ಏಕತೆಗೆ ಶ್ರಮಿಸಿದ ಮಹಾನಾಯಕ ಶ್ಯಾಮಪ್ರಸಾದ್ ಮುಖರ್ಜಿ

SHYAMPRASAD MUKHARJI
Published on

ಗಜೇಂದ್ರಗಡ: ದೇಶದ ಏಕತೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ ಶ್ಯಾಮಪ್ರಸಾದ್ ಮುಖರ್ಜಿ. ಅವರ ಆದರ್ಶಗಳನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಘೋರ್ಪಡೆ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ನಗರ ಘಟಕದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಶ್ಯಾಮಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭಾರತೀಯ ಸಂಸ್ಕೃತಿಯ ಆಧಾರದ ಮೇಲೆ ದೇಶವನ್ನು ಪುನರ್ ನಿರ್ಮಾಣ ಮಾಡುವ ಹಾಗೂ ಜಗತ್ತಿನಲ್ಲಿ ಭಾರತವನ್ನು ಪ್ರಬಲ ರಾಷ್ಟ್ರವನ್ನಾಗಿಸುವ ಗುರಿ ಇಟ್ಟುಕೊಂಡು, ಆ ಮಹಾನ್ ಕಾರ್ಯಕ್ಕೆ ತಮ್ಮ ಬದುಕನ್ನು ಮುಡುಪಾಗಿಟ್ಟ ಮುಖರ್ಜಿ ಅವರು ಶ್ರೇಷ್ಠ ವಿದ್ವಾಂಸರು, ರಾಜನೀತಿ ತಜ್ಞರಾಗಿದ್ದರು. ಅಸಾಧಾರಣ ಸಂಸದೀಯ ಪಟು. ಭಾರತೀಯ ರಾಜಕೀಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಪಾರ’ ಎಂದರು.

ಪಾಕಿಸ್ತಾನದಲ್ಲಿ ಹಿಂದುಗಳ ಮೇಲೆ ನಡೆದ ದೌರ್ಜನ್ಯಕ್ಕೆ ಕಿಡಿಕಾಡಿದ ಅವರು ಮಂತ್ರಿ ಮಂಡಲಕ್ಕೆ ರಾಜೀನಾಮೆ ನೀಡಿದ್ದರು. ನೀತಿ, ತತ್ವದ ಆಧಾರದ ಮೇಲೆ ಮಂತ್ರಿ ಪದವಿ ತ್ಯಾಗ ಮಾಡಿದ ಸ್ವಾತಂತ್ರ್ಯ ಭಾರತದ ಪ್ರಥಮ ರಾಷ್ಟ್ರ ನಾಯಕ ಮುಖರ್ಜಿಯವರು.

ದೇಶದ ಪರಿಸ್ಥಿತಿ ಅಧೋಗತಿಗೆ ಇಳಿದಾಗ, ರಾಜಕೀಯ ಅಸ್ಥಿರತೆ. ಆಡಳಿತ ದೋಷ ಕಂಡಾಗ ಅವಿರತವಾಗಿ ಶ್ರಮಿಸಿ ಭಾರತೀಯ ಜನಸಂಘ ಎಂಬ ಹೊಸ ಪಕ್ಷಕ್ಕೆ ನಾಂದಿ ಹಾಡಿದರು. 1953 ಅಕ್ಟೋಬರ್ 23 ರಂದು ಕಾಶ್ಮೀರವನ್ನು ಭಾರತದಲ್ಲಿ ಉಳಿಸಲು ನಡೆಸಿದ ಹೋರಾಟದಲ್ಲಿ ಮುಖರ್ಜಿಯವರು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದರು.

ಅವರ ಅದರ್ಶ, ತ್ಯಾಗ ಬಲಿದಾನ ವ್ಯರ್ಥವಾಗದಂತೆ ದೇಶದ ಅಖಂಡತೆಯನ್ನು ಉಳಿಸಿ, ದೇಶವನ್ನು ಕಟ್ಟಿ ಬೆಳೆಸುವ ಪ್ರಯತ್ನ ಮಾಡೋಣ ಎಂದು ಹೇಳಿದರು.

ವೀರಪ್ಪ ಪಟ್ಟಣಶೆಟ್ಟಿ, ಸುಭಾಸ ಮ್ಯಾಗೇರಿ, ಕನಕಪ್ಪ ಅರಳಿಗಿಡದ, ಯಮನಪ್ಪ ತಿರಕೋಜಿ, ರವಿ ಶಿಂಗ್ರಿ, ಗುಲಾನಬಿ ಹುನಗುಂದ, ಶರಣಪ್ಪ ಉಪ್ಪಿನಬೆಟಗೇರಿ, ಉಮೇಶ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net