

ಮದ್ದೂರು: ಪಟ್ಟಣದ ಜೈನ ಸಮಾಜದ ವತಿಯಿಂದ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಗುರುವಾರ ವಿಶೇಷವಾಗಿ ಆಚರಿಸಲಾಯಿತು.
ಪಟ್ಟಣದ ಕೋಟೆ ಬೀದಿಯಲ್ಲಿರುವ ಸುಮತಿನಾಥ ಮಂದಿರದ ಆವರಣದಿಂದ ಮಹಾವೀರ ಅವರ ಭಾವಚಿತ್ರವನ್ನು ತೆರೆದ ವಾಹನದಲ್ಲಿರಿಸಿ ಮೆರವಣಿಗೆ ಮಾಡಲಾಯಿತು. ಪೇಟೆ ಬೀದಿ ಮೂಲಕ ತೆರಳಿ ಮೆರವಣಿಗೆ ಪ್ರವಾಸಿ ಮಂದಿರದವರೆಗೂ ಸಾಂಸ್ಕೃತಿ ಕಲಾತಂಡಗಳೊಟ್ಟಿಗೆ ಆಗಮಿಸಿತು. ನೂರಾರು ಜೈನಧರ್ಮಿಯರು ಶಾಂತಿಧೂತ ಮಹಾವೀರರ ಪರ ಘೋಷಣೆ ಕೂಗಿ ಧನ್ಯತೆ ಮೆರೆದರು.
ಮಹಾವೀರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಪುರಸಭೆ ಮಾಜಿ ಸದಸ್ಯ ಭರತ್‌ಕುಮಾರ್, ವಿಶ್ವಕ್ಕೆ ಶಾಂತಿ ಮಂತ್ರ ಬೋಧಿಸಿದ ಮಹಾನ್ ಸಂತ ಮಹಾವೀರರ ತತ್ವ ಆದರ್ಶಗಳು ಅನುಕರಣೀಯವೆಂದು ಬಣ್ಣಿಸಿದರು.
ಭಗವಾನ್ ಮಹಾವೀರರು ಅಹಿಂಸಾ ಧರ್ಮ ಬೋಧಿಸುವ ಮೂಲಕ ಪ್ರಾಣಿ-ಪಕ್ಷಿಗಳು ಸೇರಿದಂತೆ ಎಲ್ಲ ಜೀವಿಗಳ ಜತೆ ಅಹಿಂಸಾ ತತ್ವಗಳ ಮೂಲಕ ಬದುಕು ಕಟ್ಟಬೇಕೆಂಬ ತತ್ವವನ್ನು ಉಣಬಡಿಸಿದ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.
ಸ್ಥಳೀಯ ಸಾರ್ವಜನಿಕರು ಸೇರಿದಂತೆ ಇತರರಿಗೆ ಜೈನ ಸಮಾಜದ ವತಿಯಿಂದ ಅನ್ನಸಂತರ್ಪಣೆ ನೆರವೇರಿತು. ಸ್ಥಳೀಯ ಮುಖಂಡರಾದ ಗೌತಮ್‌ಚಂದ್, ಪ್ರಕಾಶ್‌ಚಂದ್, ಮದನ್‌ರಾಜ್, ಮಹಾವೀರ್‌ಚಂದ್, ಅಶೋಕ್‌ಕುಮಾರ್, ವಿನೋದ್‌ಕುಮಾರ್, ಸಂಪತ್‌ರಾಜ್, ಎಂ.ರಾಕೇಶ್, ನಿತೇಶ್ ಇತರರಿದ್ದರು.