

ಹೊಳೆನರಸೀಪುರ: ವಿಶ್ವವೇ ಹೆಮ್ಮೆ ಪಡುವಂತೆ ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿದ ಮಹಾನ್ ಚೇತನ ರಾಷ್ಟ್ರಕವಿ ಕುವೆಂಪು ಎಂದು ತಹಸೀಲ್ದಾರ್ ಕೆ.ಆರ್.ಶ್ರೀನಿವಾಸ ತಿಳಿಸಿದರು.
ಪಟ್ಟಣದ ಗಣಪತಿ ಪೆಂಡಾಲಿನಲ್ಲಿ ಶುಕ್ರವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಜನ್ಮ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುವೆಂಪು ಅವರ ಸಾಹಿತ್ಯ ಸಾರವನ್ನು ಜೀವನದಲ್ಲಿ ಅಳವಡಿಸಿ ಕೊಳ್ಳುವುದು ಬಹಳಷ್ಟಿದೆ ಎಂದು ಹೇಳಿದರು.
ಜ್ಞಾನಪೀಠ ಪ್ರಶಸ್ತಿ ಕುವೆಂಪು ಅವರ ಪಾಂಡಿತ್ಯ, ವ್ಯಕ್ತಿತ್ವ ಮತ್ತು ಚಿಂತನೆಗಳಿಗೆ ದೊರೆತ ಗೌರವ. ಕನ್ನಡ ಭಾಷೆಯನ್ನು ಉತ್ತುಂಗ ಸ್ಥಾನಕ್ಕೆ ಏರಿಸಿದ ಮಹಾನ್ ಚೇತನ. ಆರಂಭದಲ್ಲಿ ಇಂಗ್ಲಿಷ್ ಕವಿಯಾಗಿ ನಂತರ ಕನ್ನಡದ ಕವಿಯಾಗಿ ರೂಪುಗೊಂಡರು. ಪ್ರತಿ ಸಾಹಿತ್ಯದಲ್ಲೂ ಬದುಕಿಗೆ ಬೇಕಾದಂತಹ ಸಂದೇಶಗಳನ್ನು ನೀಡಿ, ವಿಶ್ವ ಮಾನವರಾದರು ಎಂದು ಬಣ್ಣಿಸಿದರು.
ಡಿವೈಎಸ್‌ಪಿ ಬಿ.ಬಿ.ಲಕ್ಷ್ಮೇಗೌಡ ಮಾತನಾಡಿದರು. ಇದಕ್ಕೂ ಮುನ್ನ ಕುವೆಂಪು ಅವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮೀ ಮಂಜುನಾಥ್, ಸದಸ್ಯರಾದ ರಾಜೇಶ್ವರಿ, ಜವರೇಗೌಡ, ಹೇಮಾವತಿ, ಶಿಕ್ಷಕರ ಸಂಘದ ಅಧ್ಯಕ್ಷೆ ಪುಷ್ಪಲತಾ, ಕನ್ನಡ ಸಾಹಿತ್ಯ ಪರಿಷತ್‌ತ ತಾಲೂಕು ಅಧ್ಯಕ್ಷ ಡಿಕೆ.ಕುಮಾರಯ್ಯ, ಸಾಹಿತಿ ಶಿವರಾಂ, ಜಿಪಂ ಎಇಇ ಪ್ರಭು, ತೋಟಗಾರಿಕೆ ಇಲಾಖೆ ಅಧಿಕಾರಿ ಭವ್ಯಾ, ಶಿರೆಸ್ತೇದಾರ್ ರವಿಕುಮಾರ್ ಉಪಸ್ಥಿತರಿದ್ದರು.