

ವಿಜಯವಾಣಿ ಸುದ್ದಿಜಾಲ ಧಾರವಾಡ
ಕೃಷ್ಣನ ಬದುಕೇ ಒಂದು ದಿವ್ಯಗಾನ. ವ್ಯಕ್ತಿ ಸಮಾಜದ ನಡುವೆ ಸಂರ್ಷವಾದಾಗ ಸಮಾಜದ ಹಿತವೇ ಮುಖ್ಯ ಎಂಬುದೇ ಕೃಷ್ಣನ ಸಂದೇಶ ಎಂದು ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಹೇಳಿದರು.
ನಗರದ ವಿದ್ಯಾವರ್ಧಕ ಸಂಘದಲ್ಲಿ ಸ್ನೇಹ ಪ್ರತಿಷ್ಠಾನ ವತಿಯಿಂದ ಆಯೋಜಿಸಿರುವ ವಸಂತ ವ್ಯಾಖ್ಯಾನ ಮಾಲೆ ಉಪನ್ಯಾಸದಲ್ಲಿ ಭಾನುವಾರ ಭಗವಾನ್ ಶ್ರೀ ಕೃಷ್ಣನ ಕುರಿತು ಉಪನ್ಯಾಸ ನೀಡಿದರು.
ಕೃಷ್ಣನ ಸಲಹೆ ಮೇರೆಗೆ ಧರ್ಮರಾಜ ರಾಜಸೂಯಾಗ ಮಾಡಿದ. ಇದು ಕೃಷ್ಣನ ರಾಜತಾಂತ್ರಿಕ ನಡೆಯಾಗಿತ್ತು. ಜರಾಸಂಧ, ಶಿಶುಪಾಲ ಸಂಹಾರದಲ್ಲೂ ಕೃಷ್ಣನ ಜಾಣ್ಮೆಯ ನಡೆ ಮೆಚ್ಚುವಂತಹದ್ದು. ಅತೀ ಸಂಯಮ ವ್ಯಕ್ತಿತ್ವ ಅವನದ್ದು. ಪಾಂಡವರ ರಕ್ಷಣೆಗೆ ಸದಾ ಬೆನ್ನುಲುಬಂತೆ ನಿಂತಿದ್ದ. ಪಾಂಡವರಿಗೆ ದೂರ್ವಾಸ ಮುನಿಗಳೊಡ್ಡಿದ ಪರೀಕ್ಷೆ, ದುಯೋರ್ಧನನೊಂದಿಗೆ ಸಂಧಾನ, ಕರ್ಣನ ಭೇಟಿ ಸಂದರ್ಭದಲ್ಲಿ ಕೃಷ್ಣನ ಪಾತ್ರ ಗಣನೀಯ. ಅನೇಕ ಕಡೆ ಕರ್ಣನನ್ನು ವೈಭವೀಕರಿಸಲಾಗಿದೆ. ಆದರೆ ಕರ್ಣ ಎಂದಿಗೂ ಖಳನಾಯಕನೇ. ಆತ ಶೂರನಾದರೂ ಯಾವ ಯುದ್ಧವನ್ನೂ ಗೆದ್ದವನಲ್ಲ ಎಂದರು.
ಭೀಷ್ಮನ ಸಂಹಾರ ಹಾಗೂ ಪಾಂಡವರಲ್ಲಿ ಜ್ಞಾನ ಹಾನಿಯಾಗುವ ಸಂದರ್ಭದಲ್ಲಿ ಮಾತ್ರ ಕೃಷ್ಣ ಕೋಪಗೊಳ್ಳುವುದನ್ನು ಕಾಣಬಹುದು. ಕರ್ಣನ ರಥ ಸಿಲುಕಿ ಅರ್ಜುನ ಅವನ ಸಂಹಾರಕ್ಕೆ ಮುಂದಾದಾಗ, ಭೀಮ -ದುಯೋರ್ಧನರ ಗದಾಯುದ್ಧ ಹೀಗೆ ಕುರುಕ್ಷೇತ್ರ ಯುದ್ಧದ ಘಟನೆಗಳಲೆಲ್ಲ ಕೃಷ್ಣನ ನಡೆ-ನುಡಿ ಸ್ಮರಣೀಯ. ಮುಂದೆ ಗಾಂಧಾರಿ ಶಾಪದಿಂದ ನಿರ್ವಾಣ ಹೊಂದುವ ಕೃಷ್ಣ, ಭಗವದ್ಗೀತೆ, ಅಣುಗೀತೆ, ಉದ್ಧವ ಗೀತೆ ಮೂಲಕ ಇಂದಿಗೂ ಅವನ ಪ್ರಖರ ಜ್ಞಾನದ ಪ್ರಸರಣವಾಗುತ್ತಿದೆ. ಯಾವ ನಡೆಯಿಂದ ನಮಗೂ ಸಮಾಜಕ್ಕೂ ಒಳ್ಳೆಯದಾಗುತ್ತದೆಯೋ ಅದುವೇ ಧರ್ಮ.ಇದೇ ಕೃಷ್ಣನ ಬದುಕಿನ ಸಾರ ಎಂದರು.
ಸ್ನೇಹ ಪ್ರತಿಷ್ಠಾನದ ಅಧ್ಯಕ್ಷ ಹರ್ಷ ಡಂಬಳ, ಜಿ.ಸಿ. ತಲ್ಲೂರ, ಡಾ. ಪ್ರಮೋದ ಗಾಯಿ, ಕೃಷ್ಣ ಕಟ್ಟಿ, ಎಚ್.ವಿ. ಕಾಖಂಡಕಿ ಇತರರು ಇದ್ದರು.