ ನೆಮ್ಮದಿ ಇರುವುದಿಲ್ಲ. ಈ ಎಲ್ಲ ಕಷ್ಟದ ಕೆನ್ನಾಲಿಗೆಯಲ್ಲಿ ನೀವು ಬಳಲಬೇಕಾಗುತ್ತದೆ. ಈ ನಿಟ್ಟಿನಲ್ಲಿ ನೀವೇ ಈ ಬಗ್ಗೆ ಸರಿಯಾದ ಯೋಚನೆ ಮಾಡಬೇಕು. ಈ ದಾಸ್ಯದಿಂದ ಹೊರ ಬಂದು ಸಮಾಜ, ಕುಟುಂಬದಲ್ಲಿ ಗೌರವ, ಹೆಸರು ಸಂಪಾದನೆ ಮಾಡಬೇಕು. ಆ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಸಮಾಜ ಹಾಗೂ ಕುಟುಂಬದಿಂದ ತಿರಸ್ಕಾರಕ್ಕೆ ಒಳಪಟ್ಟ ವ್ಯಸನಿಗಳಿಗೆ ಒಂದು ಸಮರ್ಪಕವಾದ ಸೂರು ಕಲ್ಪಿಸಿಕೊಡಬೇಕು. ಮೂರು ಹೊತ್ತು ಅನ್ನ ನೀಡಬೇಕು ಎನ್ನುವ ಮಹದಾಸೆಯಿಂದ ಈ ವ್ಯಸನ ಮುಕ್ತ ಕೇಂದ್ರವನ್ನು ಸ್ಥಾಪನೆ ಮಾಡಲಾಗಿದೆ. ಈ ಸಂಸ್ಥೆಗೆ ಭಗವಂತನೆ ಫೌಂಡರ್ ಮತ್ತು ಓನರ್ ಆಗಿದ್ದಾರೆ ಎಂದರು.
ವ್ಯಸನಿಗಳನ್ನು ಯಾರೇ ತಿರಸ್ಕಾರ ಮಾಡಿದರೂ ಬಸವಮಾರ್ಗ ಎಂದೂ ತಿರಸ್ಕಾರ ಮಾಡುವುದಿಲ್ಲ. ಅವರಿಗೆಂದೇ ಈ ಸಂಸ್ಥೆ ಸದಾ ಬಾಗಿಲು ತೆರೆದಿರುತ್ತದೆ. ಇದು ನಿಮ್ಮ ಸಂಸ್ಥೆ. 10 ದಿನಗಳ ಈ ಉಚಿತ ಶಿಬಿರದಲ್ಲಿ ಗುಣಮಟ್ಟದ ವಸತಿ, ಪ್ರಕೃತಿದತ್ತವಾಗಿ ವಾತಾವರಣ, ಗುಣಮಟ್ಟದ ಊಟ, ಯೋಗ, ಧ್ಯಾನ, ಪ್ರಾಣಾಯಾಮ, ವೈದ್ಯರಿಂದ ಆರೋಗ್ಯ ತಪಾಸಣೆ, ವಿಷಯ ತಜ್ಞರಿಂದ ಬೋಧನೆ, ವಿವಿಧ ಕ್ರೀಡಾಕೂಟಗಳು, ವ್ಯಕ್ತಿತ್ವ ವಿಕಸನ ತರಗತಿ ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ಕಾರ್ಯಕ್ರಮಗಳನ್ನು ಸದ್ಬಳಕೆ ಮಾಡಿಕೊಂಡು ಸಮಾಜಕ್ಕೆ ನೀವು ಹೊಸ ಮನುಷ್ಯರಾಗಿ ಹೊರ ಹೊಮ್ಮಬೇಕು. ನೀವು ಕೂಡ ಸಮಾಜಕ್ಕೆ ನಾಲ್ಕರೂ ಕೊಡುಗೆಗಳನ್ನು ನೀಡಬೇಕು ಎಂದು ಕಿವಿಮಾತು ಹೇಳಿದರು.
ವಿಜಯವಾಣಿ ದಿನ ಪತ್ರಿಕೆಯ ಮೈಸೂರು ಬ್ಯುರೋ ಮುಖ್ಯಸ್ಥರಾದ ಎಂ.ಆರ್.ಸತ್ಯನಾರಾಯಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕುಡಿತದ ದಾಸ್ಯಕ್ಕೆ ಬಲಿಯಾದ ಮೇಲೆ ಮನುಷ್ಯ ಎಲ್ಲವನ್ನೂ ಕಳೆದುಕೊಳ್ಳುತ್ತಾನೆ. ಮನಸ್ಥಿತಿ ಹಾಳಾಗುತ್ತದೆ. ಹೆಂಡತಿ, ಮಕ್ಕಳು ಬೀದಿ ಪಾಲಾಗುತ್ತಾರೆ. ಸಂಬಂಧಿಕರು ಕಟುವಾಗಿ ಟೀಕೆ ಮಾಡುತ್ತಾರೆ. ಈ ಪ್ರಜ್ಞೆ ಪ್ರತಿಯೊಬ್ಬ ವ್ಯಸನಿಯ ಮನಸ್ಸಿನಲ್ಲಿ ಇರಬೇಕು. ಸುಖವಾದ ಬದುಕನ್ನ ನಿರ್ಮಾಣ ಮಾಡಿಕೊಳ್ಳಲು ನಿಮಗೆ ಇದೊಂದು ಸುರ್ವಣವಾದ ಅವಕಾಶ. ಈ ಅವಕಾಶವನ್ನು ಎಲ್ಲ ವ್ಯಸನಮುಕ್ತ ಕೇಂದ್ರಗಳು ನೀಡುವುದಿಲ್ಲ. ಈ ಕಾರ್ಯಕ್ರಮವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.