

ಕಲಾದಗಿ: ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಸ್ಥಳಿಯ ಮಾದರ ಕಾಲನಿಯಲ್ಲಿರುವ ಹೂವಿನಮ್ಮ ದೇವಿ ಹಾಗೂ ನಡಿಗೇರಮ್ಮ ದೇವಿಯರ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದಲ್ಲಿ ಸೋಮವಾರ ಹೂವಿನಮ್ಮ ದೇವಿ ಹಾಗು ನಡಿಗೇರಮ್ಮ ದೇವಿಯರ ಪಲ್ಲಕ್ಕಿ ಮಹೋತ್ಸವ ಸಡಗರ ಸಂಭ್ರಮದಿಂದ ಜರುಗಿತು.
ಡೊಳ್ಳು, ಕರಡಿ ಮಜಲು ಮುಂತಾದ ಮಂಗಳವಾದ್ಯಗಳೊಂದಿಗೆ ಕಾಲೋನಿಯ ದೇವಾಲಯದಿಂದ ಹೊರಟ ಪಲ್ಲಕ್ಕಿ ಮಹೋತ್ಸವ ಗ್ರಾಮದ ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಕೊಬ್ರೀ ವೃತ್ತ, ಬಸವಣ್ಣದೇವರ ಗುಡಿ, ಹೊಸೂರ ಚೌಕ್ ಸೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಊರ ಹುನುಮಂತದೇವರ ಗುಡಿಯನ್ನು ತಲುಪಿತು. ಮಾರ್ಗದುದ್ದಕ್ಕೂ ಗ್ರಾಮಸ್ಥರು ದೇವಿಯ ಪಲ್ಲಕ್ಕಿಯ ಮುಂದೆ ನೀರು ಹಾಕಿ, ಪೂಜೆ ಸಲ್ಲಿಸುವುದರ ಮೂಲಕ ಭಕ್ತಿ ಸಮರ್ಪಣೆ ಮಾಡಿದರು.
ಮೆರವಣಿಗೆಯೊಂದಿಗೆ ಶ್ರದ್ಧಾ ಭಕ್ತಿಯಿಂದ ತಲೆಯ ಮೇಲೆ ಹೊತ್ತುಕೊಂಡು ಬಂದಿದ್ದ ‘ಹನುಮಂತದೇವರ ಪಾದರಕ್ಷೆ’ಯನ್ನು ಊರ ಹನುಮಂತದೇವರಿಗೆ ಸಮರ್ಪಿಸಲಾಯಿತು. ಮೆರವಣಿಗೆಯ ಉದ್ದಕ್ಕೂ ಭಕ್ತರು ಭಾರಿ ಪ್ರಮಾಣದಲ್ಲಿ ಭಂಡಾರವನ್ನು ಪರಸ್ಪರ ಹಚ್ಚಿಕೊಳ್ಳುತ ಸಾಗಿದ್ದು ವಿಶೇಷವಾಗಿತ್ತು.
ಜಾತ್ರಾಮಹೋತ್ಸವದ ಎರಡನೆಯ ದಿನವಾದ ಮೇ 13 ರಂದು ಬೆಳಗ್ಗೆ 7 ಗಂಟೆಗೆ ಶ್ರೀದೇವಿಯರ ಪಲ್ಲಕ್ಕಿ ಮಹೋತ್ಸವದೊಂದಿಗೆ ನದಿಗೆ ತೆರಳಿ ಮಂಗಲಸ್ನಾನ ಸಮರ್ಪಣೆ, 8 ಗಂಟೆಗೆ ಅಗ್ನಿಹಾಯುವುದು ನಡೆಯಲಿದೆ.