

ಗುಳೇದಗುಡ್ಡ: ನಗರ ವಾರ್ಷಿಕೋತ್ಸವ ಅಂಗವಾಗಿ ನಗರದಲ್ಲಿ ಭಾನುವಾರ ರಾಷ್ಟ್ರೀಯ ಸೇವಿಕಾ ಸಮಿತಿ ವತಿಯ ಸೇವಕಿಯರ ಆಕರ್ಷಕ ಪಥಸಂಚಲನ ನಡೆಯಿತು.
ನಗರದ ಸರಸ್ವತಿ ವಿದ್ಯಾಸಂಸ್ಥೆ ಆವರಣದಿಂದ ಮಧ್ಯಾಹ್ನ 4 ಗಂಟೆಗೆ ಆರಂಭಗೊಂಡ ಪಥಸಂಚಲನ ಪಟ್ಟಣದ ಕಂಠಿ ಪೇಟೆ, ಗಚ್ಚಿನಕಟ್ಟಿ, ಚೌಬಜಾರ, ಅರಳಿಕಟ್ಟಿ, ಗುಗ್ಗರಿ ಪೇಟೆ, ನೀಲಕಂಠೇಶ್ವರ ದೇವಸ್ಥಾನ, ಪವಾರ ಕ್ರಾಸ್, ಪುರಸಭೆ ಎದುರಿನ ರಸ್ತೆ ಮೂಲಕ ಹಾಯ್ದು ಮಾಹೇಶ್ವರಿ ವಿದ್ಯಾಸಂಸ್ಥೆ ಆವರಣ ತಲುಪಿತು.
ಪಥಸಂಚಲನದಲ್ಲಿ ಪಟ್ಟಣದ 200ಕ್ಕೂ ಅಧಿಕ ಸ್ವಯಂಸೇವಿಕಿಯರು ಘೋಷ ಸಹಿತ ಸಂಚಲನದಲ್ಲಿ ಭಾಗವಹಿಸಿದ್ದರು.
ಪಥಸಂಚಲ ಸಾಗುವ ಮಾರ್ಗದಲ್ಲಿ ಸಾರ್ವಜನಿಕರು ರಂಗೋಲಿ, ಹೂವಿನ ಅಲಂಕಾರ ಮಾಡಿ ಸ್ವಾಗತಿಸಿದರು. ಸ್ವಯಂ ಸೇವಕಿಯರ ಮೇಲೆ ಹೂಮಳೆಗರೆದು ಹರ್ಷವ್ಯಕ್ತಪಡಿಸಿದರು.
ಅಲ್ಲಲ್ಲಿ ಶಿವಾಜಿ, ಸುಭಾಷಚಂದ್ರ ಭೋಸ್, ವಿವೇಕಾನಂದ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ, ಭಗತ್‌ಸಿಂಗ್, ಶ್ರೀರಾಮ, ಕಿತ್ತೂರುರಾಣಿ ಚನ್ನಮ್ಮ ಸೇರಿ ವಿವಿಧ ರಾಷ್ಟ್ರನಾಯಕರ ವೇಷಧಾರಿ ಮಕ್ಕಳು ಪಥ ಸಂಚಲನ ಸ್ವಾಗತಿಸಿದರು.