ವಿಜೃಂಭಣೆಯ ಮಹದೇವ ತಾತ ಆರಾಧನಾ ಮಹೋತ್ಸವ

ಸಂಗಮ ಕ್ಷೇತ್ರದಲ್ಲಿ ಶ್ರೀ ಮಹದೇವ ತಾತ ಅವರ ರಥವನ್ನು ಮೆರವಣಿಗೆ ಮಾಡಲಾಯಿತು.
ಸಂಗಮ ಕ್ಷೇತ್ರದಲ್ಲಿ ಶ್ರೀ ಮಹದೇವ ತಾತ ಅವರ ರಥವನ್ನು ಮೆರವಣಿಗೆ ಮಾಡಲಾಯಿತು.
Published on

ಕಪ್ಪಸೋಗೆ: ಧಾರ್ಮಿಕ ಕ್ಷೇತ್ರ ಸಂಗಮ ಕ್ಷೇತ್ರದಲ್ಲಿ ಲಿಂಗೈಕ್ಯ ಸದ್ಗುರು ಶ್ರೀ ಮಹದೇವ ತಾತ ಅವರ ಎಂಟನೇ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

ಶುಕ್ರವಾರ ಮುಂಜಾನೆ 3 ಗಂಟೆಗೆ ಮಹದೇವ ತಾತ ಅವರ ಗದ್ದುಗೆಯನ್ನು ವಿವಿಧ ಹೂಗಳಿಂದ ಅಲಂಕರಿಸಿ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾ ಮಂಗಳಾರತಿ ಸೇರಿದಂತೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ನಂತರ 6 ಗಂಟೆಗೆ ಮಾದನಹಳ್ಳಿ ಉಕ್ಕಿನ ಕಂತೆ ಮಠಾಧ್ಯಕ್ಷ ಶ್ರೀ ಸಾಂಬ ಸದಾಶಿವ ಸ್ವಾಮೀಜಿ ಅವರ ಪಾದಪೂಜೆ ನೆರವೇರಿಸಲಾಯಿತು.

ಕಾರ್ಯ ಸ್ವಾಮಿ ಮಠಾಧ್ಯಕ್ಷ ಶ್ರೀಮಹೇಶ್ವರ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು. ನಂತರ 9 ಗಂಟೆಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಹದೇವ ತಾತ ಅವರ ಮೂರ್ತಿ ಇರಿಸಿದ್ದ ರಥವನ್ನು ಮೆರವಣಿಗೆ ಮಾಡಲಾಯಿತು. ನಂದಿ ಕಂಬ ಕುಣಿತ, ನಂದಿಧ್ವಜ, ವೀರಗಾಸೆ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಮತ್ತು ಮಂಗಳವಾದ್ಯ ಮೆರುಗು ನಿಡಿತು.

ಸಂಗಮ ಕ್ಷೇತ್ರಕ್ಕೆ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ತಂಡೋಪ ತಂಡವಾಗಿ ಆಗಮಿಸಿದ್ದರು. ಗುರುವಾರ ರಾಜಸುಯಾಗ ಅಥವಾ ಜರಾಸಂಧನ ವಧೆ ಎಂಬ ಪೌರಾಣಿಕ ನಾಟಕ ಪ್ರದರ್ಶನಗೊಂಡಿತು. ಭಕ್ತರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ವತಿಯಿಂದ ಹುಲ್ಲಹಳ್ಳಿಯಿಂದ ಸಂಗಮ ಕ್ಷೇತ್ರಕ್ಕೆ ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು. ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net