ರಾಜಬೀದಿಗಳಲ್ಲಿ ರಾಯರ ಭವ್ಯ ಮೆರವಣಿಗೆ

IMG-20250813-WA0103
Published on

ಅರಸೀಕೆರೆ : ನಗರದ ಶಾನುಭೋಗರ ಬೀದಿ ಬದಿಗೆ ಹೊಂದಿಕೊಂಡಂತಿರುವ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ 354ನೇ ಆರಾಧನಾ ಮಹೋತ್ಸವ ಸಂಪನ್ನಗೊಂಡಿತು.

ಪ್ರಾತಃಕಾಲದಿಂದಲೇ ನಿರ್ಮಾಲ್ಯ ಉಷಃಕಾಲ ಪೂಜೆ, 108 ಕಳಸ ಕ್ಷೀರಾಭಿಷೇಕ, ಫಲ ಪಂಚಾಮೃತಾಭಿಷೇಕ, ತುಳಸಿ ಪೂಜೆ , ರಾಯರ ಪಾದಪೂಜೆ, ಕನಕಾಭಿಷೇಕ, ಅಲಂಕಾರ ಸೇವೆ, ನೈವೇದ್ಯ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು. ಉತ್ತರಾಧನೆ ನಿಮಿತ್ತ ನಗರದ ವಿವಿಧ ರಾಜಬೀದಿಗಳಲ್ಲಿ ಭವ್ಯ ಮೆರವಣಿಗೆ ನೆರವೇರಿತು. ವಿವಿಧ ಹೂವುಗಳಿಂದ ಅಲಂಕೃತವಾದ ರಥದಲ್ಲಿ ರಜತ ಮಂಟಪದಲ್ಲಿ ಆಸೀನರಾಗಿದ್ದ ಗುರು ರಾಘವೇಂದ್ರ ಸ್ವಾಮಿಯವರ ದರ್ಶನ ಮಾಡಿದ ನಾಗರಿಕರು ಪ್ರಾರ್ಥನೆ ಸಲ್ಲಿಸಿದರು.

ಕುಂದಾಪುರ ತಾಲೂಕಿನ ಕೋಟೇಶ್ವರ ಶ್ರೀ ನೀರೆಶಾಲ್ಯ ಮಹಾಲಿಂಗೇಶ್ವರ ದೇವಸ್ಥಾನ ತಂಡದ ಚಂಡೆ ಮೇಳ ಮತ್ತು ಕೇಶವ ತಂಡದ ಮಂಗಳವಾದ್ಯ ಭಕ್ತರ ಗಮನ ಸೆಳೆಯಿತು. ಶ್ರೀಮಠದಿಂದ ಪ್ರಾರಂಭವಾದ ಮೆರವಣಿಗೆ ಪೇಟೇಬೀದಿ, ಬಿ.ಎಚ್.ರಸ್ತೆ ಮತ್ತು ವಾಚನಾಲಯ ರಸ್ತೆ ಮೂಲಕ ಶ್ರೀಮಠದಲ್ಲಿ ಅಂತ್ಯಗೊಂಡಿತು. ಸಂಜೆ 5 ಗಂಟೆಗೆ ಸಂಗೀತಾ, ಯೋಗೇಶ್ ಮತ್ತು ತಂಡದಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು.

ಅರ್ಚಕರಾದ ನರಸಿಂಹಾಚಾರ್ಯ ನಾಗರಹಳ್ಳಿ, ಪ್ರದೀಪಾಚಾರ್ ತಂಡದಿಂದ ಪೂಜಾ ಕೈಂಕರ್ಯ ನೇರವೇರಿದವು. ಶ್ರೀಮಠದ ವ್ಯವಸ್ಥಾಪಕ ಸತ್ಯನಾರಾಯಣ ದೇಸಾಯಿ,

ಗೋವಿಂದ ರಾವ್, ಮಂಜುನಾಥ ರಾವ್, ಮುರಳಿ, ರವಿ ಭಟ್ ಹೆಗ್ಗಡೆ ಮತ್ತು ಸ್ವಯಂ ಸೇವಕರು, ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net