

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿ ಖಂಡನೀಯ. ಹನುಮ ಜನಿಸಿದ ನಾಡಲ್ಲಿ ತ್ರಿಶೂಲ, ತಿಲಕದ ಆಕಾರವಿರುವ ವಿದ್ಯುತ್ ದೀಪಗಳು ಧಾರ್ಮಿಕ ಸೌಹಾರ್ದತೆಗೆ ಧಕ್ಕೆಯೆಂದು ತೆರವುಗೊಳಿಸಲು ಸರ್ಕಾರವು ತಹಸೀಲ್ದಾರ ಮೂಲಕ ಸೂಚಿಸಿರುವುದು ಹಿಂದೂ ವಿರೋಧಿ ಕ್ರಮವಾಗಿದೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಕಿಡಿಕಾರಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಹನುಮ ಜನಿಸಿದ ನಾಡಲ್ಲಿ ತ್ರಿಶೂಲ, ತಿಲಕದ ಆಕಾರವಿರುವ ವಿದ್ಯುತ್ ದೀಪಗಳು ಧಾರ್ಮಿಕ ಸೌಹಾರ್ದತೆಗೆ ಧಕ್ಕೆಯೆಂದು ತೆರವುಗೊಳಿಸಲು ಸರ್ಕಾರ ಮುಂದಾಗಿದೆ. ಮೈಸೂರು ದಸರಾ ದೀಪಾಲಂಕಾರದಲ್ಲಿ ಮಸೀದಿ ಮಾದರಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿಲ್ಲವೇ? ತಮ್ಮ ಬಾಂಧವರು ಮೈಕ್ ಹಿಡಿದು ಇಡೀ ಊರಿಗೇ ಕೇಳುವಂತೆ ಕೂಗಿ ತೊಂದರೆ ಕೊಡುವುದು ಸೌಹಾರ್ದತೆಗೆ ಧಕ್ಕೆ ತರುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಸರ್ಕಾರದ ಈ ನಡೆ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ತುಷ್ಟೀಕರಣದ ರಾಜಕೀಯಕ್ಕೆ ನಿದರ್ಶನವಾಗಿದೆ. ಸರ್ಕಾರ ಕೂಡಲೇ ಈ ಆದೇಶ ಹೊರಡಿಸಿದ ಗಂಗಾವತಿ ತಹಸೀಲ್ದಾರರನ್ನು ಅಮಾನತುಗೊಳಿಸಬೇಕು. ಒಂದು ವೇಳೆ ಅವರ ಆದೇಶದಂತೆ ವಿದ್ಯುತ್ ದೀಪಗಳನ್ನು ತೆರವುಗೊಳಿಸಿದ್ದೇ ಆದಲ್ಲಿ ಹಿಂದೂಗಳು ಒಟ್ಟಾಗಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.