

ಕೈಲಾಂಚ : ನಾಟಕಗಳು ದೇಶಿ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ಭಾರತೀಯ ಸಂಸ್ಕೃತಿಯ ಬೃಹತ್ ಕಣಜವಾಗಿವೆ ಎಂದು ರಾಮನಗರ ತಾಲೂಕು ಜೆಡಿಎಸ್ ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ ತಿಳಿಸಿದರು.
ಕೈಲಾಂಚ ಗ್ರಾಮದಲ್ಲಿ ಗುರುವಾರ ರಾತ್ರಿ ಏರ್ಪಡಿಸಿದ್ದ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಪೌರಾಣಿಕ ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿ, ಮನುಷ್ಯನಿಗೆ ನಾಟಕಗಳು ಮಾನವೀಯ ಮೌಲ್ಯಗಳನ್ನು ತಿಳಿಸಿಕೊಡುತ್ತವೆ. ರಂಗ ಕಲೆಯಲ್ಲಿನ ವ್ಯಕ್ತಿಯ ಅಭಿನಯದಿಂದ ಮನರಂಜನೆ ಸಿಗುವುದರ ಜತೆಗೆ ನಾಟಕಗಳಲ್ಲಿನ ಸಾರ ತಿಳಿಯುತ್ತದೆ. ನಾಟಕಗಳಲ್ಲಿನ ಮಾಹಿತಿ ಅರ್ಥೈಸಿಕೊಂಡಾಗ ಜೀವನದ ಸಂಪೂರ್ಣ ನೀತಿ ಪಾಠಗಳು ತಿಳಿಯುತ್ತದೆ. ಜನರು ಹೆಚ್ಚು ಹೆಚ್ಚು ನಾಟಕ ಕಲೆಗಳಿಗೆ ಉತ್ತೇಜನ ನೀಡಿ ರಂಗ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪಿ.ಅಶ್ವತ್ಥ್ ಮಾತನಾಡಿ, ನಾಟಕಗಳು ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಕೊಡುಗೆಯಾಗಿ ನೀಡುತ್ತಿವೆ. ನಾಟಕಗಳು ಗ್ರಾಮದಲ್ಲಿ ಪರಸ್ಪರ ಒಗ್ಗಟ್ಟು ಸಾಮರಸ್ಯಕ್ಕೆ ವೇದಿಕೆಯಾಗುತ್ತವೆ. ನಾಟಕ ಕಲೆಗಳು ಹೆಚ್ಚು ಹೆಚ್ಚು ಅಭಿನಯಗೊಂಡಾಗ ಸಾಮರಸ್ಯದ ಕೊರತೆ ಉಂಟಾಗುವುದಿಲ್ಲ. ಜನರ ಒಗ್ಗೂಡಿಕೆ ಸಮಾಜಮುಖಿ ಜೀವನಕ್ಕೆ ಮುನ್ನುಡಿ ಹಾಕಿಕೊಡುತ್ತವೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಎಚ್.ಸಿ.ರಾಜಣ್ಣ ಮಾತನಾಡಿ, ರಂಗ ಕಲೆಗಳು ಉತ್ತಮ ಮಾಹಿತಿಯನ್ನು ಒಳಗೊಂಡಿದ್ದು, ಜನರ ಜೀವನದಲ್ಲಿ ಮನರಂಜನೆ ನೀಡುತ್ತಾ ಕ್ರೌರ್ಯ, ಅನ್ಯಾಯ, ಸತ್ಯ, ಧರ್ಮದ ಬಗ್ಗೆ ಉತ್ತಮ ರೀತಿಯಲ್ಲಿ ಕಟ್ಟಿ ತೋರಿಸಿ, ಜನರನ್ನು ಸರಿದಾರಿಗೆ ತರಲು ಪ್ರಯತ್ನಿಸಿರುವುದನ್ನು ನಾವು ನಾಟಕಗಳಿಂದ ಕಾಣಬಹುದಾಗಿದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ ಮಾತನಾಡಿ, ನಾಟಕಗಳು ಹಿರಿಯರು ಹಾಕಿಕೊಟ್ಟ ಬಳುವಳಿಯಾಗಿದೆ. ಉತ್ತಮ ಗ್ರಾಮೀಣ ಸಂಸ್ಕೃತಿ, ಜನರ ಒಗ್ಗೂಡುವಿಕೆ, ಸಾಮಾಜಿಕ ಚಿಂತನೆಗಳು ನಾಟಕಗಳಲ್ಲಿ ಅಡಗಿದೆ. ಸಂಘ ಸಂಸ್ಥೆಗಳು, ಸಮಾಜದ ಗಣ್ಯರು, ಜನಪ್ರತಿನಿಧಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಾಟಕ ಕಲೆಗಳಿಗೆ ಹೆಚ್ಚು ಉತ್ತೇಜನ ನೀಡಿ ಯುವ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದರು.
ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ಆರ್. ಪಾಂಡುರಂಗ, ಗ್ರಾಪಂ ಉಪಾಧ್ಯಕ್ಷ ವಡ್ಡರಹಳ್ಳಿ ವೆಂಕಟೇಶ್, ಸದಸ್ಯರಾದ ಜಿ.ಪಿ. ಗಿರೀಶ್ ವಾಸು, ಶಶಿ ರೇಣುಕಾ, ಗ್ರಾಪಂ ಮಾಜಿ ಸದಸ್ಯ ಗೋಪಾಲನಾಯ್ಕ, ವಿಎಸ್‌ಎಸ್‌ಎನ್ ಅಧ್ಯಕ್ಷ ಅಂಜನಾಪುರ ವಾಸು, ಶ್ರೀನಿವಾಸಮೂರ್ತಿ, ಮುಖಂಡರಾದ ಗುನ್ನೂರು ದೇವರಾಜು, ನಂದೀಶ್‌ಗೌಡ, ಜಿ.ಟಿ. ಕೃಷ್ಣ, ಗೋವಿಂದರಾಜು, ದೇವುರಾವ್ ಜಾಧವ್, ಶಿವಲಿಂಗಪ್ರಸಾದ್, ನಾಗರಾಜ್‌ಸಿಂಗ್ ಬಾಬು, ತಮ್ಮಣ್ಣ, ರೇಣುಕಾಪ್ರಸಾದ್, ಜವರಾಯಿಗೌಡ, ಜಿ.ವಿ. ನಾಗರಾಜು, ಸುರೇಶ್, ಜಗದೀಶ್, ಕುಮಾರ್, ತಿಮ್ಮಯ್ಯ ಇದ್ದರು.