

ಬಾದಾಮಿ : ಉತ್ತರ ಕರ್ನಾಟಕದ ಪುಣ್ಯ ಭೂಮಿ ಮಲಪ್ರಭಾ ನದಿ ತಟದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಮದ್ವೀರಶೈವ ಶಿವಯೋಗ ಮಂದಿರ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ವೀರಶೈವ ಲಿಂಗಾಯತ ಸಮಾಜಕ್ಕೆ ಮರು ಹುಟ್ಟು ನೀಡಿ ಮುನ್ನುಡಿ ಬರೆದಿದ್ದ ಕಾರಣಿಕ ಯುಗ ಪುರುಷ ಲಿಂ. ಹಾನಗಲ್ ಶ್ರೀ ಗುರು ಕುಮಾರ ಶಿವಯೋಗಿಗಳ 95ನೇ ಪುಣ್ಯ ಸ್ಮರಣೋತ್ಸವ ಹಾಗೂ 115ನೇ ಜಾತ್ರಾ ಮಹೋತ್ಸವದ ಮಹಾರಥೋತ್ಸವವು ಗುರುವಾರ ಸಂಜೆ ಸಂಭ್ರಮದಿಂದ ಜರುಗಿತು.
ಸಂಸ್ಥೆಯ ಅಧ್ಯಕ್ಷ ಗುರುಸಿದ್ದರಾಜಯೋಗೀಂದರ ಮಹಾಸ್ವಾಮಿಗಳು, ಉಪಾಧ್ಯಕ್ಷ ಸದಾಶಿವ ಮಹಾಸ್ವಾಮಿಗಳು, ಹಾಳಕೇರೆ ಅನ್ನದಾನ ಮಹಾಸ್ವಾಮಿಗಳ ನೇತೃತ್ವದಲ್ಲಿ ಮತ್ತು ನಾಡಿನ ಹರ ಗುರು ಚರಮೂರ್ತಿಗಳು ರಥಕ್ಕೆ ಪುಷ್ಪ ಸಮರ್ಪಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ನೆರೆದಿದ್ದ ಭಕ್ತ ಸಮೂಹ ಕುಮಾರ ಶಿವಯೋಗಿಗಳಿಗೆ ಜೈಕಾರ ಹಾಕುತ್ತ, ಹೂವು, ಹಣ್ಣು ಅರ್ಪಿಸಿ ಧನ್ಯತಾ ಭಾವವನ್ನು ಮೆರೆದರು.
ಏಷ್ಯಾ ಖಂಡದಲ್ಲಿಯೇ ಅತಿ ಎತ್ತರದ 65 ಅಡಿ ಬೃಹತ್ ರಥವೆಂದು ಧಾರ್ಮಿಕ ಕ್ಷೇತ್ರದಲ್ಲಿ ಖ್ಯಾತಿ ಪಡೆದಿರುವ ಹಾನಗಲ್ಲ ಕುಮಾರ ಶ್ರೀಗಳ ರಥೋತ್ಸವವು ಸಹಸ್ರಾರು ಭಕ್ತರ ಮಧ್ಯೆ ಕುಮಾರೇಶ್ವರ ಮಹಾರಾಜಕಿ ಜೈ ಎಂದು ಜಯ ಘೋಷಗಳೊಂದಿಗೆ ರಥವನ್ನು ಎಳೆದು ಸಂಭ್ರಮಿಸಿದರು.
ಜಾತ್ರೆ ಅಂಗವಾಗಿ ಸಹಸ್ರಾರು ಭಕ್ತರು ಹಾನಗಲ್ ಗುರು ಕುಮಾರೇಶ್ವರ ಶಿವಯೋಗಿಗಳ ಹಾಗೂ ಸದಾಶಿವ ಸ್ವಾಮಿಗಳ ಕತೃ ಗದ್ದುಗೆಗೆ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು. ಕತೃ ಗದ್ದುಗೆಗಳ ಮತ್ತು ಸುತ್ತ ಮುತ್ತಲೂ ವಿಶೇಷ ದೀಪಾಲಂಕಾರ ಮತ್ತು ಪುಷ್ಪಾಲಂಕಾರ ಮಾಡಿದ್ದು ವಿಶೇಷವಾಗಿತ್ತು. ಅನ್ನ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.
ಸಂಸ್ಥೆಯ ಅಧ್ತಕ್ಷ ಗುರುಸಿದ್ದರಾಜಯೋಗೀಂದ್ರ ಮಹಾಸ್ವಾಮಿಗಳು, ಉಪಾಧ್ಯಕ್ಷರಾದ ಸದಾಶಿವ ಮಹಾಸ್ವಾಮಿಗಳು ಹಾಗೂ ಹಾಳಕೆರೆ ಅನ್ನದಾನ ಮಹಾಸ್ವಾಮಿಗಳು ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಬಾಲೇಹೊಸೂರ ದಿಂಗಾಲೇಶ್ವರ ಸ್ವಾಮಿಗಳು, ಗದುಗಿನ ವೀರಶೈವ ಪುಣ್ಯಾಶ್ರಮದ ಕಲ್ಲಯ್ಯಜ್ಜರು, ಹಾವೇರಿ ಪಟ್ಟದೇವರು, ಅಳಗುಂಡಗಿ ಶ್ರೀಗಳು, ರಾಮದುರ್ಗ ಶ್ರೀಗಳು, ನವಲಗುಂದ ಶ್ರೀಗಳು, ತೊರಗಲ್ಲ ಪಟ್ಟದೇವರು,ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಶಿವಾನಂದ ಕೌಜಲಗಿ, ರಾಮನಗೌಡ ಪಾಟೀಲ, ಕುಮಾರಗೌಡ ಜನಾಲಿ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಭೀಮಸೇನ ಚಿಮ್ಮನಕಟ್ಟಿ, ಎಂ.ಡಿ.ಯಲಿಗಾರ, ಸಿದ್ಧನಗೌಡ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.