

ಅರಸೀಕೆರೆ ಗ್ರಾಮಾಂತರ: ಸಹಸ್ರಾರು ಭಕ್ತರ ಗೋವಿಂದ ನಾಮಸ್ಮರಣೆಯೊಂದಿಗೆ ರಾಜ್ಯದ ತಿರುಪತಿ ಎಂದೇ ಪ್ರಸಿದ್ಧಿಯಾಗಿರುವ ತಾಲೂಕಿನ ಸುಕ್ಷೇತ್ರ ಮಾಲೇಕಲ್ನಲ್ಲಿ ಅಮರಗಿರಿಯ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ಮಹಾ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಜಾತ್ರಾ ಮಹೋತ್ಸವ ಅಂಗವಾಗಿ ಮುಂಜಾನೆಯಿಂದಲೇ ದೇವಾಲಯಕ್ಕೆ ಆಗಮಿಸಿದ ಸಹಸ್ರಾರು ಭಕ್ತರು, ಸರತಿ ಸಾಲಿನಲ್ಲಿ ನಿಂತು ಬೆಟ್ಟದ ತಪ್ಪಲಿನಲ್ಲಿರುವ ಲಕ್ಷ್ಮೀ ಸಮೇತ ಗೋವಿಂದರಾಜಸ್ವಾಮಿಗೆ ಪೂಜೆ ಸಲ್ಲಿಸಿ ದರ್ಶನ ಮಾಡಿದರು. ಕೆಲವು ಭಕ್ತರು ಕಡಿದಾದ ಬೆಟ್ಟವನೇರಿ ಪದ್ಮಾವತಿ ಸಮೇತನಾದ ವೆಂಕಟರಮಣಸ್ವಾಮಿ ದರ್ಶನ ಮಾಡಿ ಪುನೀತರಾದರು. ಮಧ್ಯಾಹ್ನ ಶ್ರೀದೇವಿ-ಭೂದೇವಿ ಸಮೇತನಾದ ವೆಂಕಟರಮಣಸ್ವಾಮಿಯ ಉತ್ಸವ ಮೂರ್ತಿಯನ್ನು ಶೃಂಗಾರ ಮಾಡಿದ್ದ ರಥದ ಮೇಲೆ ಪ್ರತಿಷ್ಠಾಪಿಸಿ ಮಹಾ ಮಂಗಳಾರತಿ ಮಾಡುತ್ತಿದ್ದಂತೆ ಭಕ್ತರು ಗೋವಿಂದ ನಾಮ ಸ್ಮರಣೆಯೊಂದಿಗೆ ರಥವನ್ನು ಎಳೆದರು.
ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ, ತಹಸೀಲ್ದಾರ್ ಸಂತೋಷ್ ಕುಮಾರ್, ನಗರಸಭೆ ಅಧ್ಯಕ್ಷ ಎಂ ಸಮಿಉಲ್ಲಾ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅರುಣ್‌ಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ನಾನಾ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ದೇವಾಲಯದ ಅಭಿವೃದ್ಧಿ ಸಮಿತಿ ಸದಸ್ಯರು ಇದ್ದರು.
ಶ್ರೀದೇವಿ-ಭೂದೇವಿ ಸಮೇತನಾದ ಲಕ್ಷ್ಮೀವೆಂಕಟರಮಣ ಸ್ವಾಮಿಯ ರಥಕ್ಕೆ ಭಕ್ತರು ಬಾಳೆಹಣ್ಣು ಎಸೆಯುವ ಮೂಲಕ ಇಷ್ಟಾರ್ಥಗಳ ಈಡೇರಿಕೆಗೆ ಪ್ರಾರ್ಥನೆ ಸಲ್ಲಿಸಿದರು. ಜಾತ್ರೆ ಅಂಗವಾಗಿ ಲಕ್ಷ್ಮೀ ಹಾಗೂ ಗೋವಿಂದರಾಜಸ್ವಾಮಿ ಹಾಗೂ ಬೆಟ್ಟದ ಮೇಲೆ ನೆಲೆಸಿರುವ ಪದ್ಮಾವತಿ ಲಕ್ಷ್ಮಿ ವೆಂಕಟರಮಣ ಸ್ವಾಮಿಗೆ ಮಾಡಲಾಗಿದ್ದ ವಿಶೇಷ ಅಲಂಕಾರ ಭಕ್ತ ಕಣ್ಮನ ಸೆಳೆಯಿತು.
ಜಾತ್ರೋತ್ಸವ ಹಿನ್ನೆಲೆಯಲ್ಲಿ ಬೆಟ್ಟದ ಮೇಲಿನ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯ ಹಾಗೂ ತಪ್ಪಲಿನಲ್ಲಿರುವ ಗೋವಿಂದರಾಜಸ್ವಾಮಿ ದೇವಾಲಯಗಳನ್ನು ಸುಣ್ಣ ಬಣ್ಣಗಳಿಂದ ಸಿಂಗಾರ ಮಾಡಲಾಗಿತ್ತು. ದೇವಾಲಯದ ಆವರಣ ತಳಿರು-ತೋರಣಗಳಿಂದ ಕಂಗೊಳಿಸುತ್ತಿತ್ತು. ವೆಂಕಟರಮಣ ಸ್ವಾಮಿ ತನ್ನ ಪತ್ನಿಯರಾದ ಶ್ರೀದೇವಿ-ಭೂದೇವಿ ಸಮೇತ ವಿವಿಧ ಚಿನ್ನಾಭರಣಗಳ ಅಲಂಕಾರದೊಂದಿಗೆ ಭಕ್ತರಿಗೆ ದರ್ಶನ ಕರುಣಿಸಿದ್ದು ವಿಶೇಷವಾಗಿತ್ತು.
ರಥೋತ್ಸವದ ಸಂದರ್ಭದಲ್ಲಿ ತಾಪಂ ಇಒ ಸತೀಶ್, ಉಪ ತಹಸೀಲ್ದಾರ್ ಶಿವಶಂಕರ್, ದೇವಾಲಯದ ಅಭಿವೃದ್ಧಿ ಸಮಿತಿಯ ಟಿ.ಆರ್.ನಾಗರಾಜ್, ತಿರುಪತಿ ಚಂದ್ರು, ಎಸ್‌ಬಿಟಿ ಬಾಬು, ಅರುಣ್ಕುಮಾರ್, ಕರವೇ ತಾಲೂಕು ಅಧ್ಯಕ್ಷ ಕಿರಣ್ಕುಮಾರ್, ನಗರ ಅಧ್ಯಕ್ಷ ಸಂತೋಷ್, ಹೇಮಂತ್‌ಕುಮಾರ್, ತುಳಸಿದಾಸ್ ಮೊದಲಾದವರಿದ್ದರು.
ಯಾವುದೇ ಅಹಿತರಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಗರದಿಂದ 4 ಕಿಮೀ ದೂರದಲ್ಲಿರುವ ಮಾಲೇಕಲ್ ತಿರುಪತಿಗೆ ಭಕ್ತರು ಹೋಗಿ ಬರಲು ಅನುಕೂಲವಾಗುವಂತೆ ರಾಜ್ಯ ಸಾರಿಗೆ ಸಂಸ್ಥೆಯಿಂದ ಹೆಚ್ಚುವರಿ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ದೇವಾಂಗ, ಈಡಿಗ ಹಾಗೂ ಬ್ರಾಹ್ಮಣ ಸಮಾಜದವರು ಭಕ್ತರಿಗೆ ಸಾಮೂಹಿಕ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿದ್ದರು.