

ಎನ್.ಆರ್.ಪುರ: ಬಸ್ತಿಮಠದಲ್ಲಿ ಶ್ರೀಲಕ್ಷ್ಮೀಸೇನಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯದಲ್ಲಿ ಭಗವಾನ್ ಶ್ರೀ 1008 ಚಂದ್ರಪ್ರಭಸ್ವಾಮಿ ಹಾಗೂ ಮಹಾ ಮಾತೆ ಶ್ರೀಜ್ವಾಲಾಮಾಲಿನಿ ಅಮ್ಮನವರ ವಾರ್ಷಿಕ ಮಹಾರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ರಥೋತ್ಸವದ ಅಂಗವಾಗಿ ಚಂದ್ರನಾಥ ಸ್ವಾಮಿ ಬಸದಿಯಲ್ಲಿ 1008 ಕಲಶಾಭಿಷೇಕ, ವಿವಿಧ 8 ಬಗೆಯ ದೃವ್ಯ ಅಭಿಷೇಕ, ವಿಶೇಷ ಪೂಜೆ, ಆರಾಧನೆ ನಡೆಯಿತು. ಭಗವಾನ್ ಶಾಂತನಾಥ ಸನ್ನಿಧಿಯಲ್ಲಿ 108 ಕಲಾಶಾಭಿಷೇಕ ನಡೆಯಿತು. ಬಾಹುಬಲಿ ಬಸದಿಯಲ್ಲಿ ನಿತ್ಯ ವಿಧಿ ಸಹಿತ ಕಲಾಶಾಭಿಷೇಕ, ಜ್ವಾಲಾಮಾಲಿನಿ ಬಸದಿಯಲ್ಲಿ ಪಂಚಾಮೃತ ಅಭಿಷೇಕ, ದೃವ್ಯ ಅಭಿಷೇಕ, ವಿಶೇಷ ಅಲಂಕಾರ, ಕುಂಕುಮಾರ್ಚನೆ, ವಿಶೇಷ ಪೂಜೆ, ಪ್ರಸಾದ ಬೇಡಿಕೆ ಹಾಗೂ ಶ್ರೀಬಲಿ ಉತ್ಸವ ನಡೆಯಿತು.
ಮಧ್ಯಾಹ್ನ ನಿತ್ಯ ವಿಧಿಸಹಿತ ಮಹಾ ನೈವೇದ್ಯಪೂಜೆ, ರಥಾರೋಹಣಕ್ಕೆ ಜ್ವಾಲಾಮಾಲಿನಿ ಅಮ್ಮನವರ ಸನ್ನಿಧಿಯಲ್ಲಿ ಪ್ರಸಾದ ಬೇಡಿಕೆ, ಮಠದ ಆವರಣದಲ್ಲಿ ರಥಾರೋಹಣ ನೆರವೇರಿತು. ಸಂಜೆ ರಾಜಬೀದಿಯಲ್ಲಿ ಮಂಗಳವಾದ್ಯ, ಚಂಡೆ, ಕೀಲು ಕುದುರೆಯೊಂದಿಗೆ ಭಗವಾನ್ ಶ್ರೀ1008 ಚಂದ್ರಪ್ರಭ ಸ್ವಾಮಿ ಹಾಗೂ ಶ್ರೀ ಜ್ವಾಲಾಮಾಲಿನಿ ಅಮ್ಮನವರ ಮಹಾ ರಥೋತ್ಸವ ನಡೆಯಿತು.
ರಥೋತ್ಸವದಲ್ಲಿ ಕನಕಗಿರಿ ಪೀಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ,ಆರತಿಪುರದ ಸಿದ್ದಾಂತ ಕೀರ್ತಿ ಭಟ್ಟಾರಕ ಸ್ವಾಮೀಜಿ, ಕಂಬದಹಳ್ಳಿಯ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿಗಳು ಭಾಗವಹಿಸಿದ್ದರು.