

ಹುಬ್ಬಳ್ಳಿ: ಇಲ್ಲಿಯ ಭವಾನಿ ನಗರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬುಧವಾರ ಸುಯತೀಂದ್ರತೀರ್ಥ ಶ್ರೀಗಳ ಮಹಾಸಮಾರಾಧನೆ ಭಕ್ತಿ, ಶ್ರದ್ಧೆಯಿಂದ ಜರುಗಿತು.
ಬೆಳಗ್ಗೆ ಸುಪ್ರಭಾತ ಸೇವೆ, ನಿರ್ಮಾಲ್ಯ ವಿಸರ್ಜನೆ ಹಾಗೂ ವಿಶೇಷ ಅಭಿಷೇಕ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಜಯವಿಜಯ ಭಜನಾ ಮಂಡಳಿಗಳಿಂದ ದಾಸರ ಕೀರ್ತನೆಗಳು ಜರುಗಿದವು. ಮಧ್ಯಾಹ್ನ ರಥೋತ್ಸವ ಸಾಗಿ ಬಂದಿತು.
ಶ್ರೀಮಠದ ವ್ಯವಸ್ಥಾಪಕ ವೇಣುಗೋಪಾಲಾಚಾರ್ಯ ಮಾತನಾಡಿ, ಸುಯತೀಂದ್ರತೀರ್ಥರಿಗೆ ವಿಶೇಷವಾದ ರಾಯರ ಅನುಗ್ರಹವಿತ್ತು. ನೆರೆ ಹಾವಳಿಯಲ್ಲಿ ಇಡೀ ಮಂತ್ರಾಲಯ ಮುಳುಗಿ ಎದುರಾದ ಸಮಸ್ಯೆ ಪರಿಹರಿಸಿ ನವಮಂತ್ರಾಲಯ ನಿರ್ಮಿಸಿದರು. ಸ್ವಚ್ಛ ಮಂತ್ರಾಲಯ ಯೋಜನೆ ಮೂಲಕ ಹೊಸ ರೂಪ ಕೊಟ್ಟರು. ಗ್ರಾಮ ದೇವತೆ ಮಂಚಾಲಮ್ಮನ ದೇವಸ್ಥಾನ ಪುನರಜ್ಜೀವನಗೊಳಿಸಿದರು ಎಂದರು.
ವಿಚಾರಣಾಕರ್ತ ಎ.ಸಿ. ಗೋಪಾಲ, ಅರ್ಚಕ ಗುರುರಾಜಾಚಾರ್ಯ ಸಾಮಗ, ಧರ್ಮಾಧಿಕಾರಿ ರಾಘವೇಂದ್ರಾಚಾರ್ಯ, ಬಿಂದುಮಾಧವ ಪುರೋಹಿತ, ಪ್ರಭುರಾಜ ಅಪರಂಜಿ, ಭಕ್ತರು ಪಾಲ್ಗೊಂಡಿದ್ದರು.