ಹಿಂಡಿಮಾರಮ್ಮನ ಕೊಂಡೋತ್ಸವ ಅದ್ದೂರಿ

Oplus_0
Oplus_0
Published on

ಯಳಂದೂರು: ತಾಲೂಕಿನ ಅಗರ-ಮಾಂಬಳ್ಳಿ ಗ್ರಾಮದಲ್ಲಿ ಶ್ರೀ ಹಿಂಡಿಮಾರಮ್ಮನ ಕೊಂಡೋತ್ಸವ ಗುರುವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ನೆರವೇರಿತು.

ಬೆಳಗ್ಗೆಯಿಂದಲೇ ಹಿಂಡಿ ಮಾರಮ್ಮದೇವಿಗೆ ವಿಶೇಷ ಅಲಂಕಾರ, ಹೋಮ, ಹವನಗಳನ್ನು ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು. ಸಂಜೆ ದೇವಿಯ ಉತ್ಸವ ಮೂರ್ತಿಯೊಂದಿಗೆ ಅರ್ಚಕರು ಗ್ರಾಮದಲ್ಲಿ ಮೆರವಣಿಗೆ ಮಾಡಿಕೊಂಡು ಅಗರ ಗ್ರಾಮದಲ್ಲಿರುವ ಹಾಕಿದ್ದ ಕೊಂಡದ ಸ್ಥಳಕ್ಕೆ ಹೋಗಿ ಕೊಂಡವನ್ನು ಹಾಯ್ದರು. ನಂತರ ಹರಕೆ ಹೊತ್ತು ಬಂದಿದ್ದ ನೂರಾರು ಭಕ್ತರು ಕೊಂಡವನ್ನು ಹಾಯ್ದರು. ಜತೆಗೆ ಹರಕೆ ಹೊತ್ತಿದ್ದ ಭಕ್ತರು ಸಹ ಕೊಂಡ ಹಾಯುವ ಮೂಲಕ ಭಕ್ತಿಭಾವ ಮೆರೆದರು.

ಯಳಂದೂರು ತಾಲೂಕು ಹಾಗೂ ರಾಜ್ಯದ ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಂದ ಸಾವಿರಾರು ಜನರು ಆಗಮಿಸಿ ಕೊಂಡೋತ್ಸವವನ್ನು ಕಣ್ತುಂಬಿಕೊಂಡರು. ದೀಪಾವಳಿ ಹಬ್ಬದಂದು ಆರಂಭವಾಗುವ ತಾಲೂಕಿನ ಅಗರ- ಮಾಂಬಳ್ಳಿ ಗ್ರಾಮದ ಹಿಂಡಿಮಾರಮ್ಮನ ದೇವರ ಹಬ್ಬ 4 ದಿನಗಳ ಕಾಲ ನಡೆಯುತ್ತದೆ. ಅಗರ ಮಾಂಬಳ್ಳಿ, ಕಿನಕಹಳ್ಳಿ, ಕಟ್ನವಾಡಿ, ಬಸವಾಪುರ, ಬನ್ನಿಸಾರಿಗೆ, ಚಿಕ್ಕ ಉಪ್ಪಾರ ಬೀದಿ ಗ್ರಾಮಗಳಲ್ಲಿ ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.

ಬಾಯಿಗೆ ಬೀಗ ಹಾಕಿಕೊಂಡು ಹರಕೆ ತೀರಿಸಿದ ಭಕ್ತರು: ಹಿಂಡಿ ಮಾರಮ್ಮನ ಕೊಂಡೋತ್ಸವದಲ್ಲಿ ಹರಕೆ ಹೊತ್ತಿದ್ದ ನೂರಾರು ಭಕ್ತರು ಬಾಯಿಗೆ ಬೀಗ ಹಾಕಿಕೊಂಡು ಹರಕೆ ತೀರಿಸುವ ಜತೆಗೆ ಕೊಂಡವನ್ನು ಹಾಯ್ದರು. ಹರಕೆ ಹೊತ್ತ ಭಕ್ತರು ತಮ್ಮ ಬಾಯಿಗೆ ಅರ್ಚಕರಿಂದ ಬೀಗ ಹಾಕಿಸಿಕೊಂಡ ಬಳಿಕ ಕೊಂಡೋತ್ಸವವು ನಡೆಯುವ ಸ್ಥಳದವರೆಗೆ ಮಾರಮ್ಮ ದೇವಿಯ ಉತ್ಸವ ಮೂರ್ತಿ ಜತೆಯೇ ಆಗಮಿಸಿ ಕೊಂಡವನ್ನು ಹಾಯ್ದು ಹರಕೆ ತೀರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net